ಸ್ಥೂಲಕಾಯ, ಬೊಜ್ಜು.. ಅನ್ನೋದು ಪ್ರತಿಯೊಬ್ಬರಿಗೂ ಕಾಡುತ್ತಿರುವ ಸಮಸ್ಯೆ. ಬಹಳಷ್ಟು ಮಂದಿಗೆ ವ್ಯಾಯಾಮ ಮಾಡಬಾರದು, ಸಿಕ್ಕಿದ್ದನ್ನೆಲ್ಲ ತಿಂತಾ ಇರಬೇಕು, ಗಡದ್ಧಾಗಿ ನಿದ್ದೆ ಮಾಡ್ಬೇಕು.. ಮತ್ತು ಇಷ್ಟೆಲ್ಲ ಆಗಿಯೂ ಸ್ಲಿಮ್ & ಸ್ಮಾರ್ಟ್ ಆಗಿರಬೇಕು ಎಂಬ ಆಸೆ ಇರುತ್ತದೆ. ಅಂತಹ ಆಸೆಯುಳ್ಳವರಿಗೆಂದೇ ಬಂದ ಔಷಧಿ ಜೆಪ್ ಬೌಂಡ್.
ಅತಿಯಾದ ದೇಹದ ತೂಕ ಹೊಂದಿರುವವರು ಅದರಲ್ಲೂ ಮಧುಮೇಹ, ಅಧಿಕ ರಕ್ತದ ಒತ್ತಡ ಹಾಗೂ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಚಿಕಿತ್ಸೆಗೆ ಹೆಚ್ಚಾಗಿ ಬಳಕೆಯಾಗುವ ಈ ಔಷಧ, ಸ್ಥೂಲಕಾಯದವರ ಡಾರ್ಲಿಂಗ್ ಆಗಿದೆ. ಈ ಔಷಧಿಯನ್ನು ಅಂದ್ರೆ ಇಂಜಕ್ಷನ್ ರೂಪದಲ್ಲಿರುವ ಈ ಮೆಡಿಸಿನ್ʻನ್ನು ವಾರಕ್ಕೊಮ್ಮೆ ತೆಗೆದುಕೊಂಡರೆ.. ಒಟ್ಟಾರೆ ದೇಹ ತೂಕದ ಶೇ.1ರಷ್ಟು ಇಳಿಕೆಯಾಗುತ್ತದೆ ಎನ್ನುವ ವಾತಾವರಣ ಸೃಷ್ಟಿಯಾಗಿದೆ.
ಅಂದರೆ ಒಮ್ಮೆ ಇಂಜಕ್ಷನ್ ತೆಗೆದುಕೊಂಡರೆ.. 80 ಕೆಜಿ ತೂಕ ಇದ್ದವರು, 72 ಕೆಜಿಗೆ ಇಳಿಯುತ್ತಾರಂತೆ. 80ರಲ್ಲಿ ಶೇ.1ರಷ್ಟು ಎಂದರೆ 8ಕೆಜಿ. 100 ಕೆಜಿ ತೂಕ ಇದ್ದವರು, 90 ಕೆಜಿಗೆ ಇಳಿಯುತ್ತಾರಂತೆ.
ಇದು ನಿಜವೋ.. ಸುಳ್ಳೊ.. ಎಂಬುದನ್ನು ಪರೀಕ್ಷೆ ಮಾಡುವುದಕ್ಕೆ, ಖಚಿತ ತೀರ್ಮಾನ ಹೇಳುವುದಕ್ಕೆ ಕೆಲವು ವರ್ಷಗಳೇ ಕಾಯಬೇಕು. ಆದರೆ.. ಜನರಿಗೆ ಅದೆಲ್ಲ ಬೇಕಿಲ್ಲ.
ಅವರಿಗೆ ಇನ್ʻಸ್ಟಂಟ್ ಕಾಫಿ, ಮ್ಯಾಗಿ ನೂಡಲ್ಸ್ ರೀತಿಯಲ್ಲೇ ತೂಕವೂ ಇಳಿಯಬೇಕು. ಹೀಗಾಗಿ.. ಲಾಭ ಮಾಡುತ್ತಿರುವುದು ಈ ಇಂಜಕ್ಷನ್ ತಯಾರಿಸಿರುವ ಕಂಪೆನಿ ಅಮೆರಿಕದ ಎಲಿ ಲಿಲ್ಲಿ ಎಂಬ ಔಷಧ ತಯಾರಿಕಾ ಕಂಪನಿ.
ತನ್ನ ಪ್ರತಿಸ್ಪರ್ಧಿ ಸಂಸ್ಥೆ ನೋವೋ ನಾರ್ಡಿಸ್ಕ್‌ಗಿಂತಲೂ ಹೆಚ್ಚು ಜನಪ್ರಿಯವಾಗಿ ಮುನ್ನುಗ್ಗುತ್ತಿದೆ. ಅಷ್ಟೇ ಅಲ್ಲ, ತನ್ನ ವಾರ್ಷಿಕ ಮಾರಾಟ ಗುರಿಯನ್ನ 3 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆ ಮಾಡಿಕೊಂಡಿದೆ. ಎಲಿ ಲಿಲ್ಲಿ ಔಷಧ ತಯಾರಿಕಾ ಕಂಪನಿಯ ಷೇರು ಶೇ. 14ರಷ್ಟು ಏರಿಕೆ ಕಂಡಿದೆ.
ಎಲಿ ಲಿಲ್ಲಿ ಔಷಧ ತಯಾರಿಕಾ ಕಂಪನಿ ತನ್ನ ಜೆಪ್‌ಬೌಂಡ್ ಔಷಧ ಒಂದರಿಂದಲೇ ಸುಮಾರು 1 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆ ಇದೆ. 2023ರ ಅಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾದ ಈ ಔಷಧ ಇದೀಗ ವಿಶ್ವಾದ್ಯಂತ ಜನಪ್ರಿಯತೆ ಸಾಧಿಸಿದೆ.
ಲಿಲ್ಲಿ ಹಾಗೂ ಅದರ ಪ್ರತಿಸ್ಪರ್ಧಿ ಕಂಪನಿ ನೋವೋ ಎರಡೂ ಸಂಸ್ಥೆಗಳು ತಮ್ಮ ಔಷಧ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿವೆ. 2030ರ ವೇಳೆಗೆ ಈ ಎರಡೂ ಕಂಪನಿಗಳ ವಹಿವಾಟು ವಿಶ್ವಾದ್ಯಂತ 150 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆ ಕಾಣುವ ಸಾಧ್ಯತೆ ಇದೆ. ಈ ನಡುವೆ, ಲಿಲ್ಲಿ ಕಂಪನಿಯ ಜೆಪ್ ಬೌಂಡ್ ಔಷಧಕ್ಕೆ ಎಷ್ಟರ ಮಟ್ಟಿಗೆ ಬೇಡಿಕೆ ಇದೆ ಎಂದರೆ, ಕಂಪೆನಿಗೆ ಬೇಡಿಕೆಗೆ ತಕ್ಕಂತೆ ಔಷಧಿ ಪೂರೈಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಪ್ರತಿಯೊಂದು ತ್ರೈಮಾಸಿಕದಲ್ಲೂ ಜೆಪ್‌ಬೌಂಡ್ ಔಷಧದ ಬೇಡಿಕೆ ಶೇ. 20ರಷ್ಟು ಏರಿಕೆ ಕಾಣುತ್ತಿದೆ. ನಾವು ನಮ್ಮ ಔಷಧ ಉತ್ಪನ್ನಕ್ಕೆ ಯಾವುದೇ ಜಾಹೀರಾತು ನೀಡುತ್ತಿಲ್ಲ. ಆದರೂ ನಮ್ಮ ಔಷಧದ ಬೇಡಿಕೆ ವಿಪರೀತ ಏರಿಕೆ ಆಗುತ್ತಿದೆ. ಲಿಲ್ಲಿ ಸಂಸ್ತೆಯ ಜೆಪ್‌ಬೌಂಡ್ ಔಷಧವು ವಾಣಿಜ್ಯ ವಿಮೆಯ ವ್ಯಾಪ್ತಿಗೂ ಬರುವ ಹಿನ್ನೆಲೆಯಲ್ಲಿ ಈ ಔಷಧದ ಚಿಕಿತ್ಸೆ ಪಡೆಯಲು ಹೆಚ್ಚಿನ ಜನರು ಮುಂದಾಗುತ್ತಿದ್ದಾರೆ. ಅಮೆರಿಕದಲ್ಲಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಬಹುತೇಕ ಉದ್ಯೋಗಿಗಳು ತಮ್ಮ ವಿಮೆಯ ಲಾಭ ಪಡೆದು ಈ ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ.
ವಿಶೇಷ ಎಂದರೆ.. ಈ ಔಷಧಿಗೆ ಭಾರತದಲ್ಲೂ ಡಿಮ್ಯಾಂಡ್ ಇದೆ. ಆದರೆ.. ಅಮೆರಿಕದಲ್ಲಿಯೇ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಔಷಧಿ ಇನ್ನೂ ಭಾರತದ ಮಾರುಕಟ್ಟೆಗೆ ಕಾಲಿಟ್ಟಿಲ್ಲ. ಆದರೆ.. ಮಾತುಕತೆಗಳಂತೂ ನಡೆಯುತ್ತಿವೆ. ಮುಂದಿನ ವರ್ಷ ಭಾರತಕ್ಕೆ ಬರುವ ಬಗ್ಗೆ ಸೂಚನೆಯನ್ನಂತೂ ಕಂಪೆನಿ ಕೊಟ್ಟಿದೆ.



