ಈ ವಾರ ಪ್ರಣಾಮ್ ದೇವರಾಜ್ ಅವರ ಎರಡನೇ ಸಿನಿಮಾ ರಿಲೀಸ್ ಆಗ್ತಾ ಇದೆ. ಸನ್ ಆಫ್ ಮುತ್ತಣ್ಣ ಸಿನಿಮಾ ಟ್ರೇಲರ್ ರಿಲೀಸ್ ಮಾಡಿರುವುದು ಶಿವರಾಜ್ ಕುಮಾರ್. ಈ ವೇಳೆ ದೇವರಾಜ್ ದೊಡ್ಮನೆಯ ದೊಡ್ಡ ಗುಣವನ್ನು ಹಾಡಿ ಹೊಗಳಿದ್ದಾರೆ. ಇದನ್ನು ತಮ್ಮ ಮಕ್ಕಳೂ ಕಲಿಯಬೇಕು ಎಂದು ವೇದಿಕೆಯ ಮೇಲೆಯೇ ಹೇಳಿದ್ದಾರೆ. ದೇವರಾಜ್ ಅವರಿಗೆ ಇಷ್ಟವಾಗಿದ್ದು ಅನಾರೋಗ್ಯದ ನಡುವೆಯೇ ಒಪ್ಪಿಕೊಂಡು ಕಾರ್ಯಕ್ರಮಕ್ಕೆ ಬಂದ ಶಿವಣ್ಣ ಅವರ ಕಮಿಟ್ʻಮೆಂಟ್.
ನನಗೆ ಶಿವಣ್ಣ ಆರೋಗ್ಯ ಸರಿ ಇಲ್ಲ ಅನ್ನೋದು ಗೊತ್ತಿತ್ತು. ಹೀಗಾಗಿ ಅಳುಕಿನಿಂದಲೇ ಆಹ್ವಾನ ಕೊಟ್ಟಿದ್ದೆ ಎಂದಿರೋ ದೇವರಾಜ್ “ನಾನು ಶಿವಣ್ಣ ಅವರನ್ನು ಮೀಟ್ ಮಾಡುವುದಕ್ಕೆ ಹೋದಾಗ ಮೀಟ್ ಮಾಡಿದ್ದು ಎರಡೇ ನಿಮಿಷ. ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿಲ್ಲ. ನನಗೆ ಎಲ್ಲ ವಿಷಯಗಳೂ ಗೊತ್ತಿತ್ತು. ನಾನು ತೊಂದರೆ ಕೊಡಬಾರದು ಎಂದುಕೊಂಡಿದ್ದರೂ ಭೇಟಿ ಮಾಡಿದ್ದೆ. ಇದರ ಬಗ್ಗೆ ನನ್ನ ಮನಸ್ಸಲ್ಲಿ ಒಂದು ಅಳುಕೂ ಇತ್ತು. ಆದರೆ ಅಲ್ಲಿ ಹೋದ ಕೂಡಲೇ ನೀವ್ಯಾಕೆ ಬರುವುದಕ್ಕೆ ಹೋದ್ರಿ, ಹೋಗಿ ದೇವರಾಜ್ ಅವರೇ.. ನಾನು ಬರ್ತೀನಿ. ಅಂತ ಹೇಳಿದರು. ಇದು ದೊಡ್ಮನೆಯ ದೊಡ್ಡ ಗುಣ” ಎಂದು ಹೇಳಿದ್ದಾರೆ.
ಶಿವಣ್ಣ ಜಾಗದಲ್ಲಿ ತಾನೇ ಏನಾದ್ರೂ ಇದ್ದಿದ್ದರೆ ಆಗೋದಿಲ್ಲ ಅಂತ ನೇರವಾಗಿ ಹೇಳುತ್ತಿದ್ದೆ ಎಂದಿರೋ ದೇವರಾಜ್ ಎಷ್ಟೋ ಸಲ ಇಲ್ಲಾರೀ ನನ್ನ ಕೈಯಲ್ಲಿ ಆಗಲ್ಲ ಅಂತ ಹೇಳಿ ತಪ್ಪಿಸಿಕೊಂಡು ಬಿಟ್ಟಿದ್ದೇನೆ. ಆ ಕೆಲಸವನ್ನು ಅವರೂ ಮಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ನಮ್ಮ ಹುಡುಗರು, ನಮ್ಮ ಮಕ್ಕಳು ಬೆಳೆಯಬೇಕು. ನಾನು ಬರುತ್ತೇನೆ ಎಂದು ಹೇಳಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು” ಎಂದಿದ್ದಾರೆ.
ಅದಾದ ನಂತರ ತಮ್ಮ ಮಕ್ಕಳಿಗೂ ಇದೇ ಮಾತು ಹೇಳಿರುವ ದೇವರಾಜ್ . ಇದನ್ನು ನನ್ನ ಮಕ್ಕಳು ಮರೆಯಬಾರದು ಅಂತ ಹೇಳ್ತೀನಿ. ಈ ಗುಣಗಳನ್ನು ನೋಡಿ ಕಲಿಯುವಂತಹ ಅವಕಾಶ ನಿಮಗೆ ಸಿಕ್ಕಿದೆ. ಅವರ ಕುಟುಂಬವೇ ಹೇಳಿಕೊಂಡಂತೆ ಕೀರ್ತಿ, ಯಶಸ್ಸು, ದುಡ್ಡು ಎಲ್ಲವೂ ಜನರು ಪ್ರೀತಿಯಿಂದ ಕೊಟ್ಟಿದ್ದು. ನಾವು ಬರುತ್ತೇವೆ. ನಮಗೆ ಕಲಾವಿದರಾಗಿ ಒಂದು ಅವಕಾಶ ಸಿಕ್ಕಿದೆ. ಅದನ್ನು ಮನಸ್ಪೂರ್ತಿಯಾಗಿ ಜನರಿಗೆ ಒಪ್ಪಿಸಿ, ಅವರ ಜನರಿಗೆ ಅಷ್ಟೇ ಪ್ರೀತಿ ಪಾತ್ರರಾಗಿ ಎಲ್ಲೂ ಕೆಟ್ಟ ಹೆಸರು ತೆಗೆದುಕೊಳ್ಳದೆ ಮುಂದುವರೆಯ ಬೇಕು ಎಂದು ಹಾರೈಸುತ್ತೇನೆ” ಎಂದು ಹೇಳಿದ್ದಾರೆ.
ಅನಾರೋಗ್ಯದ ನಡುವೆಯೂ ಮಾತನಾಡಿದ ಶಿವಣ್ಣ ತಮ್ಮ ತುಂಟತನದ ಬಗ್ಗೆಯೆ ಮಾತನಾಡಿದ್ದಾರೆ. ತುಂಟತನ ಇರಬೇಕು. ಅದು ಇಲ್ಲದೆ ಮನುಷ್ಯ ಇಲ್ಲ. ನನಗೆ ಈ ವಯಸ್ಸಿನಲ್ಲೂ ತುಂಟತನವಿದೆ.. ಏನು ಮಾಡಲಿ. ನಾನು ಇರೋದೆ ಹೀಗೆ… ತಿದ್ದುವುದಕ್ಕೆ ಆಗಲ್ಲ ಎಂದು ಹೇಳಿಕೊಂಡಿರೋ ಶಿವಣ್ಣ, ಇವತ್ತೂ ವಾಕಿಂಗ್ ಮಾಡುವಾಗ ಚೇಷ್ಠೆ ಮಾಡಿಕೊಂಡು ಡ್ಯಾನ್ಸ್ ಮಾಡಿಕೊಂಡು ಹೋಗ್ತಾರಂತೆ.



