ಇತ್ತೀಚೆಗೆ ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ್ ರಾಜ್ ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದರು ಎಂಬ ಸುದ್ದಿ ವೈರಲ್ ಆಗಿತ್ತು. ಒಂದು ಎಐ ಫೋಟೋವನ್ನು ವಕೀಲ ಪ್ರಶಾಂತ್ ಸಂಬರಗಿ ಪೋಸ್ಟ್ ಮಾಡಿದ್ದರು. ಇದು ದೊಡ್ಡ ಸುದ್ದಿಯಾಗಿ, ಸಂಬರಗಿ ವಿರುದ್ಧ ಪ್ರಕಾಶ್ ರಾಜ್ ದೂರು ಕೊಟ್ಟಿದ್ದಾರೆ. ದೂರು ಕೊಡುವುದಕ್ಕಾಗಿಯೇ ಮೈಸೂರಿಗೆ ಬಂದಿದ್ದ ಪ್ರಕಾಶ್ ರಾಜ್, ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರವನ್ನೂ ಕೊಟ್ಟಿದ್ದಾರೆ. ಜೊತಗೆ ತಾನು ಹಿಂದೂ ವಿರೋಧಿ ಅಲ್ಲ. ಮೂಢ ನಂಬಿಕೆಗಳ ವಿರೋಧಿ ಎಂದು ಹೇಳಿದ್ದಾರೆ.
ದೂರು ಕೊಡುವುದಕ್ಕಾಗಿಯೇ ಮೈಸೂರಿಗೆ ಬಂದಿದ್ದ ಪ್ರಕಾಶ್ ರಾಜ್ ಅವರಿಗೆ ನೀವು ಕುಂಭಮೇಳದ ವಿರೋಧಿ, ಹಿಂದೂ ವಿರೋಧಿ, ಹಿಂದುತ್ವದ ವಿರೋಧಿ.. ಎಂಬೆಲ್ಲ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಪ್ರಕಾಶ್ ರಾಜ್ ಅವರಿಗೆ ಇದಾವುದೂ ಹೊಸದಲ್ಲ. ಈ ಬಾರಿಯೂ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ನಾನು ಕುಂಭಮೇಳದ ವಿರೋಧಿ ಅಲ್ಲ. ನಾನು ದೇವರನ್ನು ನಂಬೋದಿಲ್ಲ. ನಂಬುವವರನ್ನು ಧಿಕ್ಕರಿಸುವುದೂ ಇಲ್ಲ. ಅವರವರ ನಂಬಿಕೆ ಅವರದ್ದು. ನನ್ನ ಹೋರಾಟ ಸುಳ್ಳು ಸುದ್ದಿ ವಿರುದ್ಧ ಎಂಬ ಮಾತುಗಳನ್ನೂ ಆಡಿದ್ದಾರೆ. ಜೊತೆಗೆ ತಾವು ಈ ಹಿಂದೆ ಕ್ರೈಸ್ತ ಧರ್ಮ, ಮುಸ್ಲಿಂರಲ್ಲಿನ ಭಯೋತ್ಪಾದನೆಗೆ ಪ್ರೇರಣೆಯನ್ನೂ ಟೀಕಿಸಿದ್ದೇನೆ. ಆದರೆ ಹಿಂದೂ ಧರ್ಮದ ಬಗ್ಗೆ ಮಾತನಾಡುವುದನ್ನು ಮಾತ್ರ ಹೈಲೈಟ್ ಮಾಡ್ತಾರೆ ಎಂದಿದ್ದಾರೆ.
ಕುಂಭಮೇಳಕ್ಕೆ ಹೋದರೆ ತಪ್ಪೇನಿಲ್ಲ :
ಕುಂಭ ಮೇಳ ಎನ್ನುವುದು ಪುಣ್ಯ ಸ್ಥಾನ. ಹಲವರಿಗೆ ಅದರ ಮೇಲೆ ನಂಬಿಕೆ ಇದೆ, ಅಲ್ಲಿ ಹೋದರೆ ತಪ್ಪೇನು? ನಂಬಿಕೆ ಇದ್ದವರು ಹೋಗುತ್ತಾರೆ. ಅವರವರ ನಂಬಿಕೆ ಅವರವರಿಗೆ. ಯಾರೊಬ್ಬರ ನಂಬಿಕೆಯನ್ನು ಪ್ರಶ್ನೆ ಮಾಡಲು ನಾನ್ಯಾರು ಎಂದಿರುವ ಪ್ರಕಾಶ್ ರೈ ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನಾನು ದೇವರು ಇಲ್ಲದೆಯೂ ಇನ್ನೂ ಕೆಲ ವರ್ಷ ಬದುಕುತ್ತೇನೆ. ಆದರೆ ಮನುಷ್ಯರು ಇಲ್ಲದೇ ನಾನು ಬದುಕುವುದಿಲ್ಲ. ನಮಗೆ ಏನೇ ಸಮಸ್ಯೆ ಬಂದರೂ ನಮಗೆ ಮನುಷ್ಯರು ಬೇಕು ಎಂದಿದ್ದಾರೆ. ಏನೇ ತೊಂದರೆ ಆದರೂ ನಮ್ಮ ನೆರವಿಗೆ ಬರುವುದು ಮನುಷ್ಯರೇ ಹೊರತು, ದೇವರಲ್ಲ ಎನ್ನುವುದು ಪ್ರಕಾಶ್ ರೈ ಸಿದ್ಧಾಂತ.
ದೇವರನ್ನು ನಂಬೋದ್ರಿಂದ ಕೆಲವರಿಗೆ ನೆಮ್ಮದಿ, ಶಾಂತಿ ಸಿಗುತ್ತದೆ ಎಂದಾದರೆ ತಪ್ಪೇನು.. ಕುಂಭಮೇಳಕ್ಕೆ ಹೋಗುವುದು ತಪ್ಪಲ್ಲ. ಆದರೆ ಅದನ್ನು ರಾಜಕೀಯವಾಗಿ ಬಳಸಿಕೊಳ್ಳೋದು ತಪ್ಪು. ಯಾರದ್ದೇ ವಿರುದ್ಧ ಸುಳ್ಳು ಹರಡುವುದು ತಪ್ಪು ಎಂದಿದ್ದಾರೆ ಪ್ರಕಾಶ್ ರೈ.
ಕ್ರೈಸ್ತ ಧರ್ಮವನ್ನೂ ಟೀಕಿಸಿದ್ದೆ. ಮುಸ್ಲಿಂ ಧರ್ಮವನ್ನೂ ಟೀಕಿಸಿದ್ದೆ :
ತಮ್ಮ ವಿರುದ್ಧ ಹಿಂದೂ ಧರ್ಮದ ಬಗ್ಗೆ ಮಾತ್ರ ಟೀಕೆ ಮಾಡ್ತಾರೆ ಎಂಬ ಆರೋಪಗಳಿಗೆ ರಿಯಾಕ್ಷನ್ ಕೊಟ್ಟಿರುವ ಪ್ರಕಾಶ್ ರೈ ʻನಾನು ಈ ಹಿಂದೆ ಕ್ರೈಸ್ತ ಧರ್ಮ ಅನ್ನೋದು ಮಾಫಿಯಾ. ಮುಸ್ಲಿಮರಲ್ಲಿ ಭಯೋತ್ಪಾದಕರೂ ಇದ್ದಾರೆ ಎಂದೂ ಹೇಳಿದ್ದೇನೆ. ಅದ್ಯಾವುದೂ ಹೈಲೈಟ್ ಆಗಲ್ಲ. ನನಗೆ ಎಲ್ಲರ ಮಧ್ಯೆ ಸಾಮರಸ್ಯ ಮೂಡಿಸಬೇಕು ಅಷ್ಟೆ ಎಂದೂ ಅಭಿಪ್ರಾಯ ಪಟ್ಟಿದ್ಧಾರೆ. ಕ್ರೈಸ್ತರಲ್ಲಿ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಧರ್ಮವನ್ನು ಒಪ್ಪಿ ಬಂದರೆ ತಪ್ಪೇನಿಲ್ಲ. ಆದರೆ ಆಮಿಷ ಒಡ್ಡುವುದು ತಪ್ಪು ಎಂದು ಹೇಳಿದ್ದೆ. ಮುಸ್ಲಿಮರಲ್ಲಿ ಭಯೋತ್ಪಾದಕರನ್ನು ಟೀಕೆ ಮಾಡುವ ಗುಣ ಬೆಳೆಸಿಕೊಳ್ಳುತ್ತಿಲ್ಲ. ಭಯೋತ್ಪಾದಕರನ್ನೂ ಮೆಚ್ಚುವ ಒಂದು ದೊಡ್ಡ ಗುಂಪೇ ಇದೆ. ಇದು ಅಪಾಯಕಾರಿ ಎಂದು ಹೇಳಿದ್ದೆ ಎಂದಿರುವ ಪ್ರಕಾಶ್ ರೈ ನಾನು ಹೇಳಿದ್ದರಲ್ಲಿ ಹಿಂದೂ ಧರ್ಮ ಟೀಕೆ ಮಾಡುವುದು ಮಾತ್ರವೇ ಹೈಲೈಟ್ ಆಗುತ್ತಿದೆ ಎಂದಿದ್ದಾರೆ.



