ಹಾವಿನ ಬಗ್ಗೆ ಇರುವ ಭಯ ಭಕ್ತಿಗಳಿಗೆ ಕಡಿಮೆ ಇಲ್ಲ. ನಾಗಪೂಜೆ, ಸರ್ಪದೋಷ, ಕುಜದೋಷ.. ಹೀಗೆ ಏನೆಂದರೂ ಜನ ಹೆದರ್ತಾರೆ. ಅಶ್ಲೇಷ ಬಲಿ ಇತ್ಯಾದಿ ಮಾಡ್ತಾರೆ. ಆದರೆ ಇದು ಹೊಸದು. ಹಾವಿನ ಹುತ್ತಕ್ಕೆ ಕೋಳಿ ಬಲಿ ಕೊಡುವುದು, ರಕ್ತ ನೈವೇದ್ಯ ಮಾಡುವುದು ಹಾಗೂ ಮೊಟ್ಟೆಯನ್ನೇ ಕೊಡುವುದು, ಎಡೆಯಾಗಿ ಅರ್ಪಿಸುವುದು ಹೊಸದು.
ಷಷ್ಠಿ ಪಂಚಮಿ ಅಂದ್ರೆ ಹಾವಿನ ಹುತ್ತಕ್ಕೆ ಹಾಲು, ತುಪ್ಪ ಎರೆಯುವ ಸಂಪ್ರದಾಯ ಪದ್ಧತಿಗಳು ಅನಾದಿಕಾಲದಿಂದಲೂ ಇವೆ. ಆದರೆ ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಡುವ, ರಕ್ತ ನೈವೇದ್ಯ ಮಾಡುವ ಹಾಗೂ ಮೊಟ್ಟೆಯನ್ನು ಎಡೆಯಾಗಿ ಅರ್ಪಿಸುವ ಪದ್ಧತಿ ನಡೆಯುತ್ತಿದೆ. ಷಷ್ಠಿ ದಿನ ಹುತ್ತಕ್ಕೆ ಹಾಲು, ತುಪ್ಪದ ಜೊತೆಗೆ ಕೋಳಿ ಬಲಿ ನೀಡಿ ಹುತ್ತಕ್ಕೆ ರಕ್ತದ ಅಭಿಷೇಕ ಮಾಡುತ್ತಾರೆ. ಆ ಮೂಲಕ ಹರಕೆ ತೀರಿಸುತ್ತಾರೆ. ಹೀಗಾಗಿಯೇ ಚಾಮರಾಜನಗರ ಜಿಲ್ಲೆಯಲ್ಲಿ ಆಚರಿಸುವ ಷಷ್ಠಿ ಹಬ್ಬ ಬೇರೆ ಜಿಲ್ಲೆಗಳಿಗಿಂತ ಭಿನ್ನ.
ಷಷ್ಠಿ ಹಬ್ಬ ಬಂದರೆ ಜಿಲ್ಲೆಯಲ್ಲಿ ಗ್ರಾಮದ ಹೊರಭಾಗದಲ್ಲಿರುವ ಹುತ್ತಗಳನ್ನ ಗುದ್ದಲಿಗಳಿಂದ ಸ್ವಚ್ಚಗೊಳಿಸಿ, ಪೊರಕೆ ಹಿಡಿದು ಸ್ವಚ್ಚಗೊಳಿಸುವುದು ಸಾಮಾನ್ಯ. ಆ ಕೆಲಸ ಗಂಡಸರಿಗಾದರೆ ಮಹಿಳೆಯರು ಹುತ್ತದ ಸುತ್ತ ರಂಗೋಲಿ ಬಿಟ್ಟು ಶೃಂಗರಿಸುತ್ತಾರೆ. ನಂತರ ಗ್ರಾಮಸ್ಥರು ಹುತ್ತದ ಬಳಿ ಬಂದು ಬಾಳೆ ಎಲೆ ಇಟ್ಟು ಅದರ ಮೇಲೆ ಸಂಪ್ರದಾಯದಂತೆ ಐದು ಕಲ್ಲುಗಳನ್ನ ಇಟ್ಟು ಅವುಗಳಿಗೆ ಅರಿಶಿಣ ಕುಂಕುಮ, ಬಾಳೆ ಹಣ್ಣು ಇಟ್ಟು ಕಾಯಿ ಒಡೆದು ಪೂಜಿಸುತ್ತಾರೆ. ನಂತರ ಮಹಿಳೆಯರು ತಂದಿದ್ದ ಹಾಲು, ತುಪ್ಪ, ಮೊಟ್ಟೆಗಳನ್ನ ಹುತ್ತದ ತೂತಗಳಿಗೆ ಹಾಕಿ ಒಳ್ಳೆಯದು ಮಾಡು ಎಂದು ನಾಗಪ್ಪನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಮತ್ತೊಂದು ಕಡೆ ಕೋಳಿ ಕೂಯ್ದು ಹುತ್ತಕ್ಕೆ ರಕ್ತದ ಅಭಿಷೇಕ ಮಾಡುತ್ತಾರೆ. ಒಂದು ವರ್ಷದಿಂದ ತಾವುಗಳೇ ಸಾಕಿದ ಹುಂಜವನ್ನು ಬಲಿ ಕೊಡುತ್ತಾರೆ. ಹೊಸದಾಗಿ ಮದುವೆಯಾದವರು ದಂಪತಿ ಸಮೇತ ಆಗಮಿಸಿ ಕೋಳಿ ಬಲಿಕೊಡುತ್ತಾರೆ. ಹುತ್ತಕ್ಕೆ ಕೋಳಿ ಬಲಿ ಕೊಡುವಾಗ ಬಹಳ ಶ್ರದ್ಧೆ ಭಕ್ತಿಯಿಂದ ಇರಬೇಕಾಗುತ್ತದೆ. ಈ ಸಂಪ್ರದಾಯವನ್ನ ಉತ್ತಳ್ಳಿ, ಮೂಡ್ಲುಪುರ, ಯಡಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಪ್ರತಿನಿತ್ಯ ಕೃಷಿ ಜಮೀನಿನ ಜೊತೆ ಭಾಂದವ್ಯ ಹೊಂದಿರುವ ರೈತರು ಜಮೀನಿಗೆ ತೆರಳುವಾಗ, ಜಮೀನಲ್ಲಿ ಕೆಲಸ ಮಾಡುವಾಗ ಹಾವುಗಳು ಕಾಣಿಸಿಬಾರದು, ಕಚ್ಚಬಾರದು ಎಂಬ ನಂಬಿಕೆಯಿಂದ ಷಷ್ಠಿ ದಿನದಂದು ಹುತ್ತಕ್ಕೆ ಕೋಳಿ ರಕ್ತದ ನೈವೇಧ್ಯ ಮಾಡುತ್ತಾರೆ. ಜಮೀನಲ್ಲಿ ಹಾವು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಮನೆಯ ಹಿರಿಯವರು ಇನ್ನು ಮುಂದೆ ಯಾರಿಗೂ ಕಾಣಿಸಿಕೊಳ್ಳಬೇಡ, ತೊಂದರೆ ಕೊಡಬೇಡ ನಾಗಪ್ಪ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಆ ದಿನವೇ ಹುಂಜವನ್ನು ಹರಕೆ ತೀರಿಸಲು ಬಿಡುತ್ತಾರೆ. ತಾವು ಹರಕೆ ಹೊತ್ತು ಕೊಂಡಂತೆ ಶ್ರದ್ಧೆಯಿಂದ ಷಷ್ಠಿ ದಿನದಂದು ಕೋಳಿ ರಕ್ತವನ್ನ ಹುತ್ತಕ್ಕೊ ನೈವೇದ್ಯ ಮಾಡಲಾಗುತ್ತದೆ. ಎಲ್ಲಾ ಹರಕೆ ತೀರಿಸಿದ ನಂತರ ನಾಗಪ್ಪ ಯಾವುದೇ ರೀತಿ ತೊಂದರೆ ಕೊಡುವುದಿಲ್ಲ ಎಂಬ ನಂಬಿಕೆ ಹಳ್ಳಿಗರದ್ದು..



