ಬಿಜೆಪಿಯಿಂದ ಹೊರಹಾಕಲ್ಪಟ್ಟಿರುವ ಬಸನಗೌಡ ಪಾಟೀಲ ಯತ್ನಾಳ್, ಇದೀಗ ನಾನು ಬಿಜೆಪಿಗೆ ಬಂದರೂ ಬಂದೇನು.. ಎಂದು ಸುಳಿವು ಕೊಟ್ಟಿದ್ದಾರೆ. ಆದರೆ ಅವರದ್ದೊಂದೇ ಡಿಮ್ಯಾಂಡ್. ಬಿಜೆಪಿಯಿಂದ ಯಡಿಯೂರಪ್ಪ ಪುತ್ರ, ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಹೊರಹಾಕಬೇಕು. ಇದು ಸಾಧ್ಯವೇ.. ಎಂಬುದು ಈಗಿನ ಪ್ರಶ್ನೆ.
ನನ್ನನ್ನು ಪಕ್ಷದಿಂದ ಶಾಶ್ವತವಾಗಿ ಹೊರಹಾಕಲಾಗಿದೆ ಎಂದು ಹಲವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರಿಗೆ ಹುಚ್ಚು ಹಿಡಿದಿದ್ದು, ಎಲ್ಲರೂ ನನ್ನನ್ನು ಬಿಜೆಪಿ ಮತ್ತೆ ಕರೆಸಿಕೊಳ್ಳುವುದಿಲ್ಲ ಎಂದು ಭಾವಿಸಿದ್ದಾರೆ. ಆದರೆ ಮೇಲಿನವರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಾನು ರಾಜ್ಯದ ಯಾವ ನಾಯಕರ ಮೆನಗೂ ಹೋಗಿಲ್ಲ, ಹೋಗೋದು ಇಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬಿವೈ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದ ನಂತರವೇ ನನ್ನ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವುದಾಗಿ ಪಕ್ಷದ ವರಿಷ್ಠರು ಹೇಳಿದ್ದಾರೆ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ವಿಚಿತ್ರ ಎಂದರೆ ವಿಜಯೇಂದ್ರ ಬಣದ ಕೆಲವು ನಾಯಕರು, ಯತ್ನಾಳ್ ಬಣದಲ್ಲಿಯೇ ಇರುವ ನಾಯಕರೂ ಕೂಡಾ ಯತ್ನಾಳ್ ಅವರ ಈ ಮಾತು ಕೇಳಿ ಗಹಗಹಿಸಿ ನಕ್ಕಿದ್ದಾರಂತೆ. ಯತ್ನಾಳ್ ಅವರಿಗೆ ನಾಲಗೆ ಸರಿ ಇಲ್ಲ. ಅದಕ್ಕಾಗಿಯೇ ಪಕ್ಷದಿಂದ ಹೊರಹಾಕಲ್ಪಟ್ಟರು ಎನ್ನುವುದು ಕೇವಲ ಬಿಜೆಪಿಯವರ ಮಾತಲ್ಲ, ಕಾಂಗ್ರೆಸ್, ಜೆಡಿಎಸ್ ನಾಯಕರೂ ಇದೇ ಮಾತು ಹೇಳ್ತಾರೆ. ಕಾರ್ಯಕರ್ತರೂ ಇದೇ ಮಾತು ಹೇಳ್ತಾರೆ. ಈಗ ನೋಡಿದರೆ, ಹಾಲಿ ರಾಜ್ಯಾಧ್ಯಕ್ಷರನ್ನೇ ಪಕ್ಷದಿಂದ ಹೊರಹಾಕಿ ಯತ್ನಾಳ್ ಅವರನ್ನು ಸೇರಿಸಿಕೊಳ್ಳುತ್ತಾರೆ ಎಂಬ ಯತ್ನಾಳ್ ಅವರ ಹೇಳಿಕೆ ನಗೆಪಾಟಲಿಗೀಡಾಗಿದೆ.
ವಿಜಯೇಂದ್ರ ಅವರ ಬಗ್ಗೆ ಇತ್ತೀಚೆಗೆ ದೆಹಲಿ ಹೈಕಮಾಂಡ್ ಕೂಡಾ ಖುಷಿಯಾಗಿದೆ. ವಿಜಯೇಂದ್ರ ಅವರ ವಿರುದ್ಧ ತೊಡೆತಟ್ಟಿದ್ದ ಯತ್ನಾಳ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದ್ದರು. ಅಲ್ಲದೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸುವ ಸವಾಲ್ ಕೂಡ ಹಾಕಿದ್ದರು. ನಾನು ಕೂಡ ಆ ಸ್ಥಾನದ ಆಕಾಂಕ್ಷಿ ಎಂದಿದ್ದ ಯತ್ನಾಳ್ ಅವರನ್ನೇ ಪಕ್ಷ ದಿಢೀರನೆ ಉಚ್ಚಾಟಿಸಿತ್ತು. ಇದೀಗ ಮತ್ತೆ ಅವರು ವಿಜಯೇಂದ್ರ ಅವರ ಸ್ಥಾನದ ಬಗ್ಗೆ ಮಾತನಾಡಿದ್ದು, ಮತ್ತೆ ಬಿಜೆಪಿಗೆ ಮರಳುವ ಸೂಚನೆ ನೀಡಿದ್ದಾರೆ. ಆದರೆ ಹೈಕಮಾಂಡ್ ವಿಜಯೇಂದ್ರ ಅವರ ಬಗ್ಗೆ ಖುಷಿಯಾಗಿದೆ.
ಇತ್ತೀಚೆಗೆ ದೆಹಲಿಗೆ ಹೋಗಿದ್ದ ವಿಜಯೇಂದ್ರ ಅವರಿಗೆ ದೆಹಲಿ ನಾಯಕರು ಪಕ್ಷದ ಸಂಘಟನೆ ಸರಿಯಾದ ಹಾದಿಯಲ್ಲಿದೆ ಎಂದು ಬೆನ್ನು ತಟ್ಟಿ ಕಳುಹಿಸಿದ್ದಾರೆ. ದೆಹಲಿಗೆ ಹೋಗಿದ್ದ ವಿಜಯೇಂದ್ರ ಅವರಿಗೆ ದೆಹಲಿಯಲ್ಲಿ ಅಮಿತ್ ಶಾ ಮೊದಲಾದವರ ಭೇಟಿ ಸಾಧ್ಯವಾಗಿಲ್ಲ. ಪಹಲ್ಗಾಂ, ಆಪರೇಷನ್ ಸಿಂದೂರದಲ್ಲಿ ಬ್ಯುಸಿಯಾಗಿದ್ದ ಅಮಿತ್ ಶಾ, ಪಕ್ಷದ ಚಟುವಟಿಕೆಗಳಿಂದ ದೂರ ಇದ್ದರು. ಆದರೆ, ಉಳಿದವರು ಅಮಿತ್ ಶಾ ಸಂದೇಶವನ್ನು ವಿಜಯೇಂದ್ರಗೆ ತಲುಪಿಸಿದ್ದಾರೆ. ಇತ್ತ ನೋಡಿದರೆ ಯತ್ನಾಳ್, ವಿಜಯೇಂದ್ರ ಬಿಜೆಪಿ ಬಿಟ್ಟು ಹೋದಾಗ ನಾನು ಬಿಜೆಪಿಗೆ ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಸಂಥಿಂಗ್ ಈಸ್ ರಾಂಗ್.