ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಗದ್ದುಗೆ ಗುದ್ದಾಟ ಇನ್ನೇನೂ ನೇರಾನೇರಾ ಯುದ್ಧವಾಗುವ ಸಮಯ ಹತ್ತಿರವಾಗಿದೆಯೇ.. ಹೌದು ಎನ್ನುವ ಸೂಚನೆಗಳಂತೂ ಬರುತ್ತಿವೆ. ಅದು ಕಾಣಿಸಿಕೊಂಡಿರೋದು ಸೋಷಿಯಲ್ ಮೀಡಿಯಾದಲ್ಲಿ. ಇದರ ಮಧ್ಯೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗೆ ಇಳಿದರೆ 90 ಶಾಸಕರು ರಾಜೀನಾಮೆ ಕೊಡ್ತಾರಂತೆ ಅನ್ನೋ ಹೇಳಿಕೆ ಹೊರಬಿದ್ದಿದೆ. ಹೇಳಿಕೆ ನೀಡಿರುವುದು..
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ. ಇವರ ಈ ಹೇಳಿಕೆಗೆ ಕಾರಣವಾಗಿರೋದು ಒಕ್ಕಲಿಗರ ಸಂಘ, ಒಕ್ಕಲಿಗರ ಸಂಘದ ಸ್ವಾಮೀಜಿಗಳು ನೀಡಿರುವ ಹೇಳಿಕೆಗಳು.
ʻʻಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದರೆ ನಾವು ಸುಮ್ಮನಿರಲ್ಲ. ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಸಿದ್ದರಾಮಯ್ಯ ಅವರ ಪರ 80-90 ಮಂದಿ ಎಸ್ಸಿ,ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ಹಾಗೂ ಒಕ್ಕಲಿಗ, ಲಿಂಗಾಯತ ಶಾಸಕರು ಇದ್ದಾರೆ. ಅವರನ್ನು ಹೆದರಿಸಲು ಹೋದರೆ ಅಷ್ಟೂ ಜನ ರಾಜೀನಾಮೆ ನೀಡುತ್ತಾರೆʼʼ ಎಂದು ಹೇಳಿದ್ದಾರೆ ರಾಮಚಂದ್ರಪ್ಪ.
90 ಶಾಸಕರು ರಾಜೀನಾಮೆ ಹೇಳಿಕೆ ಸಂಚಲನ ಸೃಷ್ಟಿಸಿರೋದು ನಿಜ. ಆದರೆ.. ಇದೆಲ್ಲ ಸಾಧ್ಯವೇ ಎಂದು ನೋಡಿದರೆ.. ಅನುಮಾನವೇ ಇಲ್ಲದೆ ಇದನ್ನು ಅಸಾಧ್ಯ ಎಂದೇ ಹೇಳಬೇಕು. ಇದು ಕೇವಲ ಹೇಳಿಕೆಗಷ್ಟೇ ಸೀಮಿತವಾಗುತ್ತದೆ. ಅಷ್ಟೇ ಹೊರತು ಯಾವ ಸಂಚಲನವನ್ನೂ ಸೃಷ್ಟಿಸೋದಿಲ್ಲ. ಹೀಗಿದ್ದರೂ ರಾಮಚಂದ್ರಪ್ಪ ಅವರು ಈ ಮಾತು ಹೇಳಿರೋದು ಯಾಕೆ.. ಯಾಕೆ ಎಂದರೆ.. ಅದಕ್ಕೆ ಕಾರಣ ಕೊಡ್ತಾರೆ ರಾಮಚಂದ್ರಪ್ಪ. ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಮಚಂದ್ರಪ್ಪ ಹೇಳುವುದು ಇಷ್ಟು.
ಕಾಂಗ್ರೆಸ್ ಆಂತರಿಕ ವಿಚಾರ ಎಂದು ಸುಮ್ಮನಿದ್ದೆವು. ಆದರೆ ಒಕ್ಕಲಿಗರ ಸಂಘದ ಸುದ್ದಿಗೋಷ್ಠಿ ಬಳಿಕ ಮಾತನಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜಾತಿ ವಿಚಾರ ತಂದು ಒಕ್ಕಲಿಗರು, ಅಹಿಂದ ವರ್ಗಗಳ ನಡುವೆ ಜನಾಂಗೀಯ ಕಲಹಕ್ಕೆ ಪ್ರಚೋದನೆ ನೀಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಡಿಸಿಎಂ ಡಿಕೆಶಿ ಅವರ ಶ್ರಮಕ್ಕೆ ಒಕ್ಕಲಿಗರ ಸಂಘದವರು ಕೂಲಿ ಕೇಳುತ್ತಿದ್ದಾರೆ. ಕೂಲಿ ಅಂದರೆ ಏನು? ಅವರಿಗೆ ಅಧ್ಯಕ್ಷ ಹುದ್ದೆ ಕೊಡಲಾಗಿದೆ. ಡಿಕೆಶಿಗೆ ಕೂಲಿ ಕೊಡುವುದಾದರೆ, 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರಿಗೂ ಕೂಲಿ ಕೊಡಲಿ.. ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ.. ಡಿ.ಕೆ.ಶಿವಕುಮಾರ್ ಪಕ್ಷ ಅಧಿಕಾರಕ್ಕೆ ತರಲು ಜೈಲಿಗೆ ಹೋಗಿದ್ದರು ಎನ್ನುತ್ತಿದ್ದಾರೆ. ಶಿವಕುಮಾರ್ ಯಾವ ಕಾರಣಕ್ಕಾಗಿ ಜೈಲಿಗೆ ಹೋಗಿದ್ದರು ಎಂಬುದು ಜನರಿಗೆ ಗೊತ್ತಿಲ್ಲವೇ? ವೋಟು ಹಾಕಲು ಅಹಿಂದ ವರ್ಗ ಬೇಕು? ಅಧಿಕಾರಕ್ಕಾಗಿ ಮಜಾ ಮಾಡಲು ಒಕ್ಕಲಿಗರು ಬೇಕಾ? ಎಂದು ಕಿಡಿಕಾರಿದ್ದಾರೆ.
ಅತ್ತ ಅಹಿಂದ V/S ಒಕ್ಕಲಿಗರ ಸಮರ ಜೋರಾಗಿದ್ದರೆ.. ಇತ್ತ ಸಿಎಂ ಡಿಸಿಎಂ ಸೋಷಿಯಲ್ ಮೀಡಿಯಾ ವಾರ್ ಮಾಡ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕೃತ ಎಕ್ಸ್ ಖಾತೆಯಲ್ಲಿ ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ’ (ವರ್ಡ್ ಪವರ್ ಈಸ್ ವರ್ಲ್ಡ್ ಪವರ್) ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಜನರಿಗಾಗಿ ಜಗತ್ತನ್ನು ಉತ್ತಮಗೊಳಿಸದೆ ಹೋದರೆ ಕೊಟ್ಟ ಮಾತು (ವರ್ಡ್ ಪವರ್) ಶಕ್ತಿ ಆಗುವುದಿಲ್ಲ. ನಮ್ಮ ಮಾತು ಕೇವಲ ಹೇಳಿಕೆಯಲ್ಲ ಅದೇ ನಮಗೆ ಜಗತ್ತು’ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮಾತು.. ಮಾತಿನಲ್ಲೇ ಉಳಿಯುತ್ತಿದೆ.



