ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ 20ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರ ತಂಡ ವಿದೇಶಕ್ಕೆ ಹೊರಟು ನಿಂತಿದೆ. ವಿದೇಶ ಪ್ರವಾಸದ ಕುರಿತು ಪರ-ವಿರೋಧದ ಚರ್ಚೆಗಳ ಶುರುವಾಗಿರುವ ನಡುವೆ ಒಂದು ಟೀಂ ಆಸ್ಟ್ರೇಲಿಯಾಗೆ ಹೋದರೆ, ಮತ್ತೊಂದು ಟೀಂ ನ್ಯೂಜಿಲೆಂಡ್‌ಗೆ ಹೋಗಲಿದೆ. ಪರ ವಿರೋಧ ಏಕೆ ಎನ್ನುವುದರ ಮಧ್ಯೆ ಎಲ್ಲರನ್ನೂ ಕಾಡುತ್ತಿರುವ ಅತಿ ದೊಡ್ಡ ಪ್ರಶ್ನೆ ಒಂದೇ. ಶಾಸಕರು ವಿದೇಶ ಪ್ರವಾಸಕ್ಕೆ ಡಿಕೆ ಶಿವಕುಮಾರ್ ಯಾಕೆ ತಳಮಳಗೊಳ್ಳಬೇಕು ಎನ್ನುವುದು. ಏಕೆ ಇದನ್ನೊಂದು ʻಡಿಕೆ ವಿರೋಧಿ ಚಟುವಟಿಕೆʼ ಎಂದು ಬಿಂಬಿಸಲಾಗುತ್ತಿದೆ ಎನ್ನವುದು ದೊಡ್ಡ ಪ್ರಶ್ನೆ. ಅದಕ್ಕೆ ಕಾರಣವೂ ಇದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲು ಸಜ್ಜಾಗಿರುವ ಶಾಸಕರಲ್ಲಿ ಇರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು. ಈ ಶಾಸಕರು ವಾಪಸ್ ಬರುವುದು ಶಾಸಕರು ಮಾ.3ಕ್ಕೆ. ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ತಂಡದಲ್ಲಿ ಪರಿಷತ್ ಸದಸ್ಯರೂ ಇದ್ದಾರೆ. ಒಟ್ಟು 23 ಶಾಸಕರು ಹಾಗೂ 3 ವಿಧಾನ ಪರಿಷತ್ ಸದಸ್ಯರು ಫಾರಿನ್ ಟೂರ್ ಹೋಗ್ತಾರೆ.
ಕೃಷಿ ಕುರಿತಾಗಿ ಅಧ್ಯಯನ ಮಾಡುವ ಸಲುವಾಗಿ ಎಂಬ ಅಧಿಕೃತ ಕಾರಣ ಇದೆ. ಶಾಸಕರಾದ ಪುಟ್ಟರಂಗಶೆಟ್ಟಿ, ಎಚ್.ಡಿ.ತಮ್ಮಯ್ಯ, ದೇವೇಂದ್ರಪ್ಪ, ಅಲ್ಲಮ ಪ್ರಭು ಪಾಟೀಲ್, ಬಿ.ಬಿ.ಚಿಮ್ಮನಕಟ್ಟಿ, ಮಹಾಂತೇಶ ಕೌಜಲಗಿ, ರಾಘವೇಂದ್ರ ಹಿಟ್ನಾಳ್, ಅನಿಲ್ ಚಿಕ್ಕಮಾದು, ರಘುಮೂರ್ತಿ ಸೇರಿದಂತೆ 27 ಮಂದಿ ಆಸ್ಪ್ರೇಲಿಯಾ, ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ತೆರಳಲಿದ್ದು, ಮಾರ್ಚ್ 3 ಕ್ಕೆ ವಾಪಸಾಗಲಿದ್ದಾರೆ.
ವಿದೇಶಿ ಪ್ರವಾಸಕ್ಕೆ ಹೋಗುವ ವಿಚಾರವಾಗಿ ಡಿಕೆ ಶಿವಕುಮಾರ್ ಬಣ ಅಥವಾ ಸಿದ್ದರಾಮಯ್ಯ ಬಣ ಎಂಬುದನ್ನು ಯಾಕೆ ಚರ್ಚೆ ಮಾಡಬೇಕು? ನಾಯಕತ್ವ ವಿಚಾರಕ್ಕೆ ಇದಕ್ಕೆ ಏನು ಸಂಬಂಧ.. ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಸಿಎಂ ಬದಲಾವಣೆ ಅಥವಾ ನಾಯಕತ್ವದ ಬದಲಾವಣೆಯ ಚರ್ಚೆಗಳ ನಡುವೆ, ಶಾಸಕರು ತಮ್ಮ ಬಣದ ಶಕ್ತಿಯನ್ನು ಪ್ರದರ್ಶಿಸಲು ಅಥವಾ ಹೈಕಮಾಂಡ್‌ಗೆ ಸಂದೇಶ ರವಾನಿಸಲು ಈ ಪ್ರವಾಸವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಸದ್ಯದ ಅನುಮಾನ.
ಕಾಂಗ್ರೆಸ್ ಹೈಕಮಾಂಡ್ ಅಧಿವೇಶನಕ್ಕೂ ಮುನ್ನ ಈ ಪ್ರವಾಸ ಕೈಗೊಳ್ಳುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೆಲವು ಶಾಸಕರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದೂ ಚರ್ಚೆಯಾಗುತ್ತಿದೆ.
ಈ ಹಿಂದೆ ಶಾಸಕರನ್ನೆಲ್ಲ ಕರೆದುಕೊಂಡು ದುಬೈಗೆ ಹೊರಟಿದ್ದ ಸತೀಶ್ ಜಾರಕಿಹೊಳಿಯವರಿಗೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ಬಾರಿ ಹೈಕಮಾಂಡ್ ನಿರೀಕ್ಷೆಗಳನ್ನೂ ಮೀರಿ ವಿದೇಶಕ್ಕೆ ಹೊರಟು ನಿಂತಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಕರೆಯಬಹುದು ಎನ್ನಲಾದ ಸಿಎಲ್‌ಪಿ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಡಿಕೆ ಶಿವಕುಮಾರ್ ಬಜೆಟ್ ಅಧಿವೇಶನಕ್ಕೂ ಮೊದಲು ಪಕ್ಷದ ಶಾಸಕರ ಶಾಸಕಾಂಗ ಪಕ್ಷದ ಸಭೆ ಕರೆಯಲು ಉದ್ದೇಶಿಸಿದ್ದರು. ಈ ಸಭೆಯಲ್ಲಿ ಭಾಗವಹಿಸುವುದನ್ನೇ ತಪ್ಪಿಸಿಕೊಳ್ಳೋಕೆ ಸಿದ್ದು ಟೀಂನ ಶಾಸಕರು ಪ್ಲಾನ್ ಮಾಡಿ ಫಾರಿನ್ನಿಗೆ ಹೊರಟಿದ್ದಾರೆ.



