ಮಲ್ಲಿಕಾರ್ಜುನ ಖರ್ಗೆ ಸಾಮಾನ್ಯವಾಗಿ ತಾವು ಅನುಭವಿಸಿದ ರಾಜಕೀಯ ಸಂಕಷ್ಟಗಳನ್ನು ಹೇಳಿಕೊಳ್ಳೋದೇ ಇಲ್ಲ. ಅಂತಹ ಖರ್ಗೆಯವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಾವು ಸಿಎಂ ಆಗುವುದನ್ನು ತಪ್ಪಿಸಿದ ಘಟನೆ ನೆನಪಿಸಿಕೊಂಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಖರ್ಗೆ ತಮಗೆ ಸಿಎಂ ಸ್ಥಾನ ಸಿಗದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ʻʻರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದೆ. ಆದರೆ, ಸಿಎಂ ಆಗಿದ್ದು ಎಸ್‍ಎಂ ಕೃಷ್ಣ. ನಾನು ಸಲ್ಲಿಸಿದ ಸೇವೆ ನೀರಲ್ಲಿ ಹೋಯ್ತು ಎಂದಿದ್ದಾರೆ. ಹಿಂದೆ ನಾನು ಸಿಎಲ್‌ಪಿ ಲೀಡರ್ ಆಗಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ಹಾಕಿದೆ. ಆದರೆ, ಅಂದು ಮುಖ್ಯಮಂತ್ರಿ ಆಗಿದ್ದು ಎಸ್.ಎಂ.ಕೃಷ್ಣ ಎಂದು ಬೇಸರ ಹೊರಹಾಕಿದ್ದಾರೆ.
ಖರ್ಗೆಗೆ ಸಿಎಂ ಪಟ್ಟ ತಪ್ಪಿದ್ದು ಹೇಗೆ…?
1999ರ ಅಕ್ಟೊಬರ್ 11ರಂದು ಎಸ್ ಎಂ ಕೃಷ್ಣ ಕರ್ನಾಟಕ ಸಿಎಂ ಆದರು. ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಎಸ್ ಎಂ ಕೃಷ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಯ್ತು. ಒಕ್ಕಲಿಗರ ವೋಟು ಕೈತಪ್ಪುವ ಭಯದಲ್ಲಿ ಕೃಷ್ಣ ಅವರನ್ನು ನೇಮಿಸಲಾಯ್ತು. ಕೃಷ್ಣ ವೇಷ ಧರಿಸಿ ಪ್ರಚಾರ ಮಾಡಿದ ಎಸ್ ಎಂ ಕೃಷ್ಣ, ಒಕ್ಕಲಿಗರ ಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದರು. ಆದರೆ.. ಅಂತಾದ್ದೊಂದು ವಿಜಯಕ್ಕೆ ಪಕ್ಷವನ್ನು, ಕಾರ್ಯಕರ್ತರನ್ನು ಸಿದ್ಧ ಪಡಿಸಿದ್ದವರು ಮಾತ್ರ ಮಲ್ಲಿಕಾರ್ಜುನ ಖರ್ಗೆ. ಖರ್ಗೆಯವರ ನೇತೃತ್ವದಲ್ಲೇ ಚುನಾವಣೆ ನಡೆದು, ಗೆದ್ದಿದ್ದರೆ ಆಗಲೇ ಖರ್ಗೆ ಸಿಎಂ ಆಗುತ್ತಿದ್ದರಾ.. ಗೊತ್ತಿಲ್ಲ. ಮುಗಿದು ಹೋದ ಇತಿಹಾಸವನ್ನು ಮತ್ತೆ ಬರೆಯೋಕೆ ಆಗಲ್ಲ.
ದೇವೇಗೌಡರ ಭಯದಿಂದ ಕೈತಪ್ಪಿದ್ದ ಸಿಎಂ ಪಟ್ಟ..!
ಅದಾದ ಮೇಲೆ ಸಮ್ಮಿಶ್ರ ಸರ್ಕಾರ ಬಂದಾಗ, ಕಾಂಗ್ರೆಸ್ಸಿಗರು ಖರ್ಗೆ ಹೆಸರನ್ನು ಮುಂದಿಟ್ಟರಂತೆ. ಆದರೆ.. ದೇವೇಗೌಡರು ಒಪ್ಪಲಿಲ್ಲವಂತೆ. ಅದಕ್ಕೆ ಕಾರಣ ಇಷ್ಟೇ.. ನಾಳೆ ಏನಾದರೂ ಎಡವಟ್ಟಾಗಿ ಮೈತ್ರಿ ಕಟ್ ಆದರೆ, ಬೆಂಬಲ ವಾಪಸ್ ತೆಗೆದುಕೊಂಡರೆ.. ದಲಿತ ಮುಖ್ಯಮಂತ್ರಿಯನ್ನು ಕೆಳಗಿಳಿಸಿದ ಹಣೆ ಪಟ್ಟಿ ಕಟ್ಟಿಕೊಳ್ಳೋದು ಗೌಡರಿಗೆ ಇಷ್ಟವಿರಲಿಲ್ಲ. ಹೀಗಾಗಿಯೇ ಯಾವುದೇ ಪ್ರಬಲ ಸಮುದಾಯಕ್ಕೆ ಸೇರದ ಧರ್ಮಸಿಂಗ್ ಸಿಎಂ ಆದರು. ಧರ್ಮಸಿಂಗ್ ಅವರು, ರಾಜ್ಯದಲ್ಲಿ ಅಸ್ಥಿತ್ವವೇ ಇಲ್ಲದ ರಜಪೂತ ಸಮುದಾಯದವರು.
ದೇವೇಗೌಡರ ಲೆಕ್ಕಾಚಾರ ಹುಸಿಯಾಗಲಿಲ್ಲ. ಮುಂದೆ ಯಡಿಯೂರಪ್ಪ ಸಿಎಂ ಆದಾಗ.. ಅವರನ್ನು ಕೆಳಿಗಿಳಿಸಿದ್ದಕ್ಕೆ ಲಿಂಗಾಯತರು ಜೆಡಿಎಸ್‌ನಿಂದ ದೂರವಾದರು ಎನ್ನುವುದು ನಿಜ. ಅಷ್ಟೇ ಅಲ್ಲ, ಸಿದ್ಧರಾಮಯ್ಯ ಅವರಿಂದಾಗಿ ಕುರುಬರೂ ಕೂಡಾ ಜೆಡಿಎಸ್‌ನಿಂದ ದೂರ ಉಳಿದಿದ್ದಾರೆ.
ಸಿದ್ಧರಾಮಯ್ಯ ಹಠದಿಂದ ಒಮ್ಮೆ ಮಿಸ್..!
ಇನ್ನು ಎಸ್ ಎಂ ಕೃಷ್ಣ ಸಿಎಂ ಆಗಿರುವಾಗಲೇ ಸಿದ್ಧರಾಮಯ್ಯ ಕಾಂಗ್ರೆಸ್ ಸೇರಿದರು. ಖರ್ಗೆ ಪ್ರತಿಪಕ್ಷದ ನಾಯಕರಾಗಿದ್ದಾಗಲೇ ಕಾಂಗ್ರೆಸ್ ಸೇರಿದ ಸಿದ್ಧರಾಮಯ್ಯ ಅವರಿಗಾಗಿ, ಪ್ರತಿಪಕ್ಷ ನಾಯಕ ಸ್ಥಾನವೂ ಕೈತಪ್ಪಿತು. ಖರ್ಗೆ, ರಾಷ್ಟ್ರರಾಜಕಾರಣಕ್ಕೆ ಶಿಫ್ಟ್ ಆದರು. ಮುಂದೆ 2013ರಲ್ಲಿ ಕಾಂಗ್ರೆಸ್ ಗೆದ್ದಾಗ.. ಖರ್ಗೆಯವರ ಹೆಸರು ಪ್ರಸ್ತಾಪವಾದರೂ, ಅವಕಾಶ ಸಿಗಲಿಲ್ಲ. ಅಧ್ಯಕ್ಷರಾಗಿದ್ದ ಪರಮೇಶ್ವರ್ ಸೋತಿದ್ದರು. ಆಪೋಸಿಷನ್ ಲೀಡರ್ ಆಗಿದ್ದ ಸಿದ್ದು ಗೆದ್ದಿದ್ದರು. ಖರ್ಗೆಯವರು ಸಿಎಂ ಆಗಬೇಕು ಎಂದರೆ, ಹೈಕಮಾಂಡ್ ಧೈರ್ಯ ಮತ್ತು ಮನಸ್ಸು ಮಾಡಬೇಕಿತ್ತು. ಮಾಡಲಿಲ್ಲ. ಖರ್ಗೆ ಸಿಎ ಆಗಲಿಲ್ಲ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೊಂಡಿದ್ದು ಇಂಥಹ ಘಟನೆಯ ಬಗ್ಗೆಯೇ. ಖರ್ಗೆಯವರಿಗೆ ಎರಡು ಬಾರಿ ತಮ್ಮದೇ ಪಕ್ಷದಿಂದ, ಇನ್ನೊಮ್ಮೆ ಮಿತ್ರ ಪಕ್ಷದಿಂದ ಸಿಎಂ ಆಗುವ ಅವಕಾಶ ಕೈತಪ್ಪಿದೆ.
ನಾನು ರಾಜಕೀಯದಲ್ಲಿ ಹಂತ ಹಂತವಾಗಿ ಮೇಲಕ್ಕೆ ಬಂದಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಿದ್ದೇನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಿಂದ ಹಿಡಿದು ಇಂದು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ನಾನೆಂದೂ ಅಧಿಕಾರದ ಹಿಂದೆ ಬಿದ್ದಿಲ್ಲ. ಅದಾಗೇ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ.



