ಒಬ್ಬೊಬ್ಬರಿಗೂ ಒಂದೊಂದು ಶಕ್ತಿ ಇರುತ್ತದೆ. ಅಹಂ ಇರುತ್ತದೆ. ಅಧಿಕಾರ ಇದ್ದವರಿಗೆ ಈ ರೀತಿಯ ಅಹಂಕಾರ, ಅಹಂ, ಹಮ್ಮು ಬಿಮ್ಮು ಸಾಮಾನ್ಯ. ಅಂತಹವರ ಅಹಂ ಕೂಡಾ ಇಳಿಯುತ್ತದೆ. ಆದರೆ ಅದು ಒಳ್ಳೆಯತನದಿಂದ ಇಳಿಯುತ್ತದಲ್ಲ.. ಅದರ ಪರಿಣಾಮವೇ ಬೇರೆ. ಪುನೀತ್ ಅವರ ಬಗ್ಗೆ ಅದೆಷ್ಟೋ ಜನರ ತಪ್ಪು ಕಲ್ಪನೆಗಳು ಅವರ ಸಾವಿನ ನಂತರ ಬದಲಾಗಿದ್ದು ವಿಶೇಷ. ಅಂತಹುದೇ ಘಟನೆ ಇದು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪುನೀತ್ ಅವರ ಜೊತೆ ಪರಿಚಯ ಇದ್ದ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ ಕಥೆ ಇದು.
ತಮಿಳುನಾಡು ಮೂಲದ ಪಿ. ಹರಿಶೇಖರನ್ ಹಲವು ವರ್ಷಗಳಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದ್ದಾರೆ. ಅವರೇ ಹೇಳಿಕೊಂಡಿರುವಂತೆ ಪುನೀತ್ ಅವರ ಇಗೋವನ್ನು ಒಡೆದು ಹಾಕಿಬಿಟ್ಟರು. ಅದೂ ಕೇವಲ ಸರಳತೆಯಿಂದ. ವಿನಯದಿಂದ. ಅಷ್ಟೆಲ್ಲ ಆಗಿಯೂ ಅವರ ದೊಡ್ಡತನ ನನಗೆ ಅರ್ಥವಾಗಿದ್ದು, ಅವರ ಸಾವಿನ ನಂತರವೇ. ಅವರು ಇವತ್ತಿಗೂ ಜೀವಂತವಿದ್ದಾರೆ. ಆದರೆ ಅವರು ಬದುಕಿದ್ದಾಗ ತೋರಿಸಿದ್ದ ಸರಳತೆಯನ್ನು, ವಿನಯವಂತಿಕೆಯನ್ನು ನಾನೇ ಅರ್ಥ ಮಾಡಿಕೊಳ್ಳಲಿಲ್ಲ ಎಂದಿದ್ದಾರೆ ಹರಿಶೇಖರನ್.
ಹರಿಶೇಖರನ್ ಅವರನ್ನ ಪುನೀತ್ ಯಾವಾಗಲೂ ಸಾಹೇಬ್ರೇ ಎಂದು ಕರೆಯುತ್ತಿದ್ದರಂತೆ. ಕೆಲ ವರ್ಷಗಳ ಹಿಂದೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಮಾಡುವುದಕ್ಕೆ ಪ್ಲಾನ್ ಮಾಡಿದ್ದೆವು. ಆಗ ನನ್ನ ಜೊತೆಗಿದ್ದ ಇನ್ನೊಬ್ಬ ಅಧಿಕಾರಿ ಪುನೀತ್ ಅವರನ್ನು ಕರೆಯೋಣ ಸಾರ್, ಅವರು ಬಂದರೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದಂತಾಗುತ್ತೆ ಎಂದರು. ನಾನು ಅಹಂನಲ್ಲೇ ಆಯ್ತು ಕರೀರಿ ಎಂದರೆ. ಇನ್ಸ್`ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರು ಹೋಗಿ ಕರೆದರು. ಆಕ್ಚುವಲಿ ನಾನೇ ಕರೆಯಬೇಕಿತ್ತು. ಅಹಂ ಇತ್ತು. ಹೋಗಲಿಲ್ಲ. ಆದರೆ ಆ ಅಧಿಕಾರಿ ಕರೆಯುತ್ತಿದ್ದಂತೆಯೇ.. ಹರಿಶೇಖರನ್ ಸರ್ ಕರೆದ್ರಾ? ಹಾಗಿದ್ದರೆ ನಾನು ಬರ್ತೀನಿ ಎಂದು ಒಪ್ಪಿ ಕಾರ್ಯಕ್ರಮಕ್ಕೆ ಬಂದರು. ನಾನು ಒಂದು ಫೋನ್ ಕೂಡಾ ಮಾಡಲಿಲ್ಲ. ತಪ್ಪು ಮಾಡಿಬಿಟ್ಟೆ ಎಂದು ಇವತ್ತಿಗೂ ಅನಿಸ್ತಾ ಇದೆ ಎಂದು ಹೇಳಿಕೊಂಡಿರೋ ಹರಿಶೇಖರ್ ಅವರಿಗೆ ಅದಾದ ಮೇಲೂ ಪುನೀತ್ ಸಿಗುತ್ತಿದ್ದರಂತೆ.
ಆ ದಿನ ಕಾರ್ಯಕ್ರಮಕ್ಕೆ ಬಂದ ಪುನೀತ್ ಪ್ರೀತಿಯಿಂದ ಮಾತನಾಡಿಸಿದರು. ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡರು. ಸರ್ ಎಂಬ ಗೌರವ, ಮುಗುಳುನಗೆ ಸದಾ ಇರುತ್ತಿತ್ತು. ನನ್ನ ರನ್ನಿಂಗ್ ಪ್ರಾಕ್ಟೀಸ್ ಬಗ್ಗೆ ಅವರಿಗೆ ಗೊತ್ತಿತ್ತು. ನನ್ನ ಬಗ್ಗೆ ತುಂಬಾ ಗೊತ್ತಿತ್ತು. ಆಪ್ತತೆಯಿಂದ ಮಾತನಡುತ್ತಿದ್ದರು. ನಾನು ಹೋಗುತ್ತಿದ್ದ ಜಿಮ್`ನಲ್ಲಿಯೇ ಅವರು ಬರುತ್ತಿದ್ದರು. ಅದನ್ನೂ ಅವರೇ ಹೇಳಿದ್ದರು. ಮನೆ ಕಟ್ಟಿಸಿದ್ರಂತೆ.. ಕರೆಯಲೇ ಇಲ್ಲ ಎಂದು ಹೇಳುತ್ತಿದ್ದರು. ನಾನು ಪ್ರತಿ ಹಂತದಲ್ಲೂ ಅಹಂನಲ್ಲಿಯೇ ಇದ್ದೆ.
ನನ್ನ ಮಗನೂ ಅದೇ ಜಿಮ್ಮಿಗೆ ಹೋಗೋದು. ಅಕಸ್ಮಾತ್ ನಾನು ಹೋಗದ ದಿನ ನನ್ನ ಮಗನನ್ನು ಮಾತನಾಡಿಸಿ, ತಂದೆಯವರು ಚೆನ್ನಾಗಿದ್ದಾರಾ ಎಂದು ವಿಚಾರಿಸಿಕೊಳ್ಳುತ್ತಿದ್ದರು. . ನಾನು ಒಂದು ದಿನ ಕೂಡ ಅವರನ್ನು ನೋಡಿದ ಕೂಡಲೇ ನಾನಾಗಿಯೇ ಮಾತನಾಡಿಸಲಿಲ್ಲ, ವಿಶ್ ಮಾಡಲಿಲ್ಲ. ಅಪ್ಪು ಸಾವಿನ ಬಳಿಕ ನನ್ನ ಪತ್ನಿಗೆ ಈ ಎಲ್ಲ ವಿಷಯ ಹೇಳಿದಾಗ, ತುಂಬಾ ನೊಂದುಕೊಂಡಳು. ‘ನೀವು ತಪ್ಪು ಮಾಡಿಬಿಟ್ಟಿರಿ. ಮನೆಗೆ ಊಟಕ್ಕೆ ಕರೆಯಬಹುದಿತ್ತು ಎಂದು ಪೇಚಾಡಿಕೊಂಡಳು. ಆದರೆ ನಾನು ಊಟಕ್ಕೆ ಕರೆಯಲಿಲ್ಲವೇ ಎಂಬ ನೋವು ಈಗಲೂ ಕಾಡುತ್ತಿದೆ. ಅಪ್ಪು ಅಗಲಿದ ಮೇಲೆ ಅಭಿಮಾನಿಗಳ ಪ್ರೀತಿ ನೋಡಿದಾಗ, ನಾನು ಅಪ್ಪುಗೆ ಗೌರವ ನೀಡಲಿಲ್ಲ ಎನಿಸಿ ಮನಸ್ಸು ಭಾರವಾಗುತ್ತದೆ ಎಂದು ನೋವು ಹಂಚಿಕೊಂಡಿದ್ದಾರೆ ಹರಿಶೇಖರನ್.
ಪುನೀತ್ ಅವರಿಗೆ ತಾನೊಬ್ಬ ಸ್ಟಾರ್ ನಟ ಎಂಬ ಫೀಲ್ ಇರಲಿಲ್ಲ. ಡಾ.ರಾಜ್ ಕುಮಾರ್ ಅವರ ಮಗ ಎಂದೂ ತೋರಿಸಿಕೊಳ್ತಾ ಇರಲಿಲ್ಲ. ನಾನೊಬ್ಬ ಐಪಿಎಸ್ ಆಫೀಸರ್ ನಿಜ. ಆದರೆ ಇಲಾಖೆಯಲ್ಲಿ ಅವರಿಗೆ ಹಲವು ಐಪಿಎಸ್ ಆಫೀಸರುಗಳು ಗೊತ್ತಿದ್ದರು. ಆದರೆ ನನ್ನನ್ನು ಕಂಡಾಗಲೆಲ್ಲ ಪ್ರೀತಿ, ಗೌರವದಿಂದ ತಲೆ ಬಗ್ಗಿಸಿ ಮಾತನಾಡ್ತಾ ಇದ್ರು. ನನ್ನ ಜೊತೆ ತಮಿಳಿನಲ್ಲಯೇ ಮಾತನಾಡುತ್ತಿದ್ದರು. ನಾನು ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿಯೇ ಸರ್ ಎನ್ನುತ್ತಿದ್ದರು. ದೇವರು ಕೊಟ್ಟಿದ್ದನ್ನು ಇಲ್ಲದವರಿಗೆ ಕೊಡಬೇಕು. ಅಪ್ಪು ಆ ಕೆಲಸ ಮಾಡಿದ್ದರು. ಒಬ್ಬ ನಟ ಇಷ್ಟು ದೊಡ್ಡದಾಗಿ ಅಭಿಮಾನ ಸಂಪಾದಿಸಬಹುದು ಎಂದು ನಾನು ಕಲ್ಪನೆ ಕೂಡಾ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ಹರಿಶೇಖರನ್.
ಪುನೀತ್ ಇಲ್ಲವಾದ ಮೇಲೆ ಪುನೀತ್ ಅವರ ಘನತೆಯ ಅರಿವು ಹರಿಶೇಖರ್ ಅವರಿಗೆ ಆಗಿದೆ. ಎಷ್ಟೋ ಜನರ ಶಕ್ತಿ ಮತ್ತು ವ್ಯಕ್ತಿತ್ವ ಅರಿವಾಗುವುದೇ ಅವರು ದೂರವಾದ ಮೇಲೆಂತೆ. ಹರಿಶೇಖರ್ ಅವರಿಗೂ ಹಾಗೆಯೇ ಆಗಿದೆ. ಅದನ್ನೇ ಅವರು ಪ್ರಾಮಾಣಿಕತೆಯಿಂದ ಹೇಳಿಕೊಂಡಿದ್ದಾರೆ. ಗುಡ್.



