ತಮಿಳುನಾಡಿನಲ್ಲಿ ನಿಮ್ಮದೇ ಒಪ್ಪಂದದ ಸರಕಾರ ಇದೆಯಲ್ಲಾ, ಒಪ್ಪಿಸಿ ಅನುಮತಿ ತೆಗೆದುಕೊಂಡು ಬನ್ನಿ. 10 ನಿಮಿಷದಲ್ಲಿ ಪ್ರಧಾನಿ ಬಳಿ ನಾನು ಪರ್ಮಿಷನ್ ಕೊಡಿಸುತ್ತೇನೆ. ಇದು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಓಪನ್ ಚಾಲೆಂಜ್. ವಿಷಯ ಮೇಕೆದಾಟು ಯೋಜನೆ.
ಇದೇ ಮೇಕೆದಾಟು ಯೋಜನೆಯ ಪಾದಯಾತ್ರೆಗೆ ಬಂದಿಲ್ಲ ಎಂಬ ಕಾರಣಕ್ಕೆ ಚಿತ್ರರಂಗದವರ ನಟ್ಟು ಬೋಲ್ಟುಗಳನ್ನೆಲ್ಲ ಟೈಟ್ ಮಾಡಿಸುತ್ತೇನೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಕೌಂಟರ್ ನೀಡಿರುವ ಕುಮಾರಸ್ವಾಮಿ ʻʻಕಾಂಗ್ರೆಸ್ ನವರು ಮೊದಲೆಲ್ಲಾ ಮೇಕೆದಾಟು ಅಂತಿದ್ದರು. ಇದೀಗ ನಟ್ಟು ಬೋಲ್ಟು ಅಂತಿದ್ದಾರೆ. ನಿಮಗೆ 136 ಸೀಟ್ ಕೊಟ್ಟಿರೋದು ಯಾಕೆ ಮೇಕೆದಾಟು ಮಾಡಿದಿಕ್ಕಲ್ವಾ?
ತಮಿಳುನಾಡಿನಲ್ಲಿ ನಿಮ್ಮದೇ ಒಪ್ಪಂದದ ಸರಕಾರ ಇದೆಯಲ್ಲಾ, ಒಪ್ಪಿಸಿ ಅನುಮತಿ ತೆಗೆದುಕೊಂಡು ಬನ್ನಿ. 10 ನಿಮಿಷದಲ್ಲಿ ಪ್ರಧಾನಿ ಬಳಿ ನಾನು ಪರ್ಮಿಷನ್ ಕೊಡಿಸ್ತೀನಿʼʼ ಎಂದು ಚಾಲೆಂಜ್ ಮಾಡಿದ್ದಾರೆ. ಅಂದಹಾಗೆ ಮೇಕೆದಾಟು ಕುರಿತಂತೆ ರಾಜ್ಯ ಸರ್ಕಾರ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದೆಯೇ ಹೊರತು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ನೆಪ ಮಾತ್ರಕ್ಕಾದರೂ ಮಾತನಾಡಿಸುವ ಪ್ರಯತ್ನ ಮಾಡಿಲ್ಲ ಎನ್ನುವುದೂ ಅಷ್ಟೇ ಸತ್ಯ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮೇಕೆದಾಟು ಅಣೆಕಟ್ಟಿಗೆ ಅನುಮತಿಯನ್ನು ಒಂದೇ ದಿನದಲ್ಲಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರಲ್ಲ, ಮೊದಲು ಈ ಕೆಲಸವನ್ನು ಮಾಡಲಿ, ಆಮೇಲೆ ಮಾತಾಡಲಿ. ಅವರು ಅಧಿಕಾರದಲ್ಲಿ ಇದ್ದಾಗ ಎರಡನೇ ವಿಮಾನ ನಿಲ್ದಾಣ ಮಾಡಲು ಯಾವುದೇ ಹೆಜ್ಜೆಯಿಡಲಿಲ್ಲ. ನಾವು ಈಗ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳುತ್ತಲೆ ಬಂದಿದ್ದಾರೆ.
ವಾಸ್ತವ ಏನು..? ಎರಡು ಆಯ್ಕೆಗಳಿವೆ..!
ಮೊದಲ ಆಯ್ಕೆ :
ಎರಡು ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಮೊದಲು ಎರಡು ರಾಜ್ಯಗಳ ನಡುವೆ ವಿವಾದ ಇತ್ಯರ್ಥವಾಗಬೇಕು. ನೀರು ಹಂಚಿಕೆ ಕುರಿತಂತೆ ರಾಜ್ಯಗಳು ಒಪ್ಪಿಗೆ ನೀಡಿದ ನಂತರವಷ್ಟೇ ಪ್ರಪೋಸಲ್ ಸಿದ್ಧವಾಗುತ್ತದೆ. ಅಥವಾ ಏಕಪಕ್ಷೀಯವಾಗಿ ಕರ್ನಾಟಕ ಸರ್ಕಾರ ಪ್ರಪೋಸಲ್ ಸಿದ್ಧ ಮಾಡಿದರೂ, ಅದಕ್ಕೆ ಅನುಮತಿ ಸಿಕ್ಕುವುದಿಲ್ಲ. ಹಾಗೆ ಮಾಡಿದರೆ ಕೇವಲ ಪ್ರಚಾರದ ಗಿಮಿಕ್ ಆಗುತ್ತದೆ. ಈ ಮೇಕೆದಾಟು ಯೋಜನೆಗಾಗಿ ಮೊದಲು ತಮಿಳುನಾಡು ಸರ್ಕಾರದ ಜೊತೆ ಮಾತನಾಡಬೇಕು. ತಮಿಳುನಾಡು ಒಪ್ಪಿಗೆ ನೀಡಿದ ನಂತರವಷ್ಟೇ ಕಾರ್ಯಯೋಜನೆ ಸಿದ್ಧವಾಗುತ್ತದೆ. ಆನಂತರ ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ.
ಎರಡನೇ ಆಯ್ಕೆ :
ನಮ್ಮ ರಾಜ್ಯದಲ್ಲಿ ನೀರಿನ ಸಮಸ್ಯೆ ಇದೆ. ಮೇಕೆದಾಟು ಯೋಜನೆ ಅನಿವಾರ್ಯ. ತಮಿಳುನಾಡು ಸರ್ಕಾರವನ್ನು ಒಪ್ಪಿಸಲು ಪ್ರಯತ್ನಪಟ್ಟು ವಿಫಲವಾಗಿದ್ದೇವೆ. ನೀವು ಮಧ್ಯಸ್ಥಿಕೆ ವಹಿಸಿ ಯೋಜನೆಗೆ ಅವಕಾಶ ಮಾಡಿಕೊಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಬೇಕು. ಆಗ ತಮಿಳುನಾಡು ಸರ್ಕಾರವೂ ಕೇಂದ್ರದ ಮಧ್ಯಸ್ಥಿಕೆಗೆ ಒಪ್ಪಿದರೆ, ಸಂಧಾನ ನಡೆಸಬಹುದು. ಇಲ್ಲದೇ ಹೋದಲ್ಲಿ ಸುಪ್ರೀಂಕೋರ್ಟಿನಲ್ಲಿಯೇ ಇತ್ಯರ್ಥವಾಗಬೇಕಾಗುತ್ತದೆ. ಈಗ ಮಹದಾಯಿ ಹೋರಾಟ ನಡೆಯುತ್ತಿದೆಯಲ್ಲ.. ಅದೇ ಮಾದರಿಯಲ್ಲಿ ನಡೆಯುತ್ತಲೇ ಇರುತ್ತದೆ.



