ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸೆಪ್ಟೆಂಬರ್ ನಂತರ ವಯಸ್ಸು 75 ದಾಟುತ್ತದೆ. ಬಿಜೆಪಿಯಲ್ಲಿರುವ ಅಲಿಖಿತ ನಿಯಮದ ಪ್ರಕಾರ ಯಾರೂ ಕೂಡಾ ಹುದ್ದೆಯಲ್ಲಿರುವಂತಿಲ್ಲ. ಈ ನಿಯಮ ಜಾರಿಗೆ ಬಂದಿದ್ದೇ ಮೋದಿ ಪ್ರಧಾನಿಯಾದ ನಂತರ. ಯಡಿಯೂರಪ್ಪ ಸೇರಿದಂತೆ ಕೆಲವೊಂದು ನಾಯಕರ ವಿಷಯದಲ್ಲಿ ರಿಲ್ಯಾಕ್ಸ್ ಕೂಡಾ ಇದೆ. ಆದರೆ ಇಂತಾದ್ದೊಂದು ವಯೋಮಿತಿಯನ್ನು ಜಾರಿಗೆ ತಂದವರೇ ಆದನ್ನು ಮುರಿಯುತ್ತಾರಾ.. ಅಂದರೆ ಅಂಥಾದ್ದೊಂದು ನಿಯಮವೇ ನಮ್ಮ ಪಕ್ಷದಲ್ಲಿ ಇಲ್ಲ ಎನ್ನುತ್ತಾರೆ ಕೆಲವು ನಾಯಕರು. ಈ ಮಧ್ಯೆ ಆಗಲೇ ಮೋದಿಯವರ ಉತ್ತರಾಧಿಕಾರಿ ಹುಡುಕಾಟ ಶುರುವಾಗಿದೆ.
ಮೋದಿಯ ನಂತರ ಯಾರು..?
ಈ ಪ್ರಶ್ನೆಗೆ ಸೋಷಿಯಲ್ ಮೀಡಿಯಾ ಪಂಡಿತರು ಹೇಳುವುದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೆಸರನ್ನ. ಅವರ ಪ್ರಕಾರ ಯೋಗಿ ಕಟ್ಟರ್ ಹಿಂದೂವಾದಿ. ಮದುವೆಯಾಗಿಲ್ಲ. ಸನ್ಯಾಸಿ.. ಅಲ್ಲದೆ ವೀರ ಸನ್ಯಾಸಿ. ಸತತವಾಗಿ ಸಂಸದರಾಗಿ ಗೆದ್ದಿದ್ದ ಯೋಗಿ ಅವರಿಗೆ, ಉತ್ತರ ಪ್ರದೇಶ ಸಿಎಂ ಆಗಿ ಆಡಳಿತವನ್ನು ಹತೋಟಿಗೆ ತಂದಿರುವ ಅನುಭವ ಇದೆ. ಉತ್ತರ ಪ್ರದೇಶವನ್ನು ಇದೇ ಮೊದಲ ಬಾರಿಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂಬ ಹಿರಿಮೆ ಇದೆ. ವಿಶೇಷವಾಗಿ ಕಾನೂನು, ಮುಸ್ಲಿಮರ ವಿಷಯದಲ್ಲಿ ಯೋಗಿ ಕಟ್ಟುನಿಟ್ಟು. ಹೀಗಾಗಿ ಯೋಗಿಯೇ ಬೆಸ್ಟ್ ಚಾಯ್ಸ್ ಎನ್ನುತ್ತಾರೆ. ಆದರೆ ಯೋಗಿ ಅದು ನಾನಲ್ಲ ಎಂದಿದ್ದಾರೆ.
ಅಮಿತ್ ಶಾ ಆಗ್ತಾರಾ..?
ಮೋದಿಯವರ ಸಂಪುಟದಲ್ಲಿ ಆಗಾಗ್ಗೆ ಕೇಳಿ ಬರುವ ಇನ್ನೊಂದು ಹೆಸರು ಎಂದರೆ ಗೃಹ ಸಚಿವ ಅಮಿತ್ ಶಾ ಅವರದ್ದು. ಗೃಹ ಸಚಿವರಾಗಿ ಗುಪ್ತಚರವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅಮಿತ್ ಶಾ ಅವರ ದೊಡ್ಡ ಗರಿಮೆ ಎಂದರೆ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದುಹಾಕಿದ್ದನ್ನು ಅದ್ಭುತವಾಗಿ ನಿಭಾಯಿಸಿದ್ದು. ನಕ್ಸಲ್ ನಿಗ್ರಹ, ಉಗ್ರ ಚಟುವಟಿಕೆ ನಿಯಂತ್ರಣ ಮೊದಲಾದವುಗಳನ್ನ ಶಾ ಅವರಿಗೆ ಕ್ರೆಡಿಟ್ ಕೊಡಲಾಗುತ್ತದೆ. ಹೀಗಾಗಿ, ಮೋದಿ ನಂತರ ಯೋಗಿಯೇ ಬೆಸ್ಟ್ ಎನ್ನುವವರೂ ಇದ್ದಾರೆ.
ಆದರೆ ಅಮಿತ್ ಶಾ ಅವರೂ ಸದ್ಯಕ್ಕೆ ಮೋದಿ ಇದ್ದಾರೆ. ಆ ಪ್ರಶ್ನೆಯೇ ಇಲ್ಲ ಎಂದು ಈ ಹಿಂದೆಯೇ ಹೇಳಿದ್ಧಾರೆ. ಈಗ ಯೋಗಿಯೂ ಹೇಳಿದ್ದಾರೆ. ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್ ನಾನು ಯೋಗಿ. ಯೋಗಿಯಾಗಿಯೇ ಇರುವುದಕ್ಕೆ ಬಯಸುತ್ತೇನೆ. ಇಲ್ಲೇ ಕೆಲಸ ಮಾಡುವುದಕ್ಕೆ ಬಯಸುತ್ತೇನೆ ಎನ್ನುವ ಮೂಲಕ ತಾವು ಮೋದಿಯವರಿಗೆ ಉತ್ತರಾಧಿಕಾರಿ ಅಲ್ಲ ಎನ್ನುವ ಸಂದೇಶ ನೀಡಿದ್ದಾರೆ.
ಆದರೆ ವಿರೋಧಿಗಳು ಹೇಳುವುದೇ ಬೇರೆ. ಯೋಗಿ ಅವರು ಮೋದಿಯ ಉತ್ತರಾಧಿಕಾರಿ ಆಗಬೇಕು ಎಂದರೆ ಅವರು ಮತ್ತೊಮ್ಮೆ ಉತ್ತರ ಪ್ರದೇಶ ಗೆಲ್ಲಬೇಕು. ಅದು ಆಗಬೇಕು ಎಂದರೆ ಯೋಗಿ ನಾನೇ ಮುಂದಿನ ಬಾರಿಯೂ ಸಿಎಂ ಎಂದು ಜನರ ಎದುರು ಹೋಗಬೇಕು. ಯೋಗಿಯ ಹೆಸರು ಬಿಟ್ಟರೆ ಉಳಿದವರಿಗೆ ಅದು ಕಷ್ಟ. ಹೀಗಾಗಿಯೇ ಯೋಗಿ ಈ ರೀತಿಯ ಸಂದೇಶ ರವಾನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇದೆಲ್ಲದರ ಜೊತೆಗೆ ಮುಂದಿನ ವರ್ಷ ಉತ್ತರ ಪ್ರದೇಶ ಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿ ಉತ್ತರ ಪ್ರದೇಶದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಪ್ಲಾನ್ ಮಾಡುತ್ತಿದೆ. ಶೀಘ್ರದಲ್ಲೇ ಉತ್ತರ ಪ್ರದೇಶ ಸಂಪುಟ ಪುನಾರಚನೆ ಆಗಬಹುದು.



