2025ನಲ್ಲಿ ಬೆಲೆ ಏರಿಕೆ ಶಾಕ್ ಮಧ್ಯೆ ಆಗಿರುವ ಒಂದೇ ಒಂದು ಸಿಹಿಯಾದ ಬೆಳವಣಿಗೆ ಎಂದರೆ.. ಅದು ಕೇವಲ ರೆಪೋ ದರ ಇಳಿಕೆ ಮಾತ್ರ. ಇದರಿಂದ ಸಾಲಗಳ ಮೇಲಿನ ಇಎಂಐ ಕಡಿಮೆಯಾಗುತ್ತದೆ ಎನ್ನುವುದು ನಿರೀಕ್ಷೆ. ಅಷ್ಟಾದರೂ ಉಸಿರಾಡುವಂತಾಯಿತಲ್ಲ ಎಂದು ಜನ ನೆಮ್ಮದಿಯ ನಿಟ್ಟುಸಿರು ಬಿಡ್ತಾರೆ. ಯಾಕಂದ್ರೆ, ಕಳೆದ ಫೆಬ್ರವರಿಯಲ್ಲಿ ಆರ್‌ಬಿಐ ಬಡ್ಡಿ ದರವನ್ನು ಶೇ. 0.25ರಷ್ಟು ಇಳಿಸಿತ್ತು. ಈಗ ಮತ್ತೆ ಶೇ. 0.25ರಷ್ಟು ಇಳಿಕೆ ಮಾಡಿದೆ. ಅಲ್ಲಿಗೆ ಒಟ್ಟು ಶೇ. 0.50ರಷ್ಟು ಇಳಿದಂತಾಗಿದೆ. ರೆಪೋ ದರ ಇಳಿಕೆಯ ಲಾಭವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಿದರೆ, ಹೋಮ್ ಲೋನ್ ಮತ್ತು ವಾಹನ ಸಾಲಗಳ ಇಎಂಐ ಕಡಿಮೆಯಾಗಲಿದೆ.
ಹಾಗಾದರೆ ಸಾಲ ಎಷ್ಟಿದ್ದರೆ, ಎಷ್ಟು ಬಡ್ಡಿ ಇಳಿಕೆಯಾಗಬಹುದು.. ಒಂದು ಲೆಕ್ಕಾಚಾರ ಇಲ್ಲಿದೆ. ಇದು ಅಂದಾಜು ಒಬ್ಬ ವ್ಯಕ್ತಿ 20 ವರ್ಷ ಕಾಲಾವಧಿಗೆ ಶೇ. 9ರಷ್ಟು ಬಡ್ಡಿ ದರದಲ್ಲಿ ಗೃಹ ಸಾಲ ತೆಗೆದುಕೊಂಡಿದ್ದಾನೆ ಎಂಬ ಲೆಕ್ಕದಲ್ಲಿ ಒಂದು ಸಾಮಾನ್ಯ ಲೆಕ್ಕಾಚಾರದ ಸೂತ್ರ ಹೇಳಲಾಗಿದೆ. ಇದು ಸಾಲದ ಪ್ರಮಾಣ, ಸಾಲದ ಅವಧಿಗೆ ತಕ್ಕಂತೆ ಬದಲಾಗುತ್ತದೆ. ಫೆಬ್ರವರಿಯ ಇಳಿಕೆಯೂ ಸೇರಿ ಈಗ ಶೇ. 0.50ರಷ್ಟು ಬಡ್ಡಿ ದರ ಕಡಿತವಾದರೆ, ಬಡ್ಡಿ ದರ ಶೇ. 8.50ಕ್ಕೆ ಇಳಿಕೆಯಾಗುತ್ತದೆ. ಆಗ ಇಎಂಐ ಹೊರೆ ಎಷ್ಟು ಇಳಿಯಬಹುದು, ಎಷ್ಟು ಲಾಭವಾಗಬಹುದು ಎನ್ನುವ ಮಾಹಿತಿಯ ಕೋಷ್ಟಕ ಇಲ್ಲಿದೆ.
ಸಾಲದ ಮೊತ್ತ | ಹಾಲಿ ಬಡ್ಡಿ ದರ 9% ಇದ್ದಾಗ ಮಾಸಿಕ ಕಂತು | ಬಡ್ಡಿ ದರ 8.5%ಗೆ ಇಳಿದರೆ ಮಾಸಿಕ ಕಂತು | ತಿಂಗಳ ಉಳಿತಾಯ | 20 ವರ್ಷಗಳಲ್ಲಿ ಉಳಿತಾಯ |
30 ಲಕ್ಷ ರೂ. | 26,247 ರೂ. | 25,071 ರೂ. | 1,176 ರೂ. | 2.87 ಲಕ್ಷ ರೂ. |
50 ಲಕ್ಷ ರೂ. | 43,745 ರೂ. | 41,785 ರೂ. | 1,960 ರೂ. | 4.70 ಲಕ್ಷ ರೂ. |
70 ಲಕ್ಷ ರೂ. | 61,243 ರೂ. | 58,499 ರೂ. | 2,744 ರೂ. | 6.58 ಲಕ್ಷ ರೂ. |
1 ಕೋಟಿ ರೂ. | 87,490 ರೂ. | 83,570 ರೂ. | 3,920 ರೂ. | 9.40 ಲಕ್ಷ ರೂ. |
1.5 ಕೋಟಿ ರೂ. | 1,31,235 ರೂ. | 1,25,355 ರೂ. | 5,880 ರೂ. | 14.11 ಲಕ್ಷ ರೂ. |
ಅಂದ್ರೆ ಹೆಚ್ಚು ಸಾಲ ಮತ್ತು ಬಡ್ಡಿ ಇದ್ದಷ್ಟೂ ಸಾಲದ ಕಂತಿಗೆ ಕಟ್ಟುವ ಬಡ್ಡಿಯ ಪ್ರಮಾಣ ಮತ್ತು ಉಳಿತಾಯದ ಪ್ರಮಾಣ ಹೆಚ್ಚಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಇಷ್ಟೆ.
ಇಷ್ಟಕ್ಕೂ ಜನರಿಗೆ ರೆಪೋ ದರಕ್ಕೂ, ಸಾಲಕ್ಕೂ ಯಾವ ರೀತಿ ಲಿಂಕ್ ಎಂಬ ಗೊಂದಲ ಕಾಡುವುದು ಸಹಜ. ರೆಪೋ ದರ ಇಳಿಕೆಯಾದಾಗ ಬ್ಯಾಂಕ್‌ಗಳಿಗೆ ಸಾಲದ ವೆಚ್ಚ ಕಡಿಮೆ ಆಗುತ್ತದೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಅವಕಾಶ ಹೆಚ್ಚುತ್ತದೆ. ಈ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ಆರ್‌ಬಿಐ ಗವರ್ನರ್ ಮಲ್ಹೋತ್ರಾ ಎರಡು ಬಾರಿ ರೆಪೋ ದರ ಕಡಿತ ಮಾಡಿದ್ದಾರೆ. ಸಭೆಗೂ ಮುಂಚೆಯೇ ರೆಪೋ ದರ ಕಡಿತವನ್ನು ನಿರೀಕ್ಷಿಸಲಾಗಿತ್ತು. ಆದರೆ ಟ್ರಂಪ್‌ರ ಸುಂಕ ಸಮರದ ಹಿನ್ನೆಲೆಯಲ್ಲಿ ಕೊಂಚ ಸಂದೇಹಗಳೂ ತಲೆದೋರಿದ್ದವು. ಇದಕ್ಕೆ ಸಂಜಯ್ ಮಲ್ಹೋತ್ರಾ ಅವರು ‘ವಿರಾಮ’ ಹಾಕಿ ಗ್ರಾಹಕರ ಸಂತಸ ಇಷ್ಟಕ್ಕೇ ಮುಗಿದಿಲ್ಲ ಎಂಬ ಸಕಾರಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ಆರ್‌ಬಿಐ ಈ ಉಪಕ್ರಮವು ಹಣದ ಹರಿವಿನ ಹೆಚ್ಚಳ, ಸಾಲಗಾರರಿಗೆ ಇಎಂಐ ಮೊತ್ತ ಇಳಿಕೆ, ಸಾಲದ ಆಕಾಂಕ್ಷೆಗೆ ಬಲವನ್ನು ನೀಡಲಿದೆ.