ಶೋಭಾ ಕರಂದ್ಲಾಜೆ, ಈಗ ಸಂಸದೆಯಷ್ಟೇ ಅಲ್ಲ, ಕೇಂದ್ರ ಸಚಿವೆಯೂ ಹೌದು. ಅವರು ಯಡಿಯೂರಪ್ಪ ಅವರ ಬೆಂಬಲಿಗರಾಗಿಯೇ ಗುರುತಿಸಿಕೊಂಡಿದ್ದವರು. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿಗಳು, ಶೋಭಾ ಅವರನ್ನೂ ವಿರೋಧಿಸುತ್ತಿದ್ದರು. ಆದರೆ ಇದೀಗ ಟೈಂ ಚೇಂಜ್ ಆಗಿದೆಯಾ..? ಅದಕ್ಕೆ ಪುಷ್ಠಿ ನೀಡಿರುವುದು ಬಸನಗೌಡ ಪಾಟೀಲ ಯತ್ನಾಳ್ ಅವರ ಒಂದು ಹೇಳಿಕೆ.
ಯತ್ನಾಳ್ ಅವರ ಪ್ರಕಾರ ಅವರು ಮತ್ತು ಶೋಭಾ ಕರಂದ್ಲಾಜೆ ಮುಂದಿನ ನಾಯಕರು. ವಿಜಯಪುರದಲ್ಲಿ ನಾನು, ಶೋಭಾ ಕರಂದ್ಲಾಜೆ ಅವರು ಒಟ್ಟಿಗೇ ಧರಣಿ ಕುಳಿತಿರುವುದನ್ನು ನೋಡಿ ಪಕ್ಷದವರೂ ಆಶ್ಚರ್ಯ ಪಟ್ಟಿದ್ದಾರೆ. ಆದರೆ ಅರ್ಥ ಮಾಡ್ಕೊಳಿ, ನಾವಿಬ್ಬರೇ ಮುಂದಿನ ನಾಯಕರು ಎಂದಿದ್ದಾರೆ ಯತ್ನಾಳ್.
ರೈತರ ಪಹಣಿಯಿಂದ ವಕ್ಫ್ ಪದ ತೆಗೆದುಹಾಕುವಂತೆ ಆಗ್ರಹಿಸಿ ವಿಜಯಪುರ ಡಿಸಿ ಕಚೇರಿ ಬಳಿ ರೈತರಿಂದ ಅಹೋರಾತ್ರಿ ಧರಣಿ, ಪ್ರತಿಭಟನೆ ನಡೆಯುತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್ ನೀಡಿದ್ದಾರೆ. ಕೇಂದ್ರ ಸಚಿವೆಯೂ ಸೇರಿದಂತೆ ನೂರಾರು ರೈತರು, ಬಿಜೆಪಿ ಕಾರ್ಯಕರ್ತರು ಧರಣಿ ನಡೆಯುತ್ತಿರುವ ಪ್ರದೇಶದ ಟೆಂಟ್ನಲ್ಲೇ ರಾತ್ರಿ ಕಳೆದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರನ್ನು ಒಪ್ಪದೇ ಅವರ ವಿರುದ್ಧ ಬಹಿರಂಗ ವಾಕ್ಸಮರ ನಡೆಸುತ್ತಿರುವ ಯತ್ನಾಳ್ ಮತ್ತವರ ತಂಡದ ನಾಯಕರ ವಿರುದ್ಧ ವರಿಷ್ಠರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ್ ಟೀಂ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಿದೆ. ಅಲ್ಲದೆ, ಬಿಜೆಪಿ ಶಾಸಕಾಂಗ ಸಭೆಗೂ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಹಾಜರಾಗುತ್ತಿಲ್ಲ. ಹೀಗಿದ್ದರೂ ಅವರ ವಿರುದ್ಧ ವರಿಷ್ಠರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ದ ತೀವ್ರ ಸ್ವರೂಪದ ಆರೋಪ ಮಾಡುತ್ತಿದ್ದ ಯತ್ನಾಳ್‌ಗೆ ಒಮ್ಮೆ ಬಿಜೆಪಿ ವರಿಷ್ಠರು ನೋಟಿಸ್ ನೀಡಿದ್ದರು. ಅದಾದ ಬಳಿಕ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳ್ ವಿರುದ್ಧ ನೋಟಿಸ್ ಜಾರಿಯಾಗಿತ್ತು. ಇದಕ್ಕೆ ಅವರು ಸುದೀರ್ಘ ಉತ್ತರವನ್ನೂ ನೀಡಿದ್ದರು. ಅಷ್ಟಕ್ಕೇ ಕೇಂದ್ರದ ವರಿಷ್ಠರು ಸುಮ್ಮನಾಗಿದ್ದರು.
ಇದೀಗ ತಿರುಗಿಬಿದ್ದಿರುವ ವಿಜಯೇಂದ್ರ ಅವರೂ ಕೂಡಾ ಬಹಿರಂಗವಾಗಿಯೇ ಯತ್ನಾಳ್ ಅವರಿಗೆ ಬುದ್ದಿ ಇಲ್ಲ, ಅವರ ಮಾತು ಯಾರಿಗೂ ಅರ್ಥವಾಗಲ್ಲ. ಯಡಿಯೂರಪ್ಪ, ಅನಂತ್ ಕುಮಾರ್ ಅವರು ರಾಜ್ಯದಲ್ಲಿ ಪಕ್ಷ ಕಟ್ಟಿಲ್ಲದೇ ಇದ್ದಿದ್ದರೆ, ಇವತ್ತು ಯತ್ನಾಳ್ ಅಂತಹ ನಾಯಕರಿಗೆ ವೇದಿಕೆಯೂ ಇರುತ್ತಿರಲಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, 3 ಬೈ ಎಲೆಕ್ಷನ್ ತಾರಾ ಪ್ರಚಾರಕರ ಪಟ್ಟಿಯಿಂದ ಯತ್ನಾಳ್, ಜಾರಕಿಹೊಳಿ ಅವರನ್ನೆಲ್ಲ ಆಚೆ ಇಟ್ಟಿದ್ದಾರೆ ವಿಜಯೇಂದ್ರ.
ಅವನು ಸೈಲೆಂಟ್ ಆಗಲಿಲ್ಲ ಅಂದ್ರೆ ನಾನು ವಯಲೆಂಟ್ ಆಗ್ತೀನಿ ಅನ್ನೋದು ಯತ್ನಾಳ್ ತಿರುಗೇಟು. ಯತ್ನಾಳ್ ಸೈಲೆಂಟ್ ಆಗಿದ್ದುದು ಯಾವಾಗ ಅನ್ನೋದು ವಿಜಯೇಂದ್ರ ಅವರ ಪ್ರಶ್ನೆ.
ಇದೆಲ್ಲವನ್ನೂ ಬಿಜೆಪಿ ಹೈಕಮಾಂಡ್ ನೋಡುತ್ತಿದೆ. ಏನೂ ಮಾಡುತ್ತಿಲ್ಲ. ಅದರ ಅರ್ಥ ಹೈಕಮಾಂಡಿಗೂ ಇದೇ ಬೇಕಿದೆಯಾ ಎಂಬ ಸಂದೇಶವನ್ನೂ ತಲುಪುತ್ತಿದೆ. ಈ ನಡುವೆಯೇ ಯತ್ನಾಳ್ ʻನಾನು ಮತ್ತು ಶೋಭಾ ಕರಂದ್ಲಾಜೆ ಮುಂದಿನ ನಾಯಕರುʼ ಎಂದು ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಜೊತೆ ಜೊತೆಯಲ್ಲೇ ಆರ್. ಅಶೋಕ್ ಅವರಿಗೂ ಟೆನ್ಷನ್ ಶುರುವಾಗಿದೆಯಾ..?



