ಡಿಕೆ ಶಿವಕುಮಾರ್ ಅವರಿಗೆ ಈ ಬಾರಿ ಸಿಎಂ ಪಟ್ಟ ಹೀಗೆ ಬಂದು ಹಾಗೆ ಹೋಯ್ತು. ಸಿಎಂ ಪಟ್ಟ ಎನ್ನುವುದು ಸ್ವರ್ಗದಂತೆ ರಪ್ಪಂತ ಪಾಸ್ ಆಗಿ ಹೋಯ್ತು. ಆದರೆ ಡಿಕೆಶಿಗೆ ಸಿಎಂ ಆಗುವ ಆಸೆ, ಉದ್ದೇಶ ಹೋಗಿಲ್ಲ. ಏಕೆಂದರೆ ವಯಸ್ಸಿನ್ನೂ ಡಿಕೆ ಶಿವಕುಮಾರ್ ಪರವಾಗಿಯೇ ಇದೆ. ರಾಜಕೀಯದಲ್ಲಿ ೬೦+ ನಿವೃತ್ತಿಯ ವಯಸ್ಸಲ್ಲ. ಅದು ಏರುಯೌವ್ವನದ ವಯಸ್ಸು. ಹೀಗಿರುವಾಗಲೇ ಡಿ.ಕೆ.ಶಿವಕುಮಾರ್ ನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಇದೀಗ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿ ವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ನಮ್ಮ ಮಠದ ಪರಮಭಕ್ತರು. ಅವರು ಮುಖ್ಯಮಂತ್ರಿಯಾಗುವುದಕ್ಕೆ ನಮ್ಮ ಆಶೀರ್ವಾದವಿದೆ. ಅವರಿಗಾಗಿ ನಾವು ಭಗವಂತನಲ್ಲಿ ಸಂಕಲ್ಪವನ್ನೂ ಮಾಡಿದ್ದೇವೆ. ನಮ್ಮ ಹಾಗೂ ನಿಮ್ಮೆಲ್ಲರ ಆಶಯದಂತೆ ದೇವರ ಆಶೀರ್ವಾದದಿಂದ ಡಿ.ಕೆ.ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗುತ್ತಾ ಎಂದು ಹೇಳಿದ್ಧಾರೆ ಕರಿ ವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ.
ಅಂದಹಾಗೆ ಡಿಕೆ ಶಿವಕುಮಾರ್ ಅವರಿಗೂ ನೊಣವಿನಕೆರೆ ಅಜ್ಜಯ್ಯನ ಮಠಕ್ಕೂ ಅವಿನಾಭಾವ ಸಂಬಂಧ ಇದೆ. ನಾನು ಇವತ್ತು ಏನಾಗಿದ್ದೇನೋ.. ಅದೆಲ್ಲದಕ್ಕೂ ಮಠದ ಆಶೀರ್ವಾದವಿದೆ ಎಂದು ಹೇಳಿಕೊಳ್ಳುವ ಡಿಕೆ ಶಿವಕುಮಾರ್, ಈ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದು ಕೂಡಾ ಅಜ್ಜಯ್ಯನವರ ಹೆಸರಲ್ಲಿ.
ತುಮಕೂರು ಜಿಲ್ಲೆಯ ತಿಪಟೂರಿನ ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪರಮ ಭಕ್ತರಾಗಿರುವ ಡಿಕೆ ಶಿವಕುಮಾರ್ ಅವರು ಆಗಾಗ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿರುತ್ತಾರೆ. ಯಾವುದೇ ಪ್ರಮುಖ ನಿರ್ಧಾರ ತಳೆಯುವ ಮುನ್ನ ಅವರು ಶ್ರೀಗಳ ಬಳಿ ಕೇಳಿಯೇ ಮುಂದುವರಿಯುತ್ತಾರೆ. ಪ್ರತಿಯೊಂದು ಕಾರ್ಯತಂತ್ರ ರೂಪಿಸುವ ಮುನ್ನವೂ ಶ್ರೀಗಳ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.
ವಿಧಾನಸಭಾ ಚುನಾವಣೆ ವೇಳೆ ನೊಣವಿನಕೆರೆ ಅಜ್ಜಯ್ಯನಿಗೆ ನಮಿಸಿದ ಬಳಿಕವೇ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಫಾರಂ ಹಂಚಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿದ ಬಳಿಕ ದಿಲ್ಲಿಗೆ ಹೈಕಮಾಂಡ್ ಗೆ ತೆರಳುವ ಮುನ್ನ ಅವರು ಇಲ್ಲಿಗೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದರು. ಚುನಾವಣೆಗೂ ಮುನ್ನ, ಫಲಿತಾಂಶಕ್ಕೂ ಮುನ್ನ ಹಲವು ಬಾರಿ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್, ಕೊನೆಯ ದಿನಗಳಲ್ಲಿಯೂ ಪ್ರಚಾರವನ್ನೂ ಸ್ಥಗಿತಗೊಳಿಸಿ ಮಠದಲ್ಲಿ ಹೋಮ ನೆರವೇರಿಸಿದ್ದರು. ಮಠದ ಸ್ವಾಮೀಜಿ ಹೇಳಿದ ಮಾತನ್ನು ಡಿಕೆ ತೆಗೆದುಹಾಕುವವರೇ ಅಲ್ಲ. ಹೀಗಿರುವಾಗಲೇ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಸ್ವಾಮೀಜಿ ಹೇಳಿರುವುದು ಡಿಕೆ ಬೆಂಬಲಿಗರಲ್ಲಿ ಸಂತಸಕ್ಕೆ ಕಾರಣವಾಗಿದ್ದರೆ, ರಾಜಕೀಯ ವಿರೋಧಿಗಳಲ್ಲಿ ತಳಮಳ ಸೃಷ್ಟಿಸಿದೆ.
ಡಿಕೆ ಶಿವಕುಮಾರ ಅವರು ಸಿಎಂ ಆಗಬೇಕೆಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಅಪ್ರಸ್ತುತ. ಈಗಂತೂ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ ಸಿಎಂ ಆಗುವುದು ನಮ್ಮ ಪಕ್ಷದ ವರಿಷ್ಠರ ಕೈಯ್ಯಲ್ಲಿರುತ್ತದೆ. ಇದಕ್ಕೆಂದೇ ಕಾಂಗ್ರೆಸ್ ಹೈಕಮಾಂಡ್ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇದ್ದಾರೆ. ಅವರೆಲ್ಲ ವೀಕ್ಷಣೆ ಮಾಡಿ ಶಾಸಕರ ಅಭಿಪ್ರಾಯ ಪಡೆದು ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ. ಹೀಗಾಗಿ ಈ ಪ್ರಶ್ನೆ ಈಗ ಸದ್ಯಕ್ಕೆ ಉದ್ಭವಿಸುವುದಿಲ್ಲ ಎಂದಿದ್ದಾರೆ ಎಂಬಿ ಪಾಟೀಲ್.



