ಬಿಜೆಪಿ- ಜೆಡಿಎಸ್ ಮೈತ್ರಿಯ ಫಲವಾಗಿ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಬಹುದು ಎಂಬ ವರದಿಗಳ ನಡುವೆಯೇ, ತಮಗೆ ಮಂಡ್ಯದ ಮೊದಲ ಬಿಜೆಪಿ ಸಂಸದೆಯಾಗುವ ಆಸೆಯಿದೆ ಎಂದು ಹಾಲಿ ಸಂಸದೆ ಸುಮಲತಾ ಹೇಳಿದ್ದಾರೆ. ರಾಜ್ಯದ ಮೊದಲ ಪಕ್ಷೇತರ ಸಂಸದೆಯಾಗಿ ಈಗಾಗಲೇ ದಾಖಲೆ ಬರೆದಿರುವ ಸುಮಲತಾ ಅವರಿಗೆ ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡೋ ಮನಸ್ಸಿದೆ.
ಮಂಡ್ಯದಲ್ಲಿ ಬಿಜೆಪಿಗೆ ಬೇಸ್ ಇಲ್ಲ. ಆದರೆ ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟ ರಚನೆಯಾಗಿದೆ. ಹೀಗಾಗಿ ಮಂಡ್ಯ ಕ್ಷೇತ್ರ ಬಿಜೆಪಿಗೆ ಸಿಕ್ಕರೆ, ಸುಮಲತಾ ಅವರಿಗೆ ಟಿಕೆಟ್ ಕೊಟ್ಟರೆ, ಸುಮಲತಾ ಗೆದ್ದರೆ ಸುಮಲತಾ ಅವರ ಆಸೆ ಈಡೇರಿದರೂ ಅಚ್ಚರಿ ಇಲ್ಲ.
2018 ವಿಧಾನಸಭಾ ಚುನಾವಣೆಯ ಫಲಿತಾಂಶ ನೋಡಿದರೆ ಬಿಜೆಪಿಗೆ ಎಷ್ಟು ಶೇಕಡವಾರು ಮತ ಬಂದಿದೆ ಅಂತ ಗೊತ್ತಾಗುತ್ತೆ. ಆದರೂ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳೇ ಬೇರೆ ಬೇರೆ ಮೋದಿಯವರ ಶಕ್ತಿ, ಬಿಜೆಪಿ ಇವೆಲ್ಲಾ ಬಳಸಿ ಮತ್ತೆ ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಅನ್ನೋ ಆಸೆ ನನಗಿದೆ’ ಎಂದು ಸುಮಲತಾ ಬಿಜೆಪಿ ಟಿಕೆಟ್‌ನಿಂದ ಕಣಕ್ಕೆ ಇಳಿಯುವ ಆಸೆ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಸುಮಲತಾ ಅಂಬರೀಷ್, ಜೆಡಿಎಸ್ಸಿನ ನಿಖಿಲ್ ಕುಮಾರಸ್ವಾಮಿ ವಿರುದ್ಧವೇ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ಆಗ ನಿಖಿಲ್ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಒಮ್ಮತದ ಅಭ್ಯರ್ಥಿಯಾಗಿದ್ದರು. ಆದರೆ ಈ ಬಾರಿ ಜೆಡಿಎಸ್, ಬಿಜೆಪಿ ಜೊತೆಗೂಡಿ ಬಂದಿದೆ. ಮೂಲಗಳ ಪ್ರಕಾರ ಜೆಡಿಎಸ್ ಒಟ್ಟು 4 ಕ್ಷೇತ್ರಗಳನ್ನು ಕೇಳಿದೆ ಎನ್ನಲಾಗಿದೆ.
ಕಳೆದ ಬಾರಿ 27ರಲ್ಲಿ ಸ್ಪರ್ಧಿಸಿ 25 ಕ್ಷೇತ್ರಗಳನ್ನು ಸ್ವತಃ ಬಿಜೆಪಿ ಗೆದ್ದಿತ್ತು. ಸುಮಲತಾ ಅವರ ಎದುರು ಅಭ್ಯರ್ಥಿ ಹಾಕಿರಲಿಲ್ಲ. ಸುಮಲತಾ ಅವರಿಗೆ ಬೆಂಬಲ ಘೋಷಿಸಿತ್ತು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಹಾಗೆ ನೋಡಿದರೆ ಜೆಡಿಎಸ್ ಗೆದ್ದಿದ್ದದ್ದು ಒಂದೇ ಕ್ಷೇತ್ರದಲ್ಲಿ, ಅದೂ ಹಾಸನದಲ್ಲಿ. ಉಳಿದಂತೆ ಜೆಡಿಎಸ್ʻಗೆ ಬಿಜೆಪಿಯೇ ತಾನು ಈಗಾಗಲೇ ಗೆದ್ದಿರುವ ತಮ್ಮದೇ ಸಂಸದರಿರುವ ಕ್ಷೇತ್ರಗಳನ್ನೇ ಬಿಟ್ಟುಕೊಡಬೇಕಾದ ಪರಿಸ್ಥಿತಿ ಇದೆ.



