ಯಶ್ ಅವರ ಮೂವರು ಅಭಿಮಾನಿಗಳು ಮೃತಪಟ್ಟಿದ್ಧಾರೆ. ಅಭಿಮಾನಿಗಳು ಸಾಯುವುದನ್ನ ಯಾರೂ ಇಷ್ಟ ಪಡಲ್ಲ. ಆದರೆ ಯಶ್ ಆ ದುರಂತವನ್ನೂ ಕಣ್ಣಾರೆ ನೋಡುವಂತಾಗಿದೆ. ಸರ್ಕಾರವೇನೋ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಯಶ್ ಅವರಿಂದಲೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಹಲವರದ್ದು. ಆದರೆ ಯಶ್ ಮನಸ್ಥಿತಿ ಹೇಗಿದೆ..? ಯಶ್ ಅವರ ಮಾತುಗಳನ್ನೊಮ್ಮೆ ಕೇಳಿದರೆ ಗೊತ್ತಾಗುತ್ತದೆ.
ಬ್ಯಾನರ್ ಹಾಕಿ ಅಭಿಮಾನ ವ್ಯಕ್ತಪಡಿಸಬೇಕು ಎಂಬುದನ್ನು ನಾವು ಯಾರೂ ಇಷ್ಟಪಡುವುದಿಲ್ಲ. ಪ್ರತಿ ವರ್ಷ ಬರ್ತ್ಡೇ ಬಂದಾಗ ಇಂಥ ಒಂದು ಘಟನೆ ನಡೆದರೆ ಬರ್ತ್ಡೇ ಎಂದರೆ ನನಗೆ ಭಯ ಬಂದಿದೆ. ನಿಜ ಹೇಳಬೇಕು ಎಂದರೆ ನನ್ನ ಬಗ್ಗೆ ನನಗೆ ಅಸಹ್ಯ ಆಗಿದೆ. ಎಲ್ಲಿಂದಲೋ ಅವರು ಪ್ರೀತಿಯಿಂದ ಹರಸಿದರೆ ಸಾಕು. ಇದೇ ನಿಜವಾದ ಬರ್ತ್ಡೇ. ಇದು ಯಶ್ ಅವರ ಮಾತು.
ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು ಹೇಳಿ ಚಿತ್ರೀಕರಣಕ್ಕೆ ತೆರಳಿದ್ದ ಯಶ್ ಅವರನ್ನು ದಿಢೀರ್ ಎಂದು ಗದಗ ಜಿಲ್ಲೆಗೆ ಬರುವಂತೆ ಮಾಡಿದ್ದು ಅಭಿಮಾನಿಗಳ ಸಾವು. ಬರ್ತ್ಡೇ ಬ್ಯಾನರ್ ಹಾಕಲು ಹೋದ ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಹನುಮಂತ ಹರಿಜನ, ಮುರಳಿ ನಡವಿನಮನಿ ಮತ್ತು ನವೀನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟರು. ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲು ಗೋವಾದಿಂದ ಬಂದಿದ್ದ ಯಶ್ ಹೇಳಿದ್ದು ಈ ಮಾತು.
ನಿಜ ಹೇಳುತ್ತೇನೆ ಕೇಳಿ. ಅವರು ಎಲ್ಲಿಂದಲೂ ಕೂತು ಪ್ರೀತಿಯಿಂದ ನಮಗೆ ಹರಸಿದರೆ ಸಾಕು. ಅದೇ ನಿಜವಾದ ಬರ್ತ್‌ಡೇ. ಈ ವರ್ಷ ನಾನು ಬರ್ತ್‌ಡೇ ಮಾಡದೇ ಇರೋದಕ್ಕೆ ಕಾರಣನೇ ನೀವು. 10-15 ದಿನಗಳ ಮುಂಚೆ ಎಲ್ಲಾ ಕೋವಿಡ್ ಅಂತ ಶುರು ಮಾಡಿದ್ರಲ್ಲ. ನಮ್ಮ ಬರ್ತ್‌ಡೇ ಅಂತ ಯಾರಿಗೂ ತೊಂದರೆ ಆಗಬಾರದು. ಯಾರಿಗೂ ಆರೋಗ್ಯ ಹಾಳಾಗಬಾರದು, ಬೇಕು ಅಂತಲೇ ಬರ್ತ್‌ಡೇ ಕ್ಯಾನ್ಸಲ್ ಮಾಡಿದ್ದು ಎಂದ ಯಶ್ಬರ್ತ್‌ಡೇ ಬೇಡ ಅಂದರೂ, ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಮಾಡಿದರೆ ಏನಾದರೂ ಒಂದು ಆಗುತ್ತೆ. ಮನೆಗೆ ಯಾರು ಬೇಕಾದರೂ ಸಹಾಯ ಮಾಡಬಹುದು. ಆದರೆ, ಮನೆಗೆ ಮಗ ಬರುತ್ತಾನಾ? ಮನೆಯಲ್ಲಿ ಮಕ್ಕಳನ್ನು ಕಳ್ಕೊಂಡವರು ಏನು ಹೇಳ್ತಾರೆ? ನಮ್ಮ ಮನೆಯಲ್ಲಿ ಸಾವು ಆದರೂ ಏನು ಹೇಳುವುದಕ್ಕೆ ಸಾಧ್ಯ ಹೇಳಿ? ಏನು ಕೊಟ್ಟರೂ ಮಗ ಬರುತ್ತಾನಾ? ಇನ್ನೂ 20-25 ವರ್ಷದ ಹುಡುಗರು ಎಂದು ಕಣ್ಣೀರಿಟ್ಟಿದ್ದಾರೆ.
ಹೀಗೆ ಬ್ಯಾನರ್ ಕಟ್ಟೋದು, ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬರೋದು. ಫೋಟೊ ತೆಗೆಯೋದು, ಸೆಲ್ಫಿ ತೆಗೆಯೋದು ಇವನ್ನೆಲ್ಲ ಬಿಟ್ಟು ಬಿಡಿ. ನನ್ನ ಸುತ್ತಮುತ್ತ ಜನ ಇರಬೇಕು ಅಂತ ಬಯಸೋದಿಲ್ಲ. ಬೇಜಾರು ಮಾಡಿಕೊಂಡರೂ ಪರ್ವಾಗಿಲ್ಲ ಅಂತ ನಾನು ಯಾರ ಕೈಗೂ ಸಿಗೋದಿಲ್ಲ ಎಂದಿರುವ ಯಶ್ ಮೃತರ ಕುಟುಂಬಕ್ಕೆ ಸಹಾಯ ನೀಡುವ ಭರವಸೆ ಕೊಟ್ಟಿದ್ದಾರೆ.
ಈಗ ಪರಿಹಾರ ಘೋಷಿಸುವುದು ದೊಡ್ಡ ವಿಷಯ ಅಲ್ಲ. ಏನು ಬೇಕಾದರೂ ನಾನು ಮಾತಾಡಬಹುದು. ಆದರೆ ನಿಜವಾಗಿ ಇವರ ಕುಟುಂಬಕ್ಕೆ ಏನು ಅವಶ್ಯಕತೆ ಇದೆಯೋ ಅದನ್ನು ಮಾಡೋಣ. ಅವರ ಕುಟುಂಬಕ್ಕೆ ಮಾಡಬೇಕಾಗಿದ್ದನ್ನು ನಾನು ಮಾಡುತ್ತೇನೆ. ಹಾಗಂತ ಇದು ಒಂದು ಪಾಠ ಆಗಬಾರದು. ಯಾರು ಬೇಜಾರು ಮಾಡಿಕೊಂಡರೂ ಪರವಾಗಿಲ್ಲ. ಇಂದು ಯಾಕೆ ಬಂದು ನೋಡುತ್ತೇವೆ ಎಂದರೆ, ತಂದೆ-ತಾಯಿ ಮೇಲೆ ಇರುವ ಗೌರವಕ್ಕೆ. ಈ ಪ್ರಕರಣದಲ್ಲಿ ಆಗಿದ್ದು ಅವಘಡ. ಅವರಿಗೆ ಗೊತ್ತಾಗದೆಯೇ ಹೀಗೆ ಆಗಿದೆ. ನಮ್ಮ ಮೇಲಿನ ಅಭಿಮಾನಕ್ಕಾಗಿ ನಿಮ್ಮ ಜೀವಕ್ಕೆ ಹಾನಿ ಮಾಡಿಕೊಳ್ಳಬೇಡಿ. ಪ್ರೀತಿ, ಗೌರವ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಹೇಳಿದ್ದಾರೆ ಯಶ್.



