ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ, ಬಿಜೆಪಿಯಿಂದ ಹೊರದಬ್ಬಿಸಿಕೊಂಡ ಬಸನಗೌಡ ಪಾಟೀಲ ಯತ್ನಾಳ್, ಈಗಲೂ ಬಾಯಿಗೆ ಬೀಗ ಹಾಕಿಕೊಂಡಿಲ್ಲ. ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆದೇ ಇದೆ. ಇನ್ನು ಬಿಜೆಪಿಯಲ್ಲಿಯೇ ಇರುವ ಯತ್ನಾಳ್ ಟೀಂ ಕಸರತ್ತು ನಡೆಸುತ್ತಲೇ ಇದೆ. ಅವರ ಉದ್ದೇಶ ಸ್ಪಷ್ಟ ಮತ್ತು ಸರಳ. ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಗಬಾರದು, ಎಂಬುದಷ್ಟೇ.
ಈ ಮಧ್ಯೆ ಯತ್ನಾಳ್ ಮತ್ತೊಮ್ಮೆ ಗುಡುಗಿದ್ದಾರೆ. ಮತ್ತೆ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದರೆ ರಾಜ್ಯದಲ್ಲಿ ಪಕ್ಷಕ್ಕೆ ಭವಿಷ್ಯವಿಲ್ಲ. ಬಿಜೆಪಿಗೆ ಪ್ರಾಮಾಣಿಕ ನಾಯಕತ್ವ ಬೇಕು ಎನ್ನುವುದು ಎಲ್ಲರ ಆಶಯ. ಹೈಕಮಾಂಡ್ ವಿಜಯೇಂದ್ರ ಅವರನ್ನು ತಲೆ ಮೇಲೆ ಕೂಡ್ರಿಸಿಕೊಂಡರೆ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತದೆ. ಅವರನ್ನು ಬದಲಾವಣೆ ಮಾಡುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ, ವಿಜಯೇಂದ್ರ ಹೊರತುಪಡಿಸಿ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ನಮ್ಮ ಸಮ್ಮತಿ ಇದೆ ಎಂದಿರುವ ಯತ್ನಾಳ್, ವಿಜಯೇಂದ್ರನೇ ಅಧ್ಯಕ್ಷನಾದರೆ.. ಹಿಂದುತ್ವದ ಆಧಾರದಲ್ಲಿ ಹೊಸ ಪಕ್ಷ ಕಟ್ಟುವ ರಣಕಹಳೆ ಮೊಳಗಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಅವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಮಾಡಿದರೆ ಹಿಂದುತ್ವದ ಆಧಾರದಲ್ಲಿ ಹೊಸಪಕ್ಷ ಕಟ್ಟುವುದು ಗ್ಯಾರಂಟಿ. ಶ್ರೀರಾಮುಲು ಅವರು ಒಡೆದ ಮನಸ್ಸುಗಳು ಒಂದಾಗುತ್ತವೆ ಎಂದಿದ್ದಾರೆ. ಆದರೆ, ಇದು ವಿಜಯೇಂದ್ರ ಇರುವಾಗ ಸಾಧ್ಯವಿಲ್ಲ. ಶ್ರೀರಾಮುಲು ಅವರು ವಿಜಯೇಂದ್ರ ಜತೆಗೆ ಏಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ ಎಂದಿರುವ ಯತ್ನಾಳ್ ಬಿಜೆಪಿಯಲ್ಲಿ ಇರುವವರು ಯಡಿಯೂರಪ್ಪ ಅವರನ್ನು ಅಪ್ಪಾಜಿ ಎನ್ನುತ್ತಿದ್ದರೆ ಮಾತ್ರ ಮಣೆ ಹಾಕಲಾಗುತ್ತದೆ. ಯಾರಿಗೋ ಹುಟ್ಟಿ, ಇನ್ಯಾರಿಗೋ ಅಪ್ಪಾಜಿ ಅನ್ನುವುದಕ್ಕೆ ಆಗುವುದಿಲ್ಲ ಎಂದು ಗುಡುಗಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಇರೋದು ಕರ್ನಾಟಕದಲ್ಲಿ ಮಾತ್ರ. ಇಲ್ಲಿ ರಾಜ್ಯಾದ್ಯಕ್ಷ ಮಾಡೋಕೆ ಗೊಂದಲ ಆಗಿರೋದು ಎಲ್ಲರೂ ಈ ವ್ಯಕ್ತಿ ಬೇಡ ಅಂತ ಹೇಳಿದ್ದಾರೆ. ತಂದೆಗೆ ಮಗ ಹೇಗಿದ್ರು ನಡಿಯತ್ತೆ, ಹೆತ್ತವರಿಗೆ ಹೆಗ್ಗಣ ಮುದ್ದು, ರಾಜ್ಯದ ಜನ ನಿರ್ಧಾರ ಮಾಡಿದ್ದಾರೆ. ಮೋದಿಯವರೇ ಹೇಳಿದ್ದಾರೆ ವಂಶವಾದ, ಭ್ರಷ್ಟಾಚಾರ ಇಲ್ಲ ಅಂತ ಹಂಗ ನಡಕೊಬೇಕು ಅಂತ ಹೇಳ್ತಿವಿ. ಹಾಗಿದ್ರ ವಂಶಪಾರಂಪರಿಕೆ, ಭ್ರಷ್ಟಾಚಾರ ನಡಿಯತ್ತೆ ಅಂತ ಡಿಕ್ಲೇರ್ ಮಾಡಿ, ಮಕ್ಕಳು ಮೊಮ್ಮಕಳಿಗೆ ಟಿಕೇಟ್ ಕೊಡ್ತಿವಿ ಅಂತ ಹೇಳಿ ಎಂದು ಮೋದಿ ವಿರುದ್ಧವೂ ಕಿಡಿಕಾರಿದ್ದಾರೆ ಯತ್ನಾಳ್.
ನಮ್ಮ ಬಣದವರೆಲ್ಲ ಮಾತಾಡ್ಕೊಂಡಿದ್ದೇವೆ, ಒಂದಾಗಿದ್ದೀವಿ. ಪಕ್ಷದ ಹಿತದೃಷ್ಟಿಯಿಂದ ವಿಚಾರ ಮಾಡ್ತಿದಿವಿ. ನಮಗೆ ಪ್ರಾಮಣಿಕ ನಾಯಕತ್ವ ಬೇಕು, ಡಂಬಾಚಾರದ ನಾಯಕತ್ವ ಬೇಡ. ನಾವು ರೈತನ ಮಂಗ ಅಂತಾರೆ, ನಾವೇನು ಎಮ್ಮಿ ಮಕ್ಕಳಾ.. ಎಂದು ತಮ್ಮದೇ ಶೈಲಿಯಲ್ಲಿ ಪ್ರಶ್ನೆ ಮಾಡಿರುವ ಯತ್ನಾಳ್, ವಿಜಯ ದಶಮಿ ಸಮೀಪ ಬಂದೇತಿ ರಾಜ್ಯಾದ್ಯಕ್ಷ ಡಿಕ್ಲೇರ್ ಆದ್ರೆ ನಮ್ಮ ಪಕ್ಷನೂ ಡಿಕ್ಲೇರ್ ಆಗುತ್ತೆ. ನಾನು ಬಿಜೆಪಿಯಲ್ಲೆ ಇದಿನಿ, ಯಡಿಯೂರಪ್ಪ ನನ್ನ ಮೂರು ಸಲಾ ಹೊರಗೆ ಹಾಕಿದ್ದಾನೆ. ಆದ್ರೂ, ನಾನು ಬಿಜೆಪಿ ಬಿಟ್ಟು ಹೊಗಿಲ್ಲ, ಯಡಿಯೂರಪ್ಪಗೆ ತನ್ನ ಮಗನ ಭವಿಷ್ಯ ತನ್ನ ಭವಿಷ್ಯ ಮಾತ್ರ ಸಾಕು. ಯಡಿಯೂರಪ್ಪ ತಾನ ಇರಬೇಕು ಅವ ಸತ್ತ ಮೇಲೆ ಮಗ ಇರಬೇಕು, ಮಗ ಸತ್ ಮ್ಯಾಲ ಮೊಮ್ಮಗ ಇರಬೇಕು. ಉಳಿದವರೆಲ್ಲ ಅವನ ಮನ್ಯಾಗ ಕಸ ಹೊಡಿಬೇಕು.. ನಮಗೇನ ಕೆಲಸ ಇಲ್ವಾ? ಕೆಲವೊಂದು ಅಪ್ಪಾಜಿ ಅನ್ನೊ ಅಯೋಗ್ಯ ನನ್ನ ಮಕ್ಕಳೆಲ್ಲ ರಾಜಕಾರಣದಲ್ಲಿದ್ದಾರೆ. ಹುಟ್ಟಿಸಿದ ಅಪ್ಪನಿಗೆ ಅಪ್ಪಾಜಿ ಅನ್ನಬೇಕು, ದೊಡ್ಡ ಜಗದ್ಗುರುಗಳಿಗೆ ಅಪ್ಪಾಜಿ ಅನ್ನಬೇಕು. ಹಾದಿ ಬೀದಿಲಿ ಹೋಗೋರಿಗೆಲ್ಲ ಅಪ್ಪಾಜಿ ಅಂದು ಬಿಜೆಪಿ ಹಾಳು ಮಾಡಿದ್ದೆ ಈ ಅಪ್ಪಾಜಿ ಕಂಪನಿ.. ಎಂದು ಎಂದಿನಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಯತ್ನಾಳ್ ಅವರ ಜೊತೆಯಲ್ಲಿ ನಿಂತಿರುವ ರೆಬಲ್ಸ್ ಟೀಂ, ಈಗಲೂ ದೆಹಲಿಯಲ್ಲಿಯೇ ಇದೆ. ರಾಜ್ಯ ಬಿಜೆಪಿಯ ನಾಯಕರು ಗಪ್ ಚುಪ್ ಆಗಿದ್ದಾರೆ. ಅಧ್ಯಕ್ಷರ ವಿಷಯಕ್ಕೆ ಸಂಬಂಧಪಟ್ಟಂತೆ ಮುಗುಂ ಆಗಿದ್ಧಾರೆ.



