ರೈತರಿಗೆ ಕೊಡಲಾಗಿದ್ದ ಎಲ್ಲ ನೋಟಿಸುಗಳನ್ನೂ ವಾಪಸ್ ತಗೊಳ್ಳೋ ಹಾಗೆ ಸೂಚನೆ ಕೊಟ್ಟಿದ್ದೇವೆ. ರೈತರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶವಿಲ್ಲ. ರೈತರು ಆತಂಕ ಪಡುವುದು ಬೇಡ, ರೈತರಿಗೆ ತೊಂದರೆ ಆಗಲ್ಲ ಎನ್ನುವುದು ರಾಜ್ಯ ಸರ್ಕಾರದ ಸ್ಪಷ್ಟನೆ. ಈ ಆದೇಶ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್. , ರೈತರಿಗೆ ನೀಡಿದ ಎಲ್ಲ ನೋಟಿಸ್ ವಾಪಸ್ ಪಡೆಯುತ್ತಿದ್ದೇವೆ. ವಕ್ಫ್ ಅಧಿಕಾರಿಗಳಿಗೆ ಸೆಕ್ರೆಟರಿಗಳು ನೋಟಿಸ್ ವಾಪಸ್ ಪಡೆಯುವಂತೆ ಹೇಳಿದ್ದಾರೆ. ನನಗೂ ಮಾಹಿತಿ ಬಂದಿದೆ, ರೈತರಿಗೆ ಕೊಟ್ಟ ಎಲ್ಲ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದಿದ್ದಾರೆ ಜಮೀರ್ ಅಹ್ಮದ್.
ಪ್ರಶ್ನೆ ಏನೆಂದರೆ..
ಮೇಲ್ನೋಟಕ್ಕೆ ಇದು ಜಾಣತನದ ನಡೆ ಎನ್ನಬಹುದು. ಆದರೆ ಒಮ್ಮೆ ನೋಟಿಸ್ ಕೊಟ್ಟು, ವಾಪಸ್ ಪಡೆಯವುದು, ಪಹಣಿಗಳಲ್ಲಿ ದಾಖಲಾಗಿದ್ದ ವಕ್ಫ್ ಮಂಡಳಿ ಹೆಸರನ್ನು ಫಾರಂ 11ರಿಂದ ತೆಗೆದು ಹಾಕಲೂಬಹುದು. ಆದರೆ ರೈತರ ಆಸ್ತಿ ಕುರಿತ ಗೆಜೆಟ್ ದಾಖಲೆಯನ್ನು ಅಳಿಸುವುದಕ್ಕೆ ಆಗುವುದಿಲ್ಲ. ಅಂದರೆ ಈಗಾಗಲೇ 1974ರ ಗೆಜೆಟ್ ಪ್ರಕಾರ ಎಂದು ರಾಜ್ಯ ಸರ್ಕಾರದ ಹಲವು ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಈಗ ಸಮಸ್ಯೆ ಏನೂ ಇಲ್ಲ ಎನ್ನುತ್ತಿರುವ ಜಮೀರ್ ಅಹ್ಮದ್ ಅವರೂ ಈ ಹಿಂದೆ ಇದೇ ಮಾತು ಹೇಳಿದ್ದವು. ಈಗ ನೋಟಿಸ್ ವಾಪಸ್, ಪಹಣಿಯಲ್ಲಿ ಹೆಸರು ತಿದ್ದಿದ್ದನ್ನು ಡಿಲೀಟ್ ಮಾಡ್ತೇವೆ, ಅಧಿಕಾರಿಗಳನ್ನು ಬೈತೇವೆ ಎಂದು ಬಿಟ್ಟರೆ.. ರೈತರಿಗೆ ರಿಲ್ಯಾಕ್ಸ್ ಸಿಗುತ್ತಾ..? ರಿಲೀಫ್ ಸಿಗುತ್ತಾ..? ಏಕೆಂದರೆ 1974ರ ಗೆಜೆಟ್ʻನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಸದ್ಯಕ್ಕೆ ಉಪಚುನಾವಣೆ ಇದೆ. ಉಪಚುನಾವಣೆ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆಗೆ ಏನು ಬೇಕಾದರೂ ಆಗಬಹುದು ಅಂತಾರೆ ಟೆನ್ಷನ್ನಿಗೆ ಸಿಲುಕಿದ್ದ ರೈತರು. ಏಕೆಂದರೆ ಇದು ಅವರ ಭೂಮಿ, ಅವರ ಹೊಟ್ಟೆಪಾಡು, ಅವರ ಬದುಕಿನ ಪ್ರಶ್ನೆ. ಅದು ಈಗ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸಿ ಆಗಿದೆ.
ನೋಟಿಸ್ ಕೊಟ್ಟು, ಸಚಿವರಿಂದ ನೋ.. ನೋ.. ನಾವು ಸರಿ ಇದ್ದೇವೆ ಅಂತಾ ಹೇಳಿಕೆ ಕೊಡಿಸಿ, ಟೆನ್ಷನ್ ಕೊಟ್ಟು.. ಈಗ ಇದೆಲ್ಲ ಬಿಜೆಪಿಯವರು ಮಾಡ್ತಿರೋ ರಾಜಕೀಯ, ಟೆನ್ಷನ್ ಮಾಡ್ಕೋಬೇಡಿ ಅಂದ್ರೆ ಹೇಗೆ ಅನ್ನೋ ರೈತರ ಪ್ರಶ್ನೆಗೆ ರಾಜಕೀಯ ಉತ್ತರಗಳಷ್ಟೇ ಸಿಗ್ತಾ ಇವೆ.
ಇತ್ತ ಬಿಜೆಪಿಯೂ ಅಷ್ಟೇ. ತಮ್ಮ ಅಧಿಕಾರಾವಧಿಯಲ್ಲಿ ಬಂದಿದ್ದ ನೋಟಿಸುಗಳಿಗೆ ಉತ್ತರ ಕೊಡಲ್ಲ. ಕಾಂಗ್ರೆಸ್ಸನ್ನು ಟೀಕಿಸುವುದನ್ನು ಬಿಡಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೇಳಿಕೆ ನೀಡಿರುವ ವಿಡಿಯೋ ಹೊರಬಿದ್ದಾಗಿದೆ. ಎರಡೂ ಪಕ್ಷಗಳ ಉಲ್ಟಾಪಲ್ಟಾ ರಾಜಕೀಯದ ಬಲಿಪಶುಗಳು ರೈತರು ಎನ್ನುವುದು. ಈಗ ಬಿಜೆಪಿ ವಿರೋಧ ಪಕ್ಷದಲ್ಲಿದೆ. ವಿರೋಧ ಮಾಡುತ್ತದೆ. ಕಾಂಗ್ರೆಸ್ ರಾಜಕೀಯದ ಉತ್ತರ ಕೊಡುತ್ತದೆ. ರೈತರಲ್ಲಿ ಉದ್ಭವವಾಗಿರುವ ಆತಂಕವನ್ನು ದೂರ ಮಾಡುವವರು ಯಾರು..?



