ನಟಿ ಪ್ರಣೀತಾ ಸುಭಾಷ್ (Praneetha Subhash) ಹಿಂದೂ ಧರ್ಮದ ಆಚರಣೆ, ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಅವರ ಸೋಷಿಯಲ್ ಮೀಡಿಯಾ ಪೇಜ್ ಸರ್ವಾಲಂಕೃತ ಭೂಷಿತವಾಗಿರುತ್ತೆ. ಹೀಗಿದ್ದರೂ ಪ್ರಣೀತಾ ಅವರಿಗೆ ಕಾಟ ತಪ್ಪಿದ್ದಲ್ಲ. ಆಕೆ ಸಂಪ್ರದಾಯ ಆಚರಣೆ ಮಾಡಿದರೆ, ಹಿಂದೂ ವಿರೋಧಿಗಳು ಅಟ್ಯಾಕ್ ಮಾಡ್ತಾರೆ. ಗ್ಲಾಮರಸ್ ಡ್ರೆಸ್ ಹಾಕಿದರೆ ಆಕೆ ಒಬ್ಬ ನಟಿ, ಅದು ಆಕೆಯ ವೃತ್ತಿ ಎಂಬುದೂ ಗೊತ್ತಿಲ್ಲದೆ ಇದ್ದಬದ್ದವರೆಲ್ಲ ಮಡಿವಂತಿಕೆಯ ಪಾಠ ಹೇಳ್ತಾರೆ. ಆದರೆ ಪ್ರಣೀತಾ ಈ ಎಲ್ಲವನ್ನೂ ಸ್ಫೋರ್ಟಿವ್ ಆಗಿಯೇ ತೆಗೆದುಕೊಂಡು ಹೋಗ್ತಾರೆ. ಆಷಾಡದ ಕೊನೆಯ ಅಮಾವಾಸ್ಯೆಯಂದೂ ಹೀಗೆಯೇ ಆಯ್ತು
ಆಷಾಢದ ಕೊನೆಯ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಪತಿ ಮತ್ತು ಸಹೋದರರ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಗಂಡನ ಪಾದ ಪೂಜೆ ಮಾಡ್ತಾರೆ. ಪ್ರಣೀತಾ (Praneetha Subhash) ಮಾಡಿದ್ದೂ ಇದನ್ನೇ. ಭೀಮನ ಅಮಾವಾಸ್ಯೆಯಂದು ಪತಿಯ ಪಾದಪೂಜೆ ಮಾಡಿದ ಕುರಿತು ನಟಿ ಪ್ರಣೀತಾ (Praneetha Subhash) ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಣೀತಾ ಉದ್ಯಮಿ ನಿತಿನ್ ಅವರ ಜೊತೆ ಮದುವೆಯಾಗಿದ್ದಾರೆ. ಕಳೆದ ವರ್ಷ ಭೀಮನ ಅಮಾವಾಸ್ಯೆಯ (Bheemana Amavasye) ಪೂಜೆಯ ದಿನ ಪತಿಯ ಪಾದ ಪೂಜೆ ಮಾಡಿದ್ದಕ್ಕೆ ಕೆಲವರು ಟೀಕಿಸಿದ್ದರು. ಇದು ಗುಲಾಮಗಿರಿ. ಹೆಣ್ಣನ್ನು ಗಂಡನ ಕಾಲಡಿ ಇಡುವ ಕುತಂತ್ರ. ಸಂಪ್ರದಾಯದ ಹೆಸರಲ್ಲಿ ಹೆಂಗಸರನ್ನು ಮೂರ್ಖರನ್ನಾಗಿ ಮಾಡ್ತಾರೆ. ಮಹಿಳೆ ತನ್ನ ಹಕ್ಕು, ಗೌರವಗಳನ್ನು ಉಳಿಸಿಕೊಳ್ಳಬೇಕು ಎಂದೆಲ್ಲ ಪ್ರಣೀತಾಗೆ ಬುದ್ದಿವಾದ ಹೇಳಿದ್ದರು. ಅದಕ್ಕೆಲ್ಲ ಪ್ರಣೀತಾ ಉತ್ತರ ಕೊಟ್ಟಿರಲಿಲ್ಲ.
ಮತ್ತೆ ಒಂದು ವರ್ಷದ ನಂತರ ಭೀಮನ ಅಮಾವಾಸ್ಯೆ (Bheemana Amavasye) ಬಂದಿದೆ. ಪ್ರಣೀತಾ ಮತ್ತೊಮ್ಮೆ ಪಾದ ಪೂಜೆ ಮಾಡಿ, ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲ, ಕಳೆದ ಬಾರಿ ತಮ್ಮ ಪೋಸ್ಟ್ ಸೃಷ್ಟಿಸಿದ್ದ ಚರ್ಚೆಯನ್ನೂ ನೆನಪಿಸಿಕೊಂಡಿದ್ದಾರೆ. (Sanathana Dharma) ಸನಾತನ ಧರ್ಮದಲ್ಲಿ ಪ್ರತಿಯೊಂದಕ್ಕೂ ತನ್ನದೇ ಮಹತ್ವ ಇರುತ್ತೆ. ಆ ಆಚರಣೆಗಳನ್ನು ಪೂರ್ಣವಾಗಿ ತಿಳಿದುಕೊಂರೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ಹಿಂದೂಗಳ (Sanathana Dharma) ಆಚರಣೆಗಳನ್ನೆಲ್ಲ ತಲೆಬುಡವಿಲ್ಲದ್ದು ಎಂದು ಟೀಕಿಸುವ ಆತುರ ಬೇಡ. ಹೆಣ್ಣು ದೇವತೆಗಳನ್ನೂ ಪೂಜಿಸುವ ಸಂಪ್ರದಾಯ ಇರುವುದು (Hindu Dharma) ಹಿಂದೂ ಧರ್ಮದಲ್ಲಿ ಮಾತ್ರ ಎಂದು ಟ್ವೀಟ್ ಮಾಡಿದ್ದಾರೆ ಪ್ರಣೀತಾ ಸುಭಾಷ್.



