ಇದು ಶಾಕ್ ಆಗಬಹುದಾದ.. ಆದರೆ.. ಶಾಕ್ ಆಗದ.. ಹೆಮ್ಮೆ ಪಡುವಂತಹ ಸುದ್ದಿ. ನಟ ಮೋಹನ್ ಲಾಲ್, ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಎನ್ನುವುದೇನೋ ಗೊತ್ತು. ಮಲಯಾಳಂ ಚಿತ್ರರಂಗದಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮೋಹನ್ ಲಾಲ್, ನಟ, ನಿರ್ಮಾಪಕ, ಗಾಯಕ, ವಿತರಕ ಹಾಗೂ ನಿರ್ದೇಶನವನ್ನೂ ಮಾಡಿರುವ ಪ್ರತಿಭಾವಂತ. ಪದ್ಮಶ್ರೀ ಮತ್ತು ಪದ್ಮಭೂಷಣ ಪುರಸ್ಕಾರಗಳನ್ನೂ ಪಡೆದಿರುವ ಮೋಹನ್ ಲಾಲ್, ಇತ್ತೀಚೆಗೆ ಆರ್ಮಿ ಯೂನಿಫಾರ್ಮಿಲ್ಲಿ ಬಂದಿದ್ದು ಎಲ್ಲರ ಹುಬ್ಬೇರಿಸಿದೆ.
ಕೇರಳದ ವಯನಾಡಿನಲ್ಲಿ ಸಂಭವಿಸಿರುವ ದುರಂತ, ಬೆಟ್ಟಗಳೇ ಕೊಚ್ಚಿಕೊಂಡು ಬಂದು, ಹಳ್ಳಿ ಹಳ್ಳಿಗಳನ್ನೇ ಸಮಾಧಿ ಮಾಡಿರುವುದು ಗೊತ್ತೇ ಇದೆ. ದುರಂತ ಸ್ಥಳಕ್ಕೆ ನಟ ಮೋಹನ್ ಲಾಲ್ ಭೇಟಿ ನೀಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಏಕೆಂದರೆ ಅವರು ಬಂದಿದ್ದು ಸೇನಾ ಯೂನಿಫಾರ್ಮಿನಲ್ಲಿ. ಅದೂ ಕೂಡಾ ಭುಜದ ಮೇಲೆ ಲೆ.ಕರ್ನಲ್ ಎಂಬ ಪಟ್ಟಿಯೂ ಇತ್ತು.
ಏಕೆಂದರೆ ಲೋಕಸಭೆ ಪ್ರತಿಪಕ್ಷ ನಾಯಕ, ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಕೂಡಾ ಭೇಟಿ ನೀಡಿದ್ದರು. ಹಲವು ರಾಜಕೀಯ ನಾಯಕರು ದುರಂತ ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದಾರೆ. ಆದರೆ ಯಾರೊಬ್ಬರೂ ಕೂಡಾ ಸೈನಿಕರ ಜೊತೆ ಹೋಗಿ ಬಂದಿದ್ದಾರೆಯೇ ಹೊರತು, ಸೈನಿಕರ ಯೂನಿಫಾರ್ಮ್ ಹಾಕಿಲ್ಲ. ಆದರೆ, ಮೋಹನ್ ಲಾಲ್ ಸೈನಿಕರ ಯೂನಿಫಾರ್ಮ್ ಹಾಕಿದ್ಧಾರೆ. ಅಷ್ಟೇ ಅಲ್ಲ, ಈ ವೇಳೆ ಹಲವು ಕಿರಿಯ ಅಧಿಕಾರಿಗಳು ಮೋಹನ್ ಲಾಲ್ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಅದಕ್ಕೆ ಕಾರಣವೂ ಇದೆ.
ನಟ ಮೋಹನ್ ಲಾಲ್ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಕೂಡಾ ಹೌದು. ಹಾಗಂತ ಮೋಹನ್ ಲಾಲ್ ಸೈನ್ಯದಲ್ಲಿ ಹೋರಾಡಿದವರೇನೂ ಅಲ್ಲ. ಅವರಿಗೆ ಭಾರತೀಯ ಸೇನೆ ಗೌರವಾರ್ಥವಾಗಿ ಈ ಹುದ್ದೆ ನೀಡಿದೆ, ಅಷ್ಟೆ. ಮೋಹನ್ ಲಾಲ್ ಅವರು ತಮ್ಮ ಹಲವು ಚಿತ್ರಗಳಲ್ಲಿ ನಿರ್ವಹಿಸಿದ್ದ ಸೈನ್ಯಾಧಿಕಾರಿಯ ಪಾತ್ರದಿಂದ ಸೇನೆಯ ಮೇಲೆ ಗೌರವ ಮೂಡುವಂತೆ ಮಾಡಿದ್ದಾರೆ ಎಂದ ಕಾರಣಕ್ಕೆ ಈ ಗೌರವ ಹುದ್ದೆ ನೀಡಲಾಗಿದೆ. ಈ ಹುದ್ದೆಗೆ ಸಂಬಳವನ್ನೂ ಕೊಡಲಾಗುತ್ತೆ. ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಪಡೆದವರಿಗೆ ಯುದ್ಧ ಅಥವಾ ಯಾವುದೇ ಸೈನ್ಯದ ಕೆಲಸದಲ್ಲಿ ಮಾರ್ಗದರ್ಶನ ನೀಡುವ ಅಧಿಕಾರ ಇರುವುದಿಲ್ಲ. ಆದರೆ, ಗೌರವವನ್ನಂತೂ ನೀಡುತ್ತೆ ಇಂಡಿಯನ್ ಆರ್ಮಿ. ಹೀಗಾಗಿಯೇ ಮೋಹನ್ ಲಾಲ್ ಅವರು ವಯನಾಡು ದುರಂತ ಸ್ಥಳದಲ್ಲಿ ಸೈನಿಕರ ಯೂನಿಫಾರ್ಮಿನಲ್ಲಿ ಹೋಗಿದ್ದು ಹಾಗೂ ಕಿರಿಯ ಅಧಿಕಾರಿಗಳು ಅವರಿಗೆ ಸೆಲ್ಯೂಟ್ ಹೊಡೆದಿದ್ದು.
ಇದಿಷ್ಟೇ ಅಲ್ಲ, ನಟ ಮೋಹನ್ ಲಾಲ್ ತಮ್ಮ ಟ್ರಸ್ಟ್ ಮೂಲಕ ಸುಮಾರು ೩ ಕೋಟಿ ನೆರವು ನೀಡಿದ್ದು, ಟ್ರಸ್ಟ್ ಸ್ವಯಂಸೇವಕರ ಮೂಲಕವೂ ಸಂತ್ರಸ್ತರ ಕಷ್ಟಕ್ಕೆ ನೆರವಾಗಿದ್ದಾರೆ. ಅಲ್ಲಿದ್ದ ಸೈನಿಕರು ಮೇಲಧಿಕಾರಿ ಹುದ್ದೆಗೆ ಯಾವ ರೀತಿಯ ಗೌರವ ಕೊಡಬೇಕೋ.. ಹಾಗೆಯೇ ಗೌರವ ಕೊಟ್ಟಿದ್ದಾರೆ.
ಭಾರತದಲ್ಲಿ ಮಹೇಂದ್ರ ಸಿಂಗ್ ಧೋನಿ, ಕಪಿಲ್ ದೇವ್ ಅವರು ಸೈನ್ಯದಲ್ಲಿ, ವಾಯುಪಡೆಯಲ್ಲಿ ಸಚಿನ್ ತೆಂಡೂಲ್ಕರ್ ಇದೇ ರೀತಿಯ ಗೌರವ ಹುದ್ದೆ ಹೊಂದಿದ್ದಾರೆ. ಒಟ್ಟು ೩೦ಕ್ಕೂ ಹೆಚ್ಚು ಸೆಲಬ್ರಿಟಿಗಳಿಗೆ ಗೌರವ ಹುದ್ದೆ ನೀಡಲಾಗಿದೆ.ಈ ಗೌರವ ಹುದ್ದೆ ಪಡೆದವರಿಗೆ ಸಂಬಳ ನೀಡಲಾಗುತ್ತಿದೆಯಾದರೂ, ಯಾವೊಬ್ಬ ಗೌರವ ಹುದ್ದೆ ಪಡೆದಿರುವ ಭಾರತೀಯ ಸೆಲಬ್ರಿಟಿಗಳೂ ಸಂಬಳ ಪಡೆಯುತ್ತಿಲ್ಲ.



