2024ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಅಬ್ ಈ ಬಾರ್ ಚಾರ್ ಸೌ ಪರ್ ಎಂದು ಹೇಳಿಕೊಂಡು ಹೋಗಿದ್ದ ಬಿಜೆಪಿ, 300ರ ಗಡಿಯನ್ನೂ ದಾಟಲಿಲ್ಲ. ಬಿಜೆಪಿ ಕಥೆ ಬಿಡಿ, ಎನ್‌ಡಿಎ ಒಕ್ಕೂಟದ ಬಲಾಬಲವೇ 300ರ ಗಡಿ ದಾಟಲಿಲ್ಲ. ಆ ಚುನಾವಣೆ ಆದ ನಂತರ ಕೆಲವು ರಾಜ್ಯಗಳನ್ನು ಬಿಜೆಪಿ ತ್ರಿವಿಕ್ರಮನ ರೀತಿಯಲ್ಲಿ ಗೆದ್ದಿದೆ. ನಿಜ. ಮಹಾರಾಷ್ಟ್ರ, ಹರಿಯಾಣ, ಬಿಹಾರ, ಮಧ್ಯಪ್ರದೇಶ, ದೆಹಲಿ, ರಾಜಸ್ತಾನ.. ಹೀಗೆ ದೊಡ್ಡ ದೊಡ್ಡ ರಾಜ್ಯಗಳನ್ನು ಬುಟ್ಟಿಗೆ ಹಾಕ್ಕೊಂಡಿದೆ. ಈಗ ಲೋಕಸಭೆ ಚುನಾವಣೆ ನಡೆದರೆ.. ಎಷ್ಟು ಗೆಲ್ಲಬಹುದು. ಸಮೀಕ್ಷೆಗಳೇನೋ ಬರುತ್ತಲೇ ಇರುತ್ತವೆ. ಆದರೆ, ಈ ಸಮೀಕ್ಷೆ ಏಕೆ ಮುಖ್ಯ ಏಂದರೆ 2024ರಲ್ಲೂ ಈ ಸಂಸ್ಥೆಯ ಸಮೀಕ್ಷೆ ಪರ್ಫೆಕ್ಟ್ ಆಗಿತ್ತು. ಈಗ ಮತ್ತೆ ಸರ್ವೆ ಮಾಡಿ ರಿಪೋರ್ಟ್ ಕೊಟ್ಟಿದೆ. ಇದು ಇಂಡಿಯಾ ಟುಡೇ – ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ.
ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಇಂದೇ ಲೋಕಸಭಾ ಚುನಾವಣೆ ನಡೆದರೆ NDA 352 ಸ್ಥಾನಗಳನ್ನು ಗೆಲ್ಲುತ್ತದೆ. ಇಂಡಿಯಾ ಟುಡೇಯಿಂದ ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ನಡೆಯುತ್ತದೆ. ಈ ಬಾರಿಯ ಫಲಿತಾಂಶ ಪ್ರಕಾರ ಜನ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾರೆ. ಈ ಹಿಂದೆ ನಡೆದ ಆಗಸ್ಟ್ 2025ರ ಸಮೀಕ್ಷೆಗಿಂತ ಬಿಜೆಪಿ 27 ಸ್ಥಾನಗಳ ಹೆಚ್ಚಳವಾಗಿದೆ. ಇನ್ನು ಕಾಂಗ್ರೆಸ್ 80 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ, ಇದು ಹಿಂದಿನ ಸಮೀಕ್ಷೆಗಿಂತ 17 ಸ್ಥಾನಗಳ ಇಳಿಕೆಯಾಗಿದೆ. ಇನ್ನುಳಿದ ಪಕ್ಷಗಳು ಒಟ್ಟಾಗಿ 176 ಸ್ಥಾನಗಳನ್ನು ಪಡೆಯಬಹುದು, ಇದು 10 ಸ್ಥಾನಗಳ ಇಳಿಕೆಯಾಗಿದೆ.
ಸಮೀಕ್ಷೆ ಪ್ರಕಾರ ಮತ ಪ್ರಮಾಣ ಯಾರಿಗೆ ಎಷ್ಟು..?
ಎನ್‌ಡಿಎ ಶೇ 47 ಮತಗಳನ್ನು ಪಡೆಯುವ ನಿರೀಕ್ಷೆಯಿದ್ದು, ಇಂಡಿ ಒಕ್ಕೂಟವು ಶೇಕಡಾ 39 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಇದು ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಇಂಡಿಯಾ ಒಕ್ಕೂಟದ ಮತ ಶೇಕಡಾ 2 ರಷ್ಟು ಕಡಿಮೆಯಾಗಿದೆ. ಇನ್ನುಳಿದ ಪಕ್ಷಗಳು ಒಟ್ಟಾಗಿ ಶೇಕಡಾ 14ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ.
ಮೋದಿಯೇ ಬೆಸ್ಟ್ ಎಂದವರು..
2026ರ ಜನವರಿಯಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ಮೋದಿ ಅತ್ಯುತ್ತಮ ಆಯ್ಕೆ ಎಂದು ಶೇಕಡಾ 55 ರಷ್ಟು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಇದು ಆಗಸ್ಟ್ ತಿಂಗಳಲ್ಲಿ ಬಂದಿದ್ದ ಮತಪ್ರಮಾಣ ಶೇಕಡಾ 52ಕ್ಕಿಂತ ಹೆಚ್ಚು.
ರಾಹುಲ್ ಗಾಂಧಿಗೂ ಗುಡ್‌ನ್ಯೂಸ್
ರಾಹುಲ್ ಗಾಂಧಿ ಅವರ ಬೆಂಬಲವೂ ಶೇ 27 ರಷ್ಟು ತಲುಪಿದೆ. ಹಿಂದಿನ ಸಮೀಕ್ಷೆಯ ಶೇಕಡಾ 25 ರಷ್ಟು ಇತ್ತು. ಈ ಮೂಲಕ ರಾಹುಲ್ ಗಾಂಧಿ ಅವರ ಬೆಂಬಲವೂ ಸ್ಥಿರವಾಗಿ ಹೆಚ್ಚುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.
ಮೋದಿಯ ಕೆಲಸ ಮೆಚ್ಚಿದ ಜನ
2026ರ ಜನವರಿಯ ಸಮೀಕ್ಷೆಯಲ್ಲಿ ಶೇ. 57 ಜನ, ಮೋದಿ ಕೆಲಸಕ್ಕೆ ಉತ್ತಮ ಎಂದು ಹೇಳಿದ್ದಾರೆ. ಇದು 2025ರ ಆಗಸ್ಟ್‌ನಲ್ಲಿ ಶೇಕಡಾ 58% ಇತ್ತು. ಶೇಕಡಾ 24 ಜನರು ಅವರ ಕಾರ್ಯಕ್ಷಮತೆಯನ್ನು “ಕಳಪೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಸಕಾರಾತ್ಮಕತೆ ಹೆಚ್ಚಿರುವುದು ವಿಶೇಷ.
ಕಾಂಗ್ರೆಸ್‌ಗೆ ಉತ್ತಮ ಸ್ಥಾನ :
ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರ ಕಾರ್ಯಕ್ಷಮತೆಯ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದ್ದರೂ, ವಿರೋಧ ಪಕ್ಷವಾಗಿ ಕಾಂಗ್ರೆಸ್‌ಗೆ ‘ಉತ್ತಮ’ ಎಂದು ರೇಟಿಂಗ್ ನೀಡಲಾಗಿದೆ. ಕಾರ್ಯಕ್ಷಮತೆಗೆ 41 ರಷ್ಟು ರೇಟಿಂಗ್ ಕೊಡಲಾಗಿದೆ.
2024 ರ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ?
ಎನ್‌ಡಿಎ – 293
ಇಂಡಿಯಾ – 234
ಇತರೆ – 16



