ಸೋನು ನಿಗಮ್ ಕನ್ನಡಕ್ಕೆ ಅವಮಾನ ಮಾಡಿದ್ರಂತೆ. ಕನ್ನಡದ ಅಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ್ರಂತೆ. ಇಂಥಾದ್ದೊಂದು ಅರೆಬೆಂದ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಸೋನು ನಿಗಮ್ ವಿರುದ್ಧ ಕನ್ನಡ ಪರ ಸಂಘಟನೆಗಳು ಮುಗಿಬಿದ್ದವು. ಸೋನು ನಿಗಮ್ ಇನ್ನು ಮುಂದೆ ಕನ್ನಡದಲ್ಲಿ ಹಾಡು ಹೇಳುವುದಕ್ಕೆ, ಯಾವುದೇ ಶೋ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಗುಡುಗಿದರು.
ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗುತ್ತದೆ? ಕನ್ನಡದ ಅನ್ನ ತಿಂದು ಕೊಬ್ಬಿರುವ ಸೋನು ನಿಗಮ್ ಅವರಿಗೆ ಇನ್ನು ಮುಂದೆ ಕರ್ನಾಟಕದಲ್ಲಿ ಶೋಗಳನ್ನು ನಡೆಸಲು ಬಿಡುವುದಿಲ್ಲ. ಕರ್ನಾಟಕದ ಯಾವ ನಿರ್ಮಾಪಕರೂ ಇವರಿಂದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವರ ಶೋ ನಡೆಸಲು ಮುಂದಾಗಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅವರೇ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಸೋನು ನಿಗಮ್ ಕನ್ನಡ ಪ್ರೀತಿ ಹೊಸದೇನಲ್ಲ. ಅವರು ಬಹಿರಂಗವಾಗಿಯೇ ನನಗೆ ಕನ್ನಡ ಹಾಡುಗಳು ಎಂದರೆ ತುಂಬ ಇಷ್ಟ. ಕರ್ನಾಟಕ ಎಂದರೆ ತುಂಬ ಇಷ್ಟ ಎಂದು ವಿದೇಶಿ ವೇದಿಕೆಗಳಲ್ಲಿಯೂ ಹೇಳುತ್ತಾರೆ. ಸಾವಿರಾರು ಜನ ಸೇರಿರುವ ಸ್ಟೇಜ್ ಶೋಗಳಲ್ಲಿ ಒಬ್ಬನೇ ಒಬ್ಬ ಕನ್ನಡ ಎಂದು ಕೂಗಿದರೆ.. ಅದು ಹಿಂದಿಯೋ, ತೆಲುಗೋ, ತಮಿಳೋ.. ಯಾವುದೇ ಸ್ಟೇಜ್ ಇರಲಿ, ಕನ್ನಡ ಹಾಡು ಹಾಡ್ತಾರೆ. ಅಂತಹ ಸೋನು ನಿಗಮ್ ಹಿಂಗೆಲ್ಲ ಮಾಡಿದ್ರಾ ಎಂದು ನೋಡಿದರೆ.. ಕಥೆಯೇ ಬೇರೆ ಇದೆ.
ನೋಡ ನೋಡುತ್ತಲೇ ಇದು ಹಿಂದಿ ವರ್ಸಸ್ ಕನ್ನಡ ಎಂಬ ಭಾವನೆಗೆ ತಿರುಗಿರುವ ಕಥೆ ವಾಸ್ತವ ಏನು ಅನ್ನೋದನ್ನೇ ಯಾರೂ ವಿಚಾರ ಮಾಡಲಿಲ್ಲ ಎನ್ನುವುದೇ ಇಲ್ಲಿನ ದುರಂತ. ವಾಸ್ತವವಾಗಿ ಆಗಿದ್ದೇನೆಂದರೆ..
ಗಾಯಕ ಸೋನು ನಿಗಮ್ ಇತ್ತೀಚೆಗೆ ಬೆಂಗಳೂರಿನಲ್ಲಿರುವ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಹಾಡು ಹಾಡಿದ್ದರು. ಆಗ ಒಬ್ಬ ಯುವಕ ಕನ್ನಡ.. ಕನ್ನಡ.. ಎಂದು ಕಿರುಚಾಡುತ್ತಿದ್ದನಂತೆ. ಒರಟಾಗಿ ಮಾತನಾಡಿದನಂತೆ. ಅದಕ್ಕೆ ಪ್ರತಿಕ್ರಿಯಿಸಿದ ಸೋನು ನಿಗಮ್ “ನಾನು ಎಲ್ಲ ಭಾಷೆಗಳಲ್ಲಿನ ಹಾಡುಗಳನ್ನು ಹಾಡಿದ್ದೇನೆ. ಆದರೆ ನನ್ನ ಜೀವನದಲ್ಲಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದವು. ನಾನು ನಿಮ್ಮ ಬಳಿ ಯಾವಾಗ ಬಂದರೂ ಕೂಡ ಬಹಳ ಪ್ರೀತಿಯಿಂದ ಬರುತ್ತೇನೆ. ನಾವು ಪ್ರತಿದಿನ ಇವೆಂಟ್‌ಗಳನ್ನು ಮಾಡುತ್ತೇವೆ, ಆದರೆ ಕರ್ನಾಟಕದಲ್ಲಿ ಎಲ್ಲಿಯಾದರೂ ಕಾರ್ಯಕ್ರಮವಿದ್ದಾಗ, ನಾವು ಬಹಳ ಗೌರವದಿಂದ, ಖುಷಿಯಿಂದ ಬರ್ತೀವಿ. ನೀವೆಲ್ಲರೂ ನಮ್ಮನ್ನು ನಿಮ್ಮ ಕುಟುಂಬ ಎಂಬಂತೆ ಸ್ವೀಕರಿಸಿದ್ದೀರಿ ಎನ್ನೋದು ಇದಕ್ಕೆ ಕಾರಣ. ಓರ್ವ ಹುಡುಗ ನನಗೆ ಕನ್ನಡ ಹಾಡು ಹಾಡಿ ಎಂದ. ಅವನು ಹುಟ್ಟುವ ಮೊದಲಿನಿಂದಲೂ ನಾನು ಕನ್ನಡ ಹಾಡುಗಳನ್ನು ಹಾಡುತ್ತಿದ್ದೇನೆ. ಆದರೆ ಆ ಹುಡುಗ ‘ಕನ್ನಡ, ಕನ್ನಡ’ ಎಂದು ಒರಟಾಗಿ ಬೆದರಿಕೆ ಹಾಕಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ಏನಾಯಿತು ಅಂತ ಗೊತ್ತಿದೆ ಅಲ್ವಾ? ಮೊದಲು ಯಾರು ಮುಂದೆ ನಿಂತಿದ್ದಾರೆ ಎಂದು ಗಮನಿಸಿ. ನಾನು ಕನ್ನಡಿಗರನ್ನು ಪ್ರೀತಿಸುವೆ, ನಿಮ್ಮನ್ನು ಪ್ರೀತಿಸುವೆ” ಎಂದು ಹೇಳಿದ್ದಾರೆ.
ಸಾವಿರಾರು ಜನ ಇರೋ ಹಿಂದಿ ವೇದಿಕೆಗಳಲ್ಲಿ ಯಾರೋ ಒಬ್ಬ ಕನ್ನಡ ಎಂದು ಕೂಗಿದರೆ, ನಾನು ಪ್ರೀತಿಯಿಂದ ಕನ್ನಡ ಹಾಡು ಹಾಡ್ತೇನೆ. ಕನ್ನಡವನ್ನು ಅಷ್ಟು ಪ್ರೀತಿಸುವ ನನಗೂ ಸ್ವಲ್ಪ ಗೌರವ ಇರಲಿ ಎಂದಿದ್ದಾರೆ ಸೋನು ನಿಗಮ್. ಹೌದಲ್ವಾ.. ಕನ್ನಡವನ್ನು ಅಷ್ಟೊಂದು ಅಭಿಮಾನಿಸುವ ಸೋನು ನಿಗಮ್, ಗೌರವವನ್ನು ನಿರೀಕ್ಷಿಸೋದ್ರಲ್ಲಿ ತಪ್ಪೇನಿದೆ ಅಲ್ವಾ.. ಇಷ್ಟಕ್ಕೂ ಕನ್ನಡವನ್ನು ಪ್ರೀತಿಸುವವರ ಮೇಲೆ ಹಾರಾಡಿ, ಕೂಗಾಡಿ..ಅರಚಾಡಿ.. ಕನ್ನಡ ಕನ್ನಡ ಎಂದು ಕೂಗಿದರೆ ಕನ್ನಡ ಬೆಳೆಯೋದಲ್ಲ, ಸಾಯುತ್ತೆ. ಅದನ್ನು ಕರವೇ ನಾರಾಯಣ ಗೌಡರೂ ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.