ಕಸ್ತೂರಿ, ಜೀ ಕನ್ನಡ ಟಿವಿಗಳಲ್ಲಿ ಮನರಂಜನಾ ಟಿವಿ ಶೋಗಳ ನಿರೂಪಕಿ ಆಗಿರುವ ಅನುಶ್ರೀ, ಕನ್ನಡದ ನಂಬರ್ ಒನ್ ಸ್ಟೇಜ್ ಆಂಕರ್. ಅನುಶ್ರೀ ಅವರ ವಿಶೇಷ ಏನಂದ್ರೆ, ಅವರು ಹಿಂದಿನಿಂದಲೂ ತಾವು ಪುನೀತ್ ಅವರ ಫ್ಯಾನ್ ಎಂದು ಹೇಳಿಕೊಳ್ತಿದ್ರು. ರಿಯಾಲಿಟಿ ಶೋನಲ್ಲಿ ಸುಳ್ಳು ಹೇಳುವ ಸ್ಪರ್ಧೆ ಇದ್ದ ಸಂದರ್ಭದಲ್ಲಿ ಅನುಶ್ರೀ ಅವರಿಗೆ ʻನನಗೆ ಪುನೀತ್ ಎಂದರೆ ಇಷ್ಟ ಇಲ್ಲʼ ಎಂದು ಹೇಳಲಾಗಿತ್ತು. ಸ್ಪರ್ಧೆ ಬಿಡುತ್ತೇನೆಯೇ ಹೊರತು, ಪುನೀತ್ ಇಷ್ಟ ಇಲ್ಲ ಎಂದು ಹೇಳಲ್ಲ ಎಂದು ಹೇಳಿದ್ದ ಅನುಶ್ರೀ ಅವರಿಗೆ ಪುನೀತ್ ಅವರ ಜೊತೆ ಕಳೆದ ಸುಮಧುರ ನೆನಪುಗಳಿವೆ. ಪುನೀತ್ ನಿಧನದ ಒಂದಷ್ಟು ತಿಂಗಳು ನಿರೂಪಣೆಯಿಂದಲೂ ಬ್ರೇಕ್ ತೆಗೆದುಕೊಂಡಿದ್ದ ಅನುಶ್ರೀ ಅವರು, ತಿಂಗಳ ನಂತರ ಶಾಕ್ʻನಿಂದ ಹೊರಬಂದಿದ್ದರು. ಇತ್ತೀಚೆಗೆ ಅನುಶ್ರೀ ತಮ್ಮ ಮತ್ತು ಪುನೀತ್ ಅವರ ಬಾಂಧವ್ಯದ ಬಗ್ಗೆ ಮಾತನಾಡುತ್ತಾ ನೀವು ಯಾರ ಅಭಿಮಾನಿಯಾದರೂ ಆಗಿರಿ. ಪುನೀತ್ ಅವರನ್ನು ಒಮ್ಮೆ ಭೇಟಿ ಮಾಡಿದರೆ ಸಾಕು. ಆಮೇಲೆ ಅವರು ಪುನೀತ್ ಫ್ಯಾನ್ ಆಗುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಅನುಶ್ರೀ ಹೇಳಿದ ಮೊದಲ ಭೇಟಿಯ ಕಥೆ :
ಅನುಶ್ರೀ ಒಂದು ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿದ್ದರಂತೆ. ಅದಿನ್ನೂ ಆರಂಭದ ದಿನಗಳು. ಅನುಶ್ರೀ ಅವರಿಗೆ ಯಾರ ಪರಿಚಯವೂ ಇಲ್ಲ. ಮಾತನಾಡಿಸುವವರೂ ಇಲ್ಲ. ಜಾಗ ಕೂಡಾ ಹೊಸದು. ಹೊರಟು ಹೋಗೋಣ ಎಂದುಕೊಂಡು ಹೊರಬಂದರೆ.. ಹೊರಗೆ ರೆಸ್ಟೋರೆಂಟಿನಲ್ಲಿ ಕಂಡವರು ಪುನೀತ್ ಸರ್.
ಹೇ… ನಾನು ನಿಮ್ಮನ್ನೆಲ್ಲೋ ನೋಡಿದ್ದೇನೆ ಎಂದರು. ಸರ್ ಅನುಶ್ರೀ ಅಂದೆ. ಹೇ ನಮ್ಮ ಕನ್ನಡ ಹುಡುಗಿ. ಯಾಕೆ ಏನಾಯ್ತು? ನೀವು ತುಂಬಾ ಡಲ್ ಇದ್ದೀರಲ್ವಾ? ಏನಾಯ್ತು? ಅಂದ್ರು. ಇಲ್ಲ ಸರ್ ನನಗೆ ಇಲ್ಲಿ ಯಾರೂ ಗೊತ್ತಿಲ್ಲ. ಎಲ್ಲಾರೂ ಸುಮ್ಮನೆ ಅವರಷ್ಟಕ್ಕೆ ಇದ್ದಾರೆ. ನನಗೆ ಏನು ಮಾಡಬೇಕೆಂದು ಗೊತ್ತಾಗ್ತಿಲ್ಲ ಎಂದೆ. ಕೂಡಲೇ ಅಪ್ಪು 2 ನಿಮಿಷ ಬಂದೆ ಅಂತ ಕೈ ತೊಳೆದು ಬಂದು. ಕೆಳಗೆ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ ಊಟ ಕೊಡಿಸಿದರು. ಅವತ್ತು ಅಪ್ಪು ಸರ್ ಜೊತೆ ವಿನಯ್ ರಾಜಕುಮಾರ್ ಕೂಡಾ ಇದ್ರು. ಸುಮಾರು 40 ನಿಮಿಷ ಮಾತನಾಡಿ, ಊಟ ಮಾಡಿಸಿ.. ಆಮೇಲೆ ಅವರ ಕಾರ್ ಡ್ರೈವರ್ʻನ ಕರೆದು ನನಗೆ ಡ್ರಾಪ್ ಮಾಡಿಸಿದರು.
ಅನುಶ್ರೀ ಜೀವನದ ಸೂಪರ್ ಹೀರೋ ಅಪ್ಪು :
ಅಪ್ಪು ಅವರೊಬ್ಬ ಪವರ್ ಸ್ಟಾರ್. ನಾನು ಒಬ್ಬ ಕಾಂಜಿ ಪೀಂಜಿ . ಅವರು ಪರದೆ ಮೇಲೆ ಮಾತ್ರವ ಹೀರೋ ಆಗಲಿಲ್ಲ. ನಿಜ ಜೀವನದಲ್ಲೋ ಹೀರೋ ಆಗಿದ್ದರು ಅನ್ನೋದು ಅವರು ಹೋದ ದಿನ ಇಡೀ ಜಗತ್ತಿಗೆ ಗೊತ್ತಾಯ್ತು. ನನಗೆ ಅವರನ್ನು ಭೇಟಿ ಮಾಡಿದ ಪ್ರತಿ ಕ್ಷಣವೂ ಥ್ರಿಲ್ ಆಗುತ್ತಿದೆ. ಮುಖವೆಲ್ಲ ಕೆಂಪಾಗುತ್ತಿತ್ತು. ನನ್ನ ಕಷ್ಟದ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿದ ವ್ಯಕ್ತಿ ಅಪ್ಪು ಸರ್.
ಎಂತ ಪಲ್ಟಿ ಹಾಕುದು ಮಾರೆ.. ಇವ್ರು.. :
ಅನುಶ್ರೀ ಕೂಡಾ ಡ್ಯಾನ್ಸರ್. ಡ್ಯಾನ್ಸರ್ ಆಗಿಯೇ ವೃತ್ತಿ ಜೀವನ ಆರಂಭಿಸಿದವ್ರು. ಹೀಗಾಗಿ ಅನುಶ್ರೀಗೆ ಅಪ್ಪು ಡ್ಯಾನ್ಸ್ ಅಂದ್ರೆ ಇಷ್ಟ. ನಾನು ಡಾನ್ಸರ್ ಆಗಿರುವುದರಿಂದ ಅವರ ಡ್ಯಾನ್ಸ್ ನನಗೆ ತುಂಬಾ ಇಷ್ಟ. ಕನ್ನಡದಲ್ಲಿ ನಮ್ಮ ಜನರೇಶನ್‌ನಲ್ಲಿ ಅಪ್ಪು ಸರ್ ಡಾನ್ಸ್ ಮಾಡಿದ ರೀತಿ ಯಾರೂ ಮಾಡಿರಲ್ಲ. ಅದಕ್ಕಿಂತ ಮೊದಲು ಶಶಿಕುಮಾರ್, ವಿನೋದ್ ರಾಜ್ ಸರ್ ತುಂಬಾ ಜನ ಸೂಪರ್ ಡಾನ್ಸ್ ಮಾಡುತ್ತಿದ್ದರು. ನಮಗೆ ಫಿಲ್ಮ್ ನೋಡಲು, ನಾವು ಅರ್ಥ ಮಾಡಿಕೊಳ್ಳಲು ಆರಂಭಿಸಿದ ದಿನದಿಂದ ಅದು ಜಸ್ಟ್ ಅಪ್ಪು. ತಾಲಿಬಾನ್ ಅಲ್ಲಾ ಅಲ್ಲಾ ನೋಡಿದಾಗ ನಾನು ಅಂದುಕೊಳ್ಳುತ್ತಿದ್ದೆ. ಎಂತಾ ಪಲ್ಟಿ ಹಾಕುದು ಮಾರೆ ಇವರು ಅಂತ. ನಮಗೆ ಅದು ದೊಡ್ಡ ವಿಷ್ಯವಾಗಿತ್ತು.
ನಾನು ಇಂಡಸ್ಟ್ರಿಗೆ ಹೋಗುವಲ್ಲಿಯವರೆಗೆ ಅವರೊಬ್ಬ ಡಾನ್ಸರ್, ನಟ, ರಾಜ್ ಕುಮಾರ್ ಪುತ್ರ ಎಂದಷ್ಟೇ ಅಂದುಕೊಳ್ಳುತ್ತಿದ್ದೆ. ನಾನು ಯಾವಾಗ ಅವರನ್ನು ಭೇಟಿ ಆದೆ ಅಲ್ಲಿಂದ ಅವರ ವ್ಯಕ್ತಿತ್ವಕ್ಕೆ ಫ್ಯಾನ್ ಆದೆ. ನೀವು ಪ್ರಪಂಚದಲ್ಲಿ ಯಾರದ್ದೇ ಫ್ಯಾನ್ ಆಗಿರಿ. ಆದರೆ ಅವರು ಸಿಕ್ಕಿದ ಮೇಲೆ ಖಂಡಿತವಾಗಿಯೂ ನೀವು ಅಪ್ಪು ಫ್ಯಾನ್ ಆಗ್ತಿರಿ. ಅವರದ್ದು ಅಂತಹ ವ್ಯಕ್ತಿತ್ವ.
ಅಪ್ಪು ಸರ್ʻಗೆ ಹಾರ್ಟ್ ಅಟ್ಯಾಕ್ ಆಗಲ್ಲ ಎಂದೇ ನಂಬಿದ್ದೆ :
ಅಪ್ಪು ಕನ್ನಡಿಗರನ್ನು ಅಗಲಿದ ದಿನ ಅನುಶ್ರೀ ಗೋವಾದಲ್ಲಿದ್ದರಂತೆ. ನಾನು ಗೋವಾದಲ್ಲಿ ಶೂಟಿಂಗ್ ನಲ್ಲಿದ್ದೆ. ಬೆಳಗ್ಗೆ ನನಗೆ ಕಾಲ್ ಬಂತು ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತ. ನಾನು ಆಗ ರಿಯಾಕ್ಟ್ ಮಾಡಿಲ್ಲ. ಯಾಕೆಂದರೆ ಈಗಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಕಾಮನ್. ಅಪ್ಪು ಸರ್ ಗೆ ಏನು ಆಗುತ್ತೆ? ಅವರಿಗೆ ಏನೂ ಆಗುವುದಿಲ್ಲ. ಅವರು ಚೆನ್ನಾಗಿರುತ್ತಾರೆ ಅಂದುಕೊಂಡೆ. ಅರ್ಧ ಗಂಟೆ ಆದ ಬಳಿಕ ಮತ್ತೆ ಕಾಲ್ ಮಾಡಿ ಅವರಿಲ್ಲ ಅಂದರು. ನಾನು ಏನೂ ರಿಯಾಕ್ಟ್ ಮಾಡಿಲ್ಲ. ಅಳು ಕೂಡ ಬರಲಿಲ್ಲ. ಶೂಟಿಂಗ್ ನಿಲ್ಲಿಸಿ ತಕ್ಷಣ ಏರ್ಪೂರ್ಟ್ ಹೋದೆ. ಅಲ್ಲಿ ಡೈರೆಕ್ಟರ್ ಅಥವಾ ಸೆಟ್ ಗೆ ನಾನು ಏನೂ ಹೇಳಲಿಲ್ಲ. ವಿಮಾನದಲ್ಲಿ ಬರುವಾಗ, ಬೆಂಗಳೂರಿನಲ್ಲಿ ಕ್ಯಾಬ್ʻನಲ್ಲಿ ಹೋಗುವಾಗ ನನಗೆ ಅಳುನೂ ಬರಲಿಲ್ಲ. ಒಂಥರಾ ಸೆಲೆನ್ಸ್ ಇತ್ತು. ಮನೆಗೆ ಹೋಗಿ 10 ಸೆಕೆಂಡ್ ನೋಡಿ ಹೊರಟು ಹೋದೆ. ಅವರನ್ನ ಬಾಕ್ಸ್ʻನಲ್ಲಿನೋಡುವುದಕ್ಕೆ ನನಗೆ ಇಷ್ಟ ಇರಲಿಲ್ಲ ಎಂದಿರುವ ಅನುಶ್ರೀ ಅವರ ಜೊತೆಗೆ ಕಳೆದಿರುವ ಹಂಚಿಕೊಂಡಿರುವ ತೀರಾ ಪರ್ಸನಲ್ ನೆನಪುಗಳಿವೆ. ಅದನ್ನೆಲ್ಲ ಹೇಳಿಕೊಳ್ಳುವುದಿಲ್ಲ. ಯಾಕೆಂದರೆ ಅದು ನನ್ನ ಜೀವನದ ದುಬಾರಿ, ಮರೆಯಲಾರದ ನೆನಪುಗಳು. ಹೀಗಾಗಿ ಹಂಚಿಕೊಳ್ಳುವುದಿಲ್ಲ. ಅದು ನನಗಾಗಿ ನಾನಿಟ್ಟುಕೊಳ್ಳಬೇಕು ಎಂದಿದ್ದಾರೆ.



