ಪ್ರಧಾನಿ ನರೇಂದ್ರ ಮೋದಿ ಕಳೆದ ಎರಡು ಲೋಕಸಭಾ ಚುನಾವಣೆಗಳಿಗಿಂತ ಈ ಬಾರಿ ವಿಭಿನ್ನವಾಗಿದ್ಧಾರೆ. ಎರಡೂ ಚುನಾವಣೆಗಳಲ್ಲಿ ಮೋದಿ ʻಮುಸ್ಲಿಂʼ ಹೆಸರು ಪ್ರಸ್ತಾಪ ಮಾಡಿರಲಿಲ್ಲ. ಈ ಹಿಂದಿನ ಗುಜರಾತ್ ಚುನಾವಣೆಗಳಲ್ಲಿಯೂ ಈ ವಿಷಯ ಪ್ರಸ್ತಾಪ ಆಗಿರಲಿಲ್ಲ. ಇಷ್ಟು ಚುನಾವಣೆಗಳಲ್ಲಿ ಬಳಸದ ಮುಸ್ಲಿಂ ಹೆಸರನ್ನು ಈ ಬಾರಿಯ ಚುನಾವಣೆ ಪ್ರಚಾರದಲ್ಲಿ ಬಳಸುತ್ತಿರುವುದೇಕೆ..? ಇದು ಮೋದಿ ಅವರಿಗೆ ಪದೇ ಪದೇ ಎದುರಾಗುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಮೋದಿ ಉತ್ತರ ಕೊಟ್ಟಿದ್ಧಾರೆ.
ಟೈಮ್ಸ್ ನೌಗೆ ನೀಡಿರುವ ಸಂದರ್ಶನದಲ್ಲಿ ಮೋದಿಗೆ ಈ ಪ್ರಶ್ನೆ ಎದುರಾಗಿದ್ದು, ಅಲ್ಲಿ ಇದಕ್ಕೆಲ್ಲ ಉತ್ತರ ಕೊಟ್ಟಿದ್ಧಾರೆ.
ಗುಜರಾತ್‌ನಲ್ಲಿ 10 ವರ್ಷಗಳಲ್ಲಿ 7 ಗಲಭೆಗಳು ನಡೆದಿವೆ ಆದರೆ 2002 ರ ನಂತರ ಗುಜರಾತ್‌ನಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ. ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ಆದರೆ.. ಒಂದು ಕಲ್ಪನೆಯನ್ನು ಮುಸ್ಲಿಮರಲ್ಲಿ ಬಿತ್ತಲಾಗುತ್ತಿದೆ. ಕಾಂಗ್ರೆಸ್ʻನವರು ನೆಹರೂ ಕಾಲದಿಂದಲೂ ನಮನ್ನು ಮುಸ್ಲಿಂ ವಿರೋಧಿ ಎಂದು ನಿಂದಿಸುತ್ತಿದ್ದಾರೆ. ಹಾಗೂ ತಮ್ಮನ್ನು ಮುಸ್ಲಿಂ ಸ್ನೇಹಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಮುಸ್ಲಿಮರಲ್ಲಿ ಭಯ ಹುಟ್ಟಿಸಿ ಅದರ ಲಾಭ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರದ ಯೋಜನೆಗಳ ಲಾಭ ಅವರಿಗೇಕೆ ಸಿಗಲಿಲ್ಲ ಎಂಬ ಪ್ರಶ್ನೆಯನ್ನು ಅವರೇ ಕೇಳಿಕೊಳ್ಳಬೇಕು.
ದೇಶವು ತುಂಬಾ ಪ್ರಗತಿಯಲ್ಲಿದೆ. ಆದರೆ ಮುಸ್ಲಿಂ ಸಮಾಜದಲ್ಲಿ ಪ್ರಗತಿಯ ಕೊರತೆ ಎದ್ದು ಕಾಣುತ್ತಿದೆ. ಅದಕ್ಕೆ ಕಾರಣವೇನು? ಕಾಂಗ್ರೆಸ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆಗಳ ಲಾಭ ಏಕೆ ಸಿಗಲಿಲ್ಲ? ಕಾಂಗ್ರೆಸ್ ಅವಧಿಯಲ್ಲಿ ನೀವು ಈ ದುಸ್ಥಿತಿಗೆ ಬಲಿಯಾಗಿದ್ದೀರ.. ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದಿರುವ ಮೋದಿ, ಜಗತ್ತಿನಲ್ಲಿ ಮುಸ್ಲಿಂ ಸಮಾಜ ಬದಲಾಗುತ್ತಿದೆ, ಇಂದು ನಾನು ಗಲ್ಫ್ ದೇಶಗಳಿಗೆ ಹೋಗುತ್ತೇನೆ, ನನಗೆ ವೈಯಕ್ತಿಕವಾಗಿ ತುಂಬಾ ಗೌರವ ಸಿಗುತ್ತದೆ ಮತ್ತು ಭಾರತವೂ ಅದನ್ನು ಪಡೆಯುತ್ತಿದೆ. ಇಲ್ಲಿ ವಿರೋಧವಿದೆ ಎಂದು ಅವರೆಲ್ಲ ಭಾವಿಸುತ್ತಾರೆ, ಯೋಗವು ಸೌದಿ ಅರೇಬಿಯಾದಲ್ಲಿ ಅಧಿಕೃತ ಪಠ್ಯಕ್ರಮದ ವಿಷಯವಾಗಿದೆ. ನಾನು ಇಲ್ಲಿ ಯೋಗದ ಬಗ್ಗೆ ಮಾತನಾಡಿದರೆ ಅದು ಮುಸ್ಲಿಂ ವಿರೋಧಿ ಎಂದು ಹೇಳುತ್ತೀರಿ. ಮುಸ್ಲಿಂ ಸಮುದಾಯವು ಕನಿಷ್ಠ ತಮ್ಮ ಮಕ್ಕಳ ಜೀವನದ ಬಗ್ಗೆ ಯೋಚಿಸಿ, ಅವರ ಭವಿಷ್ಯದ ಬಗ್ಗೆ ಯೋಚಿಸಿ ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ಧಾರೆ.
ಯಾವ ಸಮಾಜವೂ ಜೀತದಾಳುಗಳಂತೆ ಬದುಕುವುದು ನನಗೆ ಇಷ್ಟವಿಲ್ಲ. ನಾನು ಮುಸ್ಲಿಮರ ವಿರೋಧಿಯಲ್ಲ, ತ್ರಿವಳಿ ತಲಾಖ್ ರದ್ದುಗೊಳಿಸಿದಾಗ ಎಲ್ಲರೂ ನನ್ನನ್ನು ಹರಸಿದ್ದಾರೆ.
ಆಯುಷ್ಮಾನ್ ಕಾರ್ಡ್ ಎಲ್ಲರಿಗೂ ನೀಡಿದ್ದೇನೆ, ಕೋವಿಡ್ ಲಸಿಕೆ ಎಲ್ಲರಿಗೂ ಸಿಗುವಂತೆ ಮಾಡಿದ್ದೇನೆ ಎಲ್ಲೂ ತಾರತಮ್ಯ ಮಾಡಿಲ್ಲ
ಎಂದಿರುವ ಮೋದಿ, ಮುಸ್ಲಿಮರಿಗೆ ಮೀಸಲಾತಿ ಸಿಗುವುದಿಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ನಾನು ಹೇಳುತ್ತಿರುವುದು ಮೀಸಲಾತಿಯನ್ನು ನೀಡುವಲ್ಲಿ ಧರ್ಮದ ಆಧಾರದಲ್ಲಿ ನೀಡಲಾಗುವುದಿಲ್ಲ. ಬಡವರಲ್ಲಿ ಎಲ್ಲಾ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳು ಸೇರಿದ್ದಾರೆ; ಎಲ್ಲರೂ ಮೀಸಲಾತಿಯ ಪ್ರಯೋಜನಗಳನ್ನು ಪಡೆಯಬೇಕು. ಇನ್ಯಾರದ್ದೋ ಕಿತ್ತುಕೊಂಡು.. ಮತ್ತೊಬ್ಬರಿಗೆ ಕೊಡುವುದಕ್ಕೆ ವಿರೋಧ ಇದೆ ಎಂದಿದ್ಧಾರೆ.
ಪ್ರತಿಪಕ್ಷಗಳ ಸಮಸ್ಯೆ ಎಂದರೆ ಅವರ ಸುಳ್ಳುಗಳಲ್ಲಿಯೇ ಸಿಕ್ಕಿ ಬಿದ್ದಿರುವುದು. ಅದಕ್ಕಾಗಿಯೇ ಅವರು ತಪ್ಪುದಾರಿಗೆಳೆಯಲು, ಅವರು ಎಲ್ಲಾ ರೀತಿಯ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ. ಅವರು ಎಳೆದ ತಪ್ಪು ದಾರಿಗೆ ಹೋಗಬೇಡಿ ಎಂದು ಮನವಿ ಮಾಡಿದ್ಧಾರೆ.



