ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೀಗ ವಯಸ್ಸು 80 ದಾಟಿದೆ. ಅರ್ಹತೆ, ಅನುಭವ ಎಲ್ಲವೂ ಇದ್ದರೂ, ಖರ್ಗೆ ಅವರಿಗೆ ಕರ್ನಾಟಕ ಸಿಎಂ ಪಟ್ಟ ಒಲಿದಿಲ್ಲ. ಆದರೆ, ಇದೀಗ ಸಿದ್ದರಾಮಯ್ಯ ಅವರು ಸಿಎಂ ಪಟ್ಟದಿಂದ ಕೆಳಗಿಳಿಯುವ ಪರಿಸ್ಥಿತಿ ಉದ್ಭವವಾದೆ ತಮ್ಮನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಿ ಎಂದು ಖರ್ಗೆಯವರು ಸೋನಿಯಾ ಮತ್ತು ರಾಹುಲ್ ಗಾಂಧಿ ಎದುರು ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬರುತ್ತಿದೆ.
ಮೂಲಗಳ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಎದುರು ಈ ಬಾರಿ ಏನಾದರೂ ಸಿದ್ಧರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದರೆ, ನನಗೆ ಅಧಿಕಾರ ಕೊಡಿ. ಡಿಕೆ ಶಿವಕುಮಾರ್ ಅವರಿಗೆ ಇನ್ನೂ ವಯಸ್ಸಿದೆ ಎಂದಿದ್ದಾರಂತೆ. ಇದನ್ನು ಸೋನಿಯಾ ಮತ್ತು ರಾಹುಲ್ ಇಬ್ಬರೂ ಕೇಳಿಸಿಕೊಂಡಿದ್ದಾರೆ. ಆದರೆ ಯಾವುದೇ ನಿರ್ಧಾರ ತಿಳಿಸಿಲ್ಲ ಎನ್ನಲಾಗಿದೆ.
ಖರ್ಗೆ ಅವರಿಗೆ ಈ ಹಿಂದೆ ಎರಡು ಬಾರಿ ಸಿಎಂ ಆಗುವ ಅವಕಾಶಗಳಿದ್ದವು.ಆದರೆ ಆಗಿರಲಿಲ್ಲ. ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿದಾಗ ಧರ್ಮಸಿಂಗ್ ಸಿಎಂ ಆಗಿದ್ದರು. ಇನ್ನೆರಡು ಬಾರಿ ಸಿದ್ಧರಾಮಯ್ಯ ಮುನ್ನೆಲೆಗೆ ಬಂದಿದ್ದ ಕಾರಣ, ಖರ್ಗೆ ಹಿಂದೆ ಹೋಗಬೇಕಾಗಿತ್ತು. ಆದರೆ ಈ ಬಾರಿ ಹಾಗಾಗುವುದಿಲ್ಲ ಎಂಬ ನಿರೀಕ್ಷೆ ಖರ್ಗೆ ಅವರಲ್ಲಿ ಇದೆ ಎನ್ನಲಾಗಿದೆ.
ಇತ್ತೀಚೆಗೆ ಸಿದ್ಧರಾಮಯ್ಯ ವಿರುದ್ಧ ಮುಡಾದಲ್ಲಿ 14 ಸೈಟುಗಳನ್ನು ಪಡೆದ ಹಗರಣ ಸುದ್ದಿಯಾಗುತ್ತಿರುವಾಗಲೇ, ಇತ್ತ ಖರ್ಗೆ ಕುಟುಂಬದ ವಿರುದ್ಧ ಬೆಂಗಳೂರಿನಲ್ಲಿ 5 ಎಕರೆ ಜಮೀನನ್ನು ಅಕ್ರಮವಾಗಿ ಪಡೆಯಲಾಗಿದೆ ಎಂಬ ದೂರು ಕೇಳಿ ಬಂದಿದೆ. ನೇರವಾಗಿ ಖರ್ಗೆವರ ಹಿರಿಯ ಮಗ ರಾಹುಲ್ ಖರ್ಗೆ ವಿರುದ್ಧವೇ ಆರೋಪ ಕೇಳಿ ಬಂದಿದೆ. ಸಮರ್ಥನೆ ಮಾಡಿಕೊಳ್ಳುತ್ತಿರುವುದು ಪ್ರಿಯಾಂಕ್ ಖರ್ಗೆ.
ಹಾಗಾದರೆ.. ಇದೆಲ್ಲವೂ ಪ್ಲಾನ್ ಪ್ರಕಾರವೇ ನಡೆಯುತ್ತಿದೆಯಾ..? ಇದು ಎಲ್ಲರ ಪ್ರಶ್ನೆಯೂ ಹೌದು. ಆದರೆ ಉತ್ತರ ಮಾತ್ರ ಇಲ್ಲ. ಒಂದು ಕಡೆ ಸಿಎಂ ಪಟ್ಟದಲ್ಲಿ ಕುಳಿತಿರುವ ಸಿಎಂ ಸಿದ್ಧರಾಮಯ್ಯ ಅವರ ರಾಜಕೀಯಕ್ಕೆ ಮಸಿ ಅಂಟಿಕೊಂಡಿದೆ. ತನಿಖೆಯ ನಂತರ ಸರಿಯೋ. ತಪ್ಪೋ.. ತಿಳಿಯುತ್ತದೆ ಎನ್ನುವುದೇನೋ ನಿಜ. ಆದರೆ, ಮಸಿ ಅಂಟಿಕೊಂಡಿರುವುದಂತೂ ಸತ್ಯ. ಇನ್ನು ಖರ್ಗೆಯವರಿಗೆ ಇದ್ದಕ್ಕಿದ್ದಂತೆ ಮಸಿ ಅಂಟಿಕೊಳ್ಳೋ ವೇಗದಲ್ಲಿದೆ. ಇದೂ ಕೂಡಾ.. ಅಷ್ಟೆ.
ಕಾನೂನು ಪ್ರಕಾರ ಸಿದ್ಧರಾಮಯ್ಯ ಅವರ ಪತ್ನಿ ಪಡೆದಿರುವ 14 ಸೈಟುಗಳು ಲೋಪ ಎನ್ನಬಹುದೇ ಹೊರತು, ಮೋಸ, ವಂಚನೆ ಎನ್ನುವುದಕ್ಕೆ ಬರುವುದಿಲ್ಲ. ಅಷ್ಟು ಪ್ರಬಲ ಸಾಕ್ಷಿಗಳು ಇದುವರೆಗೆ ಸಿಕ್ಕಿಲ್ಲ. ಇನ್ನು ರಾಹುಲ್ ಖರ್ಗೆ ಅವರು ಜಮೀನು ಪಡೆದಿರುವ ಪ್ರಕರಣವೂ ಅಷ್ಟೆ. ಕಾನೂನಿನ ಪ್ರಕಾರವೇ ಎಲ್ಲವೂ ನಡೆದಿದೆ. ಆದರೆ.. ಮೇಲ್ನೋಟಕ್ಕೆ ಏನೋ ಗೋಲ್ ಮಾಲ್ ಆಗಿದೆ ಎಂಬ ವಾತಾವರಣ ಇದೆ.
ಸಿದ್ಧರಾಮಯ್ಯ ಅವರು ಸಿಎಂ ಪಟ್ಟ ಬಿಟ್ಟುಕೊಡಲ್ಲ ಎಂಬ ಕಥೆಗೂ, ಖರ್ಗೆಯವರು ಸೋನಿಯಾ ಎದುರು ಸಿಎಂ ಪಟ್ಟದ ಆಸೆ ಹೇಳಿಕೊಂಡಿದ್ದಕ್ಕೂ.. ಒಂದಕ್ಕೊಂದು ಲಿಂಕ್ ಕಲ್ಪಿಸಿ ನೋಡಿದರೆ..ಹೌದು, ಸಂಥಿಂಗ್ ಈಸ್ ರಾಂಗ್.



