ಈಗ ಎಲ್ಲ ಕಡೆ ಅಧ್ಯಕ್ಷ ಸ್ಥಾನದ್ದೇ ಮಾತು. ಕಾಂಗ್ರೆಸ್ಸಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಅಲ್ಲಿ ಡಿಕೆ ವಿರುದ್ಧ ತಿರುಗಿಬಿದ್ದಿರೋ ದೊಡ್ಡ ಪಡೆಯೇ ಇದೆ. ಇತ್ತ ಜೆಡಿಎಸ್ʻನಲ್ಲಿ ನಿಖಿಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡೋ ಕುಮಾರಸ್ವಾಮಿ ಉದ್ದೇಶಕ್ಕೆ ದೇವೇಗೌಡರೇ ನೋ ಎಂದಿದ್ದಾರಂತೆ. ಅಲ್ಲಿ ಅಂದ್ರೆ ಜೆಡಿಎಸ್ʻನಲ್ಲಿ ಎಲ್ಲವೂ ಗುಟ್ಟು ಗುಟ್ಟು. ಆದರೆ ಓಪನ್ ಆಗಿ ಗೊತ್ತಾಗುತ್ತೆ. ಇನ್ನು ಬಿಜೆಪಿಗೆ ಬಂದರೆ ಅಧ್ಯಕ್ಷ ಸ್ಥಾನಕ್ಕಾಗಿ ಎಲೆಕ್ಷನ್ ನಡೆಯೋದು ಫಿಕ್ಸ್ ಆಗಿದೆ. ವಿಜಯೇಂದ್ರ ವಿರುದ್ಧ ಯತ್ನಾಳ್ ಸ್ಪರ್ಧೆಯೂ ನಡೆಯುತ್ತಂತೆ.
ವಿಜಯೇಂದ್ರ, ಯತ್ನಾಳ್ ನೇರಾನೇರ ಸ್ಪರ್ಧೆಗಿಳಿಯುವವರು ʻಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಸ್ಪರ್ಧೆʼಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಈ ಹಿಂದೆಯೂ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅನಂತ ಕುಮಾರ್, ಬಸವರಾಜ ಪಾಟೀಲ ಸೇಡಂ, ಈಶ್ವರಪ್ಪ ಆಯ್ಕೆ ವೇಳೆ ಚುನಾವಣೆ ನಡೆದಿತ್ತು. ಅನಂತ ಕುಮಾರ್ ಎದುರು ಯಡಿಯೂರಪ್ಪನವರೇ ಪ್ರಬಲ ಆಕಾಂಕ್ಷಿಯಾಗಿದ್ದರು. ಈಶ್ವರಪ್ಪ ರಾಜ್ಯಾಧ್ಯಕ್ಷರಾಗುವಾಗ ರಾಮಚಂದ್ರ ಗೌಡ ಪ್ರತಿಸ್ಪರ್ಧಿಯಾಗಿದ್ದರು. ಸೇಡಂ ಅವರಿಗೆ ಎಂ.ಆರ್. ತಂಗಾ ಪ್ರತಿಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದರು. ಆಗ ಹೈಕಮಾಂಡ್ ʻರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹʼ ಮಾಡಿ ಆಯ್ಕೆ ಮಾಡಿತ್ತು. ಈ ಬಾರಿಯೂ ಹಾಗೆಯೇ ಅಭಿಪ್ರಾಯ ಸಂಗ್ರಹ ನಡೆಯಲಿ ಎನ್ನುತ್ತಿರುವ ಯತ್ನಾಳ್ ಬಣ ಹಳೆಯ ಚುನಾವಣೆಗಳ ಇತಿಹಾಸವನ್ನು ಮರೆತಂತೆ ಕಾಣುತ್ತಿದೆ.
ಏಕೆಂದರೆ ಈ ಹಿಂದೆ ಯಾವ ಸಮದಯಲ್ಲಿಯೂ ಈ ರೀತಿಯ ವೈಯಕ್ತಿಕ ದಾಳಿ ನಡೆದಿರಲಿಲ್ಲ. ಅನಂತ್-ಯಡಿಯೂರಪ್ಪ, ಸೇಡಂ-ತಂಗಾ, ಈಶ್ವರಪ್ಪ-ರಾಮಚಂದ್ರ ಗೌಡ ಸ್ಪರ್ಧಿಗಳಾಗಿದ್ದರು.
ಬಹಿರಂಗವಾಗಿ ಪರಸ್ಪರ ಗೌರವಯುತವಾಗಿಯೇ ನಡೆದುಕೊಳ್ಳುತ್ತಿದ್ದರು. ಒಳಗಿನ ವಿಷಯಗಳೇನೇ ಇರಲಿ, ಸಾರ್ವಜನಿಕವಾಗಿ ಆಡಬಾರದ ಮಾತುಗಳನ್ನೆಲ್ಲ ಆಡುತ್ತಿರಲಿಲ್ಲ. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಯತ್ನಾಳ್-ವಿಜಯೇಂದ್ರ ನಡುವಿನ ಹೋರಾಟ ಹಳೆಯ ಹೋರಾಟಗಳಿಗಿಂತ ಭಿನ್ನವಾಗಿದೆ. ಯತ್ನಾಳ್ ಬಣದವರಂತೂ ಏಕವಚನಕ್ಕೂ ಇಳಿದಿದ್ದಾರೆ. ಈ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಚುನಾವನೆ ಹೈಕಮಾಂಡಿಗೂ ಸವಾಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆ ಎಂದರೆ ಇತರ ಸಾಮಾನ್ಯ ಚುನಾವಣೆಗಳಂತೆ ಅಲ್ಲದಿದ್ದರೂ ಒಂದು ಹಂತದ ಭರಾಟೆ ಇದ್ದೇ ಇರುತ್ತದೆ. ಪರೋಕ್ಷವಾಗಿ ಮತದಾನದಂತೆ ಪ್ರಕ್ರಿಯೆ ನಡೆಯುತ್ತದೆ. ಒಬ್ಬರಿಗಿಂತ ಹೆಚ್ಚು ಮಂದಿ ಪ್ರಬಲ ಆಕಾಂಕ್ಷೆ ವ್ಯಕ್ತಪಡಿಸಿದಲ್ಲಿ ಅಥವಾ ಪ್ರತಿಸ್ಪರ್ಧಿಗಳಿದ್ದಲ್ಲಿ ಆಗ ರಾಜ್ಯ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರು ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಬೇಕಾಗುತ್ತದೆ.
ರಾಜ್ಯ ಬಿಜೆಪಿ ಚುನಾವಣೆಗೆ ಈಗಾಗಲೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ರಾಜ್ಯದಲ್ಲಿ ಈಗ ಸಂಘಟನಾ ಪರ್ವ ನಡೆದಿದ್ದು, ಕೆಳಹಂತದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯಾಧ್ಯಕ್ಷ ಹುದ್ದೆಯ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಬಹುತೇಕ ಬರುವ ಫೆಬ್ರವರಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣಾ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಕಹಳೆ ಮೊಳಗಿಸಿರುವ ಯತ್ನಾಳ್ ಬಣದ ನಾಯಕರು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ರಾಜ್ಯದ ಮಧ್ಯಭಾಗವಾದ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಉದ್ದೇಶಿಸಿದ್ದಾರೆ. ಇದಕ್ಕಾಗಿ ಬಣದ ಹಿರಿಯ ನಾಯಕರೇ ತಲಾ ಎರಡು ಕೋಟಿ ರು.ಗಳನ್ನು ವಿನಿಯೋಗಿಸಲು ಮುಂದಾಗಿದ್ದಾರೆ. ಅಮಿತ್ ಶಾ ಅವರ ಗಮನಕ್ಕೆ ತಂದು ಮಾಡುವುದೇ ಸೂಕ್ತ. ಇಲ್ಲದಿದ್ದರೆ ಮುಂದೆ ವರಿಷ್ಠರ ಬೆಂಬಲ ನಿರೀಕ್ಷಿಸಲು ಆಗುವುದಿಲ್ಲ. ಹೀಗಾಗಿ, ಏನೇ ಮಾಡಿದರೂ ಅದನ್ನು ವರಿಷ್ಠರ ಗಮನಕ್ಕೆ ತರುವುದು ಎಲ್ಲ ರೀತಿಯಿಂದಲೂ ಅನುಕೂಲ ಎಂಬ ಚರ್ಚೆ ಯತ್ನಾಳ ಬಣದಲ್ಲಿ ನಡೆದಿದೆ ಎನ್ನಲಾಗಿದೆ.



