ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ..? ವಿ ಸೋಮಣ್ಣ ಅವರು ಲಿಸ್ಟಿನಲ್ಲಿದ್ದಾರಂತೆ. ಅರವಿಂದ ಬೆಲ್ಲದ್ ಹೆಸರೂ ಪಟ್ಟಿಯಲ್ಲಿದ್ಯಂತೆ. ಇಲ್ಲ ರೀ.. ಸುನಿಲ್ ಕುಮಾರ್ ಅವರಿಗೆ ಓಕೆ ಅನ್ನೋ ಮೂಡಿನಲ್ಲಿದ್ಯಂತೆ. ಒಟ್ಟಿನಲ್ಲಿ ವಿಜಯೇಂದ್ರ ಮಾತ್ರ ಕಂಟಿನ್ಯೂ ಆಗಲ್ಲ ರೀ.. ಎನ್ನುತ್ತಿದ್ದವರಿಗೆಲ್ಲ ಒಂದೇ ಒಂದು ಉತ್ತರ ಕೊಟ್ಟು ಸುಮ್ಮನಾಗಿಸಿದ್ದಾರೆ ವಿಜಯೇಂದ್ರ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂಬುದಾಗಿ ಯಾರು ಹೇಳಿದ್ದಾರೆ. ‘ನಾನು ರಾಜ್ಯಾಧ್ಯಕ್ಷನಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ದಿನವೂ ಸುಮ್ಮನೆ ಕುಳಿತಿಲ್ಲ. ಅದು ಪಕ್ಷದ ಹೈಕಮಾಂಡ್‌ಗೂ ಗೊತ್ತಿದೆ. ನನಗೂ ಪ್ರಮಾಣಪತ್ರ ನೀಡಿದ್ದಾರೆ. ಕಾರ್ಯಕರ್ತರಿಗೂ ನನ್ನ ಕೆಲಸದ ಬಗ್ಗೆ ಸಮಾಧಾನ ಇದೆ. ನಾನೇ ಅಧ್ಯಕ್ಷ ಎಂದಿದ್ದಾರೆ ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ.
ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ್ದು 2023ರ ಡಿಸೆಂಬರ್ ತಿಂಗಳಲ್ಲಿ. ಹಾಗೆ ನೋಡಿದರೆ.. ವಿಜಯೇಂದ್ರ ಅವರ ಅವಧಿ 3 ವರ್ಷ ಈಗಲೂ ಕಂಪ್ಲೀಟ್ ಆಗಿಲ್ಲ. ಆದರೆ.. ವಿಜಯೇಂದ್ರ ಚೇಂಜ್ ಆಗ್ತಾರೆ ಎಂಬ ರೆಬಲ್ಸ್ ಘೋಷಣೆ ನಿಂತಿಲ್ಲ. ಹಾಗೆ ನೋಡಿದರೆ ವಿಜಯೇಂದ್ರ ವಿರುದ್ಧ ಹಾದಿ ಬೀದಿಯಲ್ಲಿ ಬೈದಾಡಿದ ಯತ್ನಾಳ್, ಈಗ ಬಿಜೆಪಿಯಲ್ಲಿಲ್ಲ. ಈಶ್ವರಪ್ಪ, ಮತ್ತೊಮ್ಮೆ ಬಿಜೆಪಿಯ ಬಾಗಿಲು ತಟ್ಟುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿಪಿ ಹರೀಶ್, ಜಿಎಂ ಸಿದ್ದೇಶ್ವರ ಅವರ ಬಾಯಿಗೆ ಸ್ವಲ್ಪ ಬೀಗ ಬಿದ್ದಿದೆ. ಸಿಟಿ ರವಿ, ಪ್ರತಾಪ್ ಸಿಂಹ, ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಮೊದಲಾದವರು ಹೇಳೋಕಾಗಲ್ಲ. ಬಿಡೋಕಾಗ್ತಿಲ್ಲ. ಹೀಗೆಲ್ಲ ಇರುವಾಗಲೇ ವಿಜಯೇಂದ್ರ ಓಪನ್ ಅಗಿ ʻನಾನೇ ಅಧ್ಯಕ್ಷ. ಅಧ್ಯಕ್ಷ ಸ್ಥಾನ ಖಾಲಿ ಇಲ್ಲʼ ಎಂದು ಹೇಳಿದ್ದಾರೆ.
ಈ ನಡುವೆ ಅಸಮಾಧಾನಿತರ ಮುನಿಸು ತಣಿಸಲೆಂದೇ ಕುಮಾರ ಬಂಗಾರಪ್ಪ ಸೇರಿ ಯತ್ನಾಳ್ ಮಿತ್ರಮಂಡಳಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವೊಲಿಸುವ ಪ್ರಯತ್ನ ಮಾಡಿತ್ತು. ಅದಾಗ್ಯೂ ಯತ್ನಾಳ್ ಮತ್ತೆ ಬಹಿರಂಗ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿದರೆ ಹೊಸ ಪಕ್ಷ ಕಟ್ಟುತ್ತೇವೆಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಇದು ಸಹಜವಾಗಿಯೇ ಅವರ ಮಿತ್ರಮಂಡಳಿಯ ಬೇಸರಕ್ಕೆ ಕಾರಣವಾಗಿದೆ.
ಸಲಹೆ ಕೊಟ್ಟರೂ, ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪ್ರತ್ಯೇಕ ತಂಡ, ಯತ್ನಾಳ್ ಜೊತೆ ಇನ್ಮುಂದೆ ರಾಜಕೀಯ ಚರ್ಚೆಯೇ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಮತ್ತೊಂದೆಡೆ, ವಾಲ್ಮೀಕಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರ ಬಗ್ಗೆಯೂ ಬಿಜೆಪಿ ಬಣಗಳಲ್ಲೇ ಕ್ರೆಡಿಟ್ ವಾರ್ ಶುರುವಾಗಿದೆ.
ಈ ನಡುವೆ ಒಂದೇ ಒಂದು ಹೇಳಿಕೆ ಮೂಲಕ ವಿಜಯೇಂದ್ರ ರೆಬಲ್ ಟೀಂಗೆ ಮೆಸೇಜ್ ಕೊಟ್ಟಿದ್ದಾರೆ. ವಿಜಯೇಂದ್ರ ನೇಮಕಕ್ಕೆ ಸಂಬಂಧಪಟ್ಟಂತೆ ಪಕ್ಷದೊಳಗಿನ ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಹೊಸ ಅಧ್ಯಕ್ಷರ ನೇಮಕ ಘೋಷಣೆ ಮಾಡಬೇಕೆನ್ನುವುದು ಹೈಕಮಾಂಡ್ನ ಅಪೇಕ್ಷೆ. ಅದಕ್ಕಾಗಿ ಕಸರತ್ತು ನಡೆಯುತ್ತಿದೆ. ಅಷ್ಟೇ.. ಈ ಹೇಳಿಕೆ ಮೂಲಕ ವಿಜಯೇಂದ್ರ ರೆಬಲ್ಸ್‌ಗಳಿಗೆ ಖಡಕ್ ಆನ್ಸರ್ ಕೊಟ್ಟಿದ್ದಾರೆ.



