ಹಾಕಿಕೊಂಡ ಚಪ್ಪಲಿ ಯಾವುದಾದರೂ ಕಾರಣಕ್ಕೆ ಕಳೆದುಹೋಗಬಹುದು. ಅದರಲ್ಲಿ ಏನಿದೆ ವಿಶೇಷ ಎನ್ನುವವರಿಗೆ ಹಿಂದೂ ಧರ್ಮಶಾಸ್ತ್ರ ಹೇಳುವುದೇ ಬೇರೆ. ಹಿಂದೂ ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ (ಪಾದರಕ್ಷೆ) ಕಳೆದುಕೊಳ್ಳುವುದು ಅಥವಾ ಕಳವಾಗುವುದು ಸಾಮಾನ್ಯವಾಗಿ ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದರೆ.. ಅಲ್ಲೊಂದು ನಂಬಿಕೆ ಇದೆ. ನೀವು ಬೇಕು ಬೇಕೆಂದೇ ದೇವಸ್ಥಾನಕ್ಕೆ ಚಪ್ಪಲಿ ಬಿಟ್ಟು ಬಂದರೆ.. ಏನಾಗಬಹುದು..
ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋಗುವುದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಭ ಸಂಕೇತ. ಇದು ಶನಿ ಗ್ರಹದೊಂದಿಗೆ ಸಂಬಂಧ ಹೊಂದಿದ್ದು, ಶನಿ ದೋಷ ನಿವಾರಣೆಗೆ ಸಹಕಾರಿ ಎನ್ನುವುದು ನಂಬಿಕೆ. ಚಪ್ಪಲಿ/ಪಾದರಕ್ಷೆಗಳು ಶನಿ ದೇವರನ್ನು ಸಂಕೇತಿಸುತ್ತವೆ ಎಂಬ ನಂಬಿಕೆ ಇದೆ. ಶನಿ ಪಾದಗಳಲ್ಲಿ (ಕಾಲುಗಳಲ್ಲಿ) ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಶನಿ ದೋಷ ಅಥವಾ ಶನಿಯ ಕೋಪ/ತೊಂದರೆ ಕಡಿಮೆಯಾಗುತ್ತದೆ ಎಂದು ಅರ್ಥ. ವಿಶೇಷವಾಗಿ ಶನಿವಾರದಂದು ಇದು ಆದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ.
ದೇವಾಲಯದಲ್ಲಿ ಚಪ್ಪಲಿಗಳು ಕಳೆದುಹೋದರೆ ಶನಿಯಿಂದ ಉಂಟಾಗುವ ತೊಂದರೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಜೊತೆ ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಅವುಗಳು ಕಳೆದುಹೋಗುವುದರಿಂದ ಆ ನಕಾರಾತ್ಮಕತೆ ಅಲ್ಲಿಯೇ ಉಳಿದು ಹೋಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ದಿನವಿಡೀ ಹೊರಗೆ ಓಡಾಡುವಾಗ ಪಾದರಕ್ಷೆಗಳು ಧೂಳು, ಕೊಳಕು ಮತ್ತು ನಕಾರಾತ್ಮಕ ಶಕ್ತಿಗಳನ್ನು ಹೊತ್ತುಕೊಂಡಿರುತ್ತವೆ ವಿಚಿತ್ರ ನಂಬಿಕೆಯೂ ಇದೆ.
ಕರ್ಮ ಶುದ್ಧಿ ಮತ್ತು ಹೊಸ ಆರಂಭ : ಚಪ್ಪಲಿಗಳು ನಮ್ಮ ಹಿಂದಿನ ಕರ್ಮ, ಸಂಕಷ್ಟಗಳು, ನಕಾರಾತ್ಮಕ ಶಕ್ತಿ ಅಥವಾ ಭೌತಿಕ ಆಸಕ್ತಿಗಳನ್ನು ಸಂಕೇತಿಸುತ್ತವೆ. ದೇವಸ್ಥಾನದಂತಹ ಪವಿತ್ರ ಸ್ಥಳದಲ್ಲಿ ಅದು ಕಳೆದುಹೋದರೆ ದೇವರು ನಮ್ಮ ಸಂಕಷ್ಟಗಳನ್ನು ತೆಗೆದುಕೊಂಡಿದ್ದಾರೆ ಎಂದು ನಂಬಲಾಗುತ್ತದೆ. ಇದು ಹೊಸ ಆರಂಭ, ಅದೃಷ್ಟದ ಬೆಳಕು, ಧನಾತ್ಮಕ ಬದಲಾವಣೆಗಳ ಸೂಚನೆ ಎಂದು ಪರಿಗಣಿಸಲಾಗುತ್ತದೆ.
ಶಾಸ್ತ್ರದಲ್ಲಿ ಮಂಗಳಕರ : ಹಲವು ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಮೂಲಗಳ ಪ್ರಕಾರ ಇದು ಶುಭ ಚಿಹ್ನೆಯಾಗಿದೆ. ದುಃಖಪಡುವ ಬದಲು ಸಂತೋಷಪಡಬೇಕು ಎಂದು ಸಲಹೆ ನೀಡಲಾಗುತ್ತದೆ.
ಚಪ್ಪಲಿಗಳು ಕಳೆದುಹೋದರೆ ಕೆಲವೊಮ್ಮೆ ಬರಿ ಪಾದಗಳಲ್ಲಿ ಮನೆಗೆ ಹೋಗಬೇಕಾಗುತ್ತದೆ. ಇದನ್ನು ಕೆಲವರು ಹಳೆಯ ದುಃಖ ಅಥವಾ ದುರಾದೃಷ್ಟ ದೂರಾಗಿ, ಹೊಸ ಅದೃಷ್ಟ ಮತ್ತು ಹೊಸ ಆರಂಭ ನಮ್ಮ ಜೀವನಕ್ಕೆ ಬರುತ್ತಿದೆ ಎಂಬ ಸಂಕೇತವಾಗಿ ನೋಡುತ್ತಾರೆ.ಅದಕ್ಕಾಗಿ ಕೆಲ ಕಡೆಗಳಲ್ಲಿ ಹಳೆಯ ಪಾದರಕ್ಷೆಗಳನ್ನು ಶನಿ ದೇವಾಲಯಗಳ ಬಳಿ ಬಿಡುವ ಪದ್ಧತಿಯೂ ಇದೆ.
ಆದರೆ ಹೀಗೆ ತಾವಾಗಿಯೇ ಬಿಟ್ಟು ಬಂದರೆ.. ದೇವಸ್ಥಾನದಲ್ಲಿಯೇ ಆಗಲಿ, ಎಲ್ಲಿಯೇ ಆಗಲಿ.. ಚಪ್ಪಲಿ ಬಿಟ್ಟು ಬಂದರೆ ಯಾವ ದೋಷವೂ ಹೋಗುವುದಿಲ್ಲ. ಯಾವ ಲಾಭವೂ ಇಲ್ಲ. ಚಪ್ಪಲಿಯ ಜೊತೆಗೆ ಅದಕ್ಕೆ ಕೊಟ್ಟ ಹಣ ಹೋಗುತ್ತದೆ. ನಷ್ಟವಾಗುತ್ತದೆ. ಜೊತೆಗೆ ಬರಿಗಾಲಿನಲ್ಲಿ ನಡೆಯುವ ಶಿಕ್ಷೆ ಎದುರಾಗುತ್ತದೆ. ಅಷ್ಟೇ ಹೊರತು, ಯಾವ ಲಾಭವೂ ಇಲ್ಲ.



