ಎಲ್ಲ ಕಡೆ ರಿಸಲ್ಟ್ ಹವಾ ಜೋರಾಗಿ ಏರುತ್ತಿದೆ. ಇಂತಹ ಸಮಯದಲ್ಲಿ ಎಲ್ಲರ ಕಣ್ಣೂ ಜೂನ್ 4ರ ಮೇಲಿದೆ. ಜೂನ್ 4ರಂದು ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲವಂತೂ ಇದೆ. ಕಾಂಗ್ರೆಸ್ ಪರ ಇರುವ ನಾಯಕರ ಮಾತು ಕೇಳುತ್ತಿದ್ದರೆ, ಈ ಬಾರಿ ಬಿಜೆಪಿ ಮತ್ತು ಎನ್ʻಡಿಎ 400+ ಗೆಲ್ಲೋದಿರಲಿ.. 200ರ ಗಡಿಯನ್ನೂ ದಾಟಲ್ಲ. ಬಿಜೆಪಿಯವರ ಪ್ರಕಾರ ಕಾಂಗ್ರೆಸ್+ 50ರ ಗಡಿಯನ್ನೂ ದಾಟಲ್ಲ. ಹಾಗೆ ನೋಡಿದರೆ.. ಎರಡೂ ರಾಜಕೀಯ ಹೇಳಿಕೆಗಳು ಉತ್ಪ್ರೇಕ್ಷೀತವಾಗಿಯೇ ಇವೆ. ರಾಜಕೀಯದಲ್ಲಿ ಅದು ಸಹಜವೂ ಹೌದು. ಹೀನಾಯವಾಗಿ ಸೋಲುವವರೆಗೆ ಅಥವಾ ಸೋಲು ಅಧಿಕೃತವಾಗುವವರೆಗೆ ರಾಜಕೀಯ ನಾಯಕರು ಗೆಲುವಿನ ವಿಶ್ವಾಸದಲ್ಲಿಯೇ ಇರ್ತಾರೆ. ಈಗ ಉದ್ಯಮ ಹಾಗೂ ಉದ್ಯಮಿಗಳ ಲೆಕ್ಕಾಚಾರವೂ ಒಂದು ಇರುತ್ತೆ ಅಲ್ವಾ..?
ಏಕೆಂದರೆ ಅದು ದುಡ್ಡಿನ ಜಗತ್ತು. ಷೇರು ಪೇಟೆಯ ಲೆಕ್ಕಾಚಾರ. ಚುನಾವಣೆಯಲ್ಲಿ ಎನ್ಡಿಎಗೆ 400ಕ್ಕೂ ಹೆಚ್ಚು ಸ್ಥಾನ ಬಂದರೆ ಏನಾಗಬಹುದು, ಸರಳ ಬಹುಮತ ಬಂದರೆ ಏನಾಗಬಹುದು, ಇಂಡಿಯಾ ಒಕ್ಕೂಟ ಗೆದ್ದರೆ ಏನಾಗಬಹುದು ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ನೊಮುರಾ ಪ್ರಕಾರ ಯಾರು ಗೆಲ್ಲುತ್ತಾರೆ ಎನ್ನುವುದರ ಜೊತೆಗೆ ಯಾರು ಗೆದ್ದರೆ ಯಾರಿಗೆ ಲಾಭ ಎಂಬ ವಿಶ್ಲೇಷಣೆ ಇದೆ.
ಎನ್ಡಿಎಗೆ 400ಕ್ಕೂ ಹೆಚ್ಚು ಸೀಟು ಬಂದರೆ..
ನೊಮುರಾ ಪ್ರಕಾರ ಎನ್ಡಿಎ ಮೈತ್ರಿಕೂಟ ನಿರೀಕ್ಷಿಸಿದಂತೆ 400 ಸ್ಥಾನ ಸಿಕ್ಕರೆ ದೇಶೀಯ ವಲಯದ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚುತ್ತದೆ. ಅದರಲ್ಲೂ ಹಣಕಾಸು ಸಂಸ್ಥೆಗಳು, ಇನ್ಫ್ರಾಸ್ಟ್ರಕ್ಚರ್, ಕೈಗಾರಿಕೆ ಮತ್ತು ಪಿಎಸ್ಯುಗಳ ಸ್ಟಾಕ್ಗಳಿಗೆ ಒಳ್ಳೆಯ ಬೇಡಿಕೆ ಬರುತ್ತದೆ.
ಆದರೆ, ಹೆಲ್ತ್ಕೇರ್, ಐಟಿ ಸರ್ವಿಸ್ ಕ್ಷೇತ್ರದ ಕಂಪನಿಗಳ ಷೇರುಗಳಿಗೆ ಹಿನ್ನಡೆ ಆಗಬಹುದು. ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಬಹುದು.
ಬಿಜೆಪಿಗೆ ಕೇವಲ ಸರಳ ಬಹುಮತ ಸಿಕ್ಕರೆ..
ಎನ್ಡಿಎಗೆ ದೊಡ್ಡ ಬಹುಮತ ಬರಲಿಲ್ಲ ಎಂದಿಟ್ಟುಕೊಳ್ಳಿ. ಆಗ ಷೇರು ಪೇಟೆಯ ವರ್ತನೆ ತುಸು ವಿಭಿನ್ನವಾಗಿರುತ್ತದೆ. ದೊಡ್ಡ ಮೌಲ್ಯದ ದೇಶೀಯ ವಲಯದ ಕಂಪನಿಗಳ ಷೇರು ಮೌಲ್ಯ ಕುಸಿಯಬಹುದು. ಅದರಲ್ಲೂ ಪ್ರಮುಖವಾಗಿ ಇನ್ಫ್ರಾಸ್ಟ್ರಕ್ಚರ್, ಪಿಎಸ್ಯು, ಕೈಗಾರಿಕೆಗಳ ಮೇಲೆ ಪರಿಣಾಮ ಬೀರಬಹುದು. ಆದರೆ, ಬ್ಯಾಂಕ್, ಫಾರ್ಮಾ ಸೆಕ್ಟರ್ನ ಷೇರುಗಳಿಗೆ ಬೇಡಿಕೆ ಹೆಚ್ಚಬಹುದು. ರುಪಾಯಿ ಮೌಲ್ಯ ತುಸು ಕಡಿಮೆ ಆದರೂ ಆಶ್ಚರ್ಯ ಇಲ್ಲ.
ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿ ಕೂಟ ಗೆದ್ದರೆ..
ಇಂಡಿ ಮೈತ್ರಿಕೂಟ ಅಚ್ಚರಿಯ ಫಲಿತಾಂಶ ಪಡೆದಲ್ಲಿ ಮಾರುಕಟ್ಟೆ ಬಹಳ ವಿಭಿನ್ನವಾಗಿ ವರ್ತಿಸಬಹುದು. ಹಣಕಾಸು, ಕೈಗಾರಿಕೆ, ಇನ್ಫ್ರಾಸ್ಟ್ರಕ್ಚರ್, ಪಿಎಸ್ಯು ಘಟಕದ ಕಂಪನಿಗಳ ಷೇರುಗಳ ಮೌಲ್ಯ ಗಣನೀಯವಾಗಿ ಕಡಿಮೆ ಆಗಬಹುದು. ಐಟಿ ಸರ್ವಿಸ್, ಪಾರ್ಮಾ ಸೆಕ್ಟರ್ನ ಷೇರುಗಳಿಗೆ ಬೇಡಿಕೆ ಬರಬಹುದು ಎಂದು ಗ್ಲೋಬಲ್ ಬ್ರೋಕರೇಜ್ ಸಂಸ್ಥೆಯಾದ ನೊಮುರಾ ತಿಳಿಸಿದೆ.



