ಶನಿ ಎಂದರೆ ಭಯ. ಭಕ್ತಿ. ಭಕ್ತಿಗಿಂತಲೂ ಹೆಚ್ಚಾಗಿ ಭಯ. ಅದಕ್ಕೆ ಕಾರಣ ಶನಿ. ಶನಿ. ಶನಿ. ಅಷ್ಟೇ. ಶನಿಯ ಪ್ರೀತಿಯ ಕಣ್ಣು ಬೀಳುವುದು ಅಪರೂಪದಲ್ಲಿ ಅಪರೂಪ. ಶನಿವಾರ ಬಂತೆಂದರೆ ಶನಿ ದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವವರಿಗೇನೂ ಕಡಿಮೆ ಇಲ್ಲ. ಆದರೆ, ಬಹುತೇಕ ಮನೆಗಳಲ್ಲಿ ಶನಿ ದೇವರ ಫೋಟೋ ಇಟ್ಟಿರುವುದಿಲ್ಲ. ಮನೆಯಲ್ಲಿ ಶನಿದೇವರ ಫೋಟೋ ಇಟ್ಟು ಪೂಜೆ ಮಾಡುವವರ ಸಂಖ್ಯೆ ಇಲ್ಲವೇ ಇಲ್ಲ ಎಂದು ಹೇಳಬೇಕು. ಕೆಲವರು ಇಟ್ಟುಕೊಂಡರೂ.. ಕೆಲವೇ ದಿನ ಅಥವಾ ತಿಂಗಳುಗಳಲ್ಲಿ ಆ ಫೋಟೋವನ್ನು ತಂದು ದೇವಸ್ಥಾನಕ್ಕೆ ಕೊಟ್ಟುಬಿಡುತ್ತಾರೆ. ಅದಕ್ಕೆಲ್ಲ ಏನು ಕಾರಣ..?
ಪೌರಾಣಿಕ ಕಥೆ :
ಒಮ್ಮೆ ಶನಿದೇವರು ಧ್ಯಾನದಲ್ಲಿದ್ದಾಗ ಆತನ ಹೆಂಡತಿ ಆತನನ್ನು ಕಾಣಲು ಬರುತ್ತಾಳೆ. ಆಗ ಶನಿಯನ್ನು ಧ್ಯಾನದಿಂದ ಬೇರೆಡೆ ಗಮನ ಸೆಳೆಯಲು ಪ್ರಯತ್ನಿಸಿ ವಿಫಲವಾಗುತ್ತಾಳೆ. ಇದರಿಂದ ಕೋಪಗೊಂಡ ಆಕೆ ಶಾಪವನ್ನು ನೀಡುತ್ತಾಳೆ. ಇನ್ನು ಮುಂದೆ ಶನಿ ಯಾರನ್ನೇ ನೋಡಿದರೂ ಕೆಡುಕಾಗಬೇಕು ಎಂದು ಶಾಪ ಕೊಡುತ್ತಾಳೆ. ಶನಿ, ಪತ್ನಿಯಿಂದಲೇ ಶಾಪಗ್ರಸ್ತನಾಗುತ್ತಾನೆ. ನಂತರ ಶನಿ ಸತಿ ಬಳಿ ಕ್ಷಮೆ ಕೇಳಿದರೂ ಪ್ರಯೋಜನವಾಗಲಿಲ್ಲ.
ಇದಾದ ಬಳಿಕ ಶನಿ ದೇವ ತನ್ನ ದೃಷ್ಟಿಯಿಂದ ಯಾರಿಗೂ ತೊಂದರೆಯಾಗಬಾರದು ಎಂದು ತಲೆ ತಗ್ಗಿಸಿ ನಡೆಯುತ್ತಾನಂತೆ. ಈ ಕಾರಣದಿಂದಾಗಿ ಶನಿಯನ್ನು ಮನೆಯಲ್ಲಿ ಇಟ್ಟು ಯಾರೂ ಪೂಜಿಸುವುದಿಲ್ಲ. ದೇವಾಲಯದಲ್ಲಿ ಮಾತ್ರ ಪೂಜಿಸುತ್ತಾರೆ. ಜೊತೆಗೆ ಪೂಜೆ ಮಾಡುವಾಗ ಆತನ ಪಾದಗಳನ್ನು ಮಾತ್ರ ನೋಡುತ್ತಾರೆ. ಆತನ ಕಣ್ಣು ನೋಡಿದರೆ ಆತನ ದೃಷ್ಟಿ ತಾಗುತ್ತದೆ, ಇದರಿಂದ ಕೆಡುಕಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಶನಿಯ ಫೋಟೋವನ್ನು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ನೇರವಾಗಿ ನೋಡಿದರೆ ತೊಂದರೆಗಳು ಎದುರಾಗುತ್ತವೆ ಎಂದು ಶಾಸ್ತ್ರಗಳು ಹೇಳುವುದರಿಂದ ಭಕ್ತರು ತಲೆ ತಗ್ಗಿಸಿ ಶನಿ ದೇವನ ಪೂಜೆ ಮಾಡುತ್ತಾರೆ.
ಶನಿಯಂತ್ರವೂ ಅಷ್ಟೇ.. ಕೆಲವರು ಮನೆಯಲ್ಲಿ ಶನಿ ಯಂತ್ರವನ್ನು ಇಡುತ್ತಾರೆ. ಮನೆಯಲ್ಲಿ ಈ ಶನಿ ಯಂತ್ರವನ್ನು ಇಡುವುದರಿಂದ ಶನಿ ದೇವರ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಅವರದ್ದು. ಶನಿ ದೋಷ ಮತ್ತು ಶನಿಯ ಸಾಡೇಸಾತಿಯ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುವ ನಂಬಿಕೆಯೂ ಇದೆ. ಆದರೆ, ಈ ಶನಿಯಂತ್ರವನ್ನು ಮನೆಯಲ್ಲಿಟ್ಟು ಪೂಜಿಸುವಾಗ.. ಸರಿಯಾದ ಪ್ರಾಣ-ಪ್ರತಿಷ್ಠೆಯೊಂದಿಗೆ ಇಡಬೇಕು. ಸ್ಥಳ ಶುದ್ಧವಾಗಿರಬೇಕು. ಸಂಯಮ ತಪ್ಪಬಾರದು. ನಿಯಮಿತವಾಗಿ ಪೂಜೆ ಮಾಡಲು ಸಾಧ್ಯವಾಗದಿದ್ದರೆ ಶನಿ ಯಂತ್ರ ಅಥವಾ ಫೋಟೋವನ್ನು ಮನೆಯಲ್ಲಿ ಇಡಲೇಬಾರದು. ಇಲ್ಲವಾದಲ್ಲಿ ಅದು ನಕಾರಾತ್ಮಕ ಪರಿಣಾಮ ಬೀರುತ್ತೆ.
ಇನ್ನು ಕೆಲವರು ಪರ್ಸುಗಳಲ್ಲಿ ಶನಿದೇವರ ಫೋಟೋ ಇಟ್ಟುಕೊಂಡಿರುತ್ತಾರೆ. ಇದು ಅವರವರ ನಂಬಿಕೆ ಭಕ್ತಿಗೆ ಬಿಟ್ಟ ವಿಚಾರ ಪುರಾಣಗಳು ಹೇಳುವಂತೆ ಶನಿಯನ್ನು ನೇರವಾಗಿ ನೋಡಬಾರದು. ಮನೆ ಅಥವಾ ಪರ್ಸ್‌ನಲ್ಲಿ ಆತನ ಫೋಟೋಗಳನ್ನು ಇಟ್ಟುಕೊಂಡಾಗ ಶಿಸ್ತಿನಿಂದ ಇರಬೇಕಾಗುತ್ತದೆ. ಶನಿಗೆ ಅಪಮಾನ ಮಾಡಿದರೆ ಇದರಿಂದ ಹೊರಬರುವುದು ಕಷ್ಟ. ಒಂದು ವೇಳೆ ನಿಮ್ಮ ಮನೆಯಲ್ಲಿ ಶನಿ ಫೋಟೋ ಇದ್ದರೆ ಅಥವಾ ಪರ್ಸ್‌ನಲ್ಲಿ ಶನಿ ಫೋಟೋ ಇದ್ದರೆ ಶಿಸ್ತಿನಿಂದ ಇರುವುದು ತುಂಬಾ ಮುಖ್ಯ.
ಪರ್ಸಿನಲ್ಲಿ ಶನಿ ದೇವರ ಫೋಟೋ ಇಟ್ಟುಕೊಂಡು ಮಾಡಬಾರದ ಕೆಲಸ ಮಾಡುತ್ತಾ ಹೋದರೆ.. ಅದೇ ಶನಿ ದೇವರು ಉಗ್ರರೂಪಿಯಾಗುತ್ತಾನೆ. ನೆನಪಿನಲ್ಲಿರಲಿ.



