ಹುಬ್ಬಳ್ಳಿ ಹೊತ್ತಿ ಉರಿಯುವುದಕ್ಕೆ ಸಿದ್ಧವಾಗಿತ್ತು. 5 ವರ್ಷದ ಪುಟ್ಟ ಬಾಲಕಿಯನ್ನು ಚಾಕೊಲೇಟ್ ಆಸೆ ತೋರಿಸಿ ಕದ್ದೊಯ್ದಿದ್ದ ಕಾಮುಕ ಅತ್ಯಾಚಾರ ಮಾಡಿ ಕೊಂದು ಹಾಕಿದ್ದ. ಬಿಹಾರ ಮೂಲದ ರಿತೇಶ್ ಕುಮಾರ್ ಅನ್ನೋ ಪಾಪಿಯನ್ನ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಅಂದಹಾಗೆ ಎನ್ ಕೌಂಟರ್ ಎನ್ನುವುದು ಜನಪ್ರಿಯ ಪದವಾದರೂ, ಅಲ್ಲಿ ನಡೆದದ್ದು ಆತ್ಮರಕ್ಷಣೆಗಾಗಿ. ಕೀಚಕನನ್ನು ಕೊಂದು ಹಾಕಿದ PSI ಅನ್ನಪೂರ್ಣ ಅವರೂ ಕೂಡಾ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಾಗಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿ ಬಿಹಾರ ಮೂಲದ ರಿತೇಶ್ ಕುಮಾರ್, ಹುಬ್ಬಳ್ಳಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ರಿತೇಶ್ ಕುಮಾರ್ ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರವಹಿಸಿದ ಹುಬ್ಬಳ್ಳಿಯ ಮಹಿಳಾ ಪೊಲೀಸ್ ಅಧಿಕಾರಿ ಅನ್ನಪೂರ್ಣ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಲೇಡಿ ಸಿಂಗಂ ಎಂದೆಲ್ಲ ಹೊಗಳುತ್ತಿದ್ದಾರೆ. ಆದರೆ ಸಿಂಗಂ ಅನ್ನೋದು ರೀಲ್ ಪಾತ್ರ. ಅದು ಸಿನಿಮಾ. ಅನ್ನಪೂರ್ಣ ರಿಯಲ್. ಭದ್ರಕಾಳಿ ಎಂದಷ್ಟೇ ಹೇಳಬಹುದು.
ಪಿಎಸ್‌ಐ ಅನ್ನಪೂರ್ಣ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳಾಗುತ್ತಿದ್ದು, ನೆಟ್ಟಿಗರು ಈ ಅಧಿಕಾರಿಯನ್ನು “ಭದ್ರಕಾಳಿ” ಎಂದು ಕೊಂಡಾಡಿದ್ದಾರೆ. ಅನೇಕರು ಆಕೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆ ನೀಡಿದ “ಪಿಎಸ್‌ಐ ಅನ್ನಪೂರ್ಣ ಅವರಿಗೆ ಧನ್ಯವಾದ” ಎಂದು ಹೇಳಿದ್ದಾರೆ. ಅನ್ನಪೂರ್ಣ ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲೆಡೆ ಪ್ರಾರ್ಥನೆ ನಡೆಯುತ್ತಿದೆ.
ಘಟನೆಯ ವಿವರ : ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಕಾಣೆ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಆಕೆಯ ಶವ ಇಲ್ಲಿನ ವಿಜಯನಗರದ ಶೆಡ್‌ವೊಂದರಲ್ಲಿ ಸಿಕ್ಕಿತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಸಿಸಿಟಿವಿ ಕ್ಯಾಮರಾ ಮತ್ತು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ, ಆರೋಪಿಯ ಬೇಟೆ ಆರಂಭಿಸಿದರು. ಆದರೆ ಆರೋಪಿ ರಿತೇಶ್ ಕುಮಾರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಮತ್ತು ಆತನ ದಾಖಲೆಗಳನ್ನು ಪರಿಶೀಲಿಸಲು, ಪೊಲೀಸರು ಆತನನ್ನು ತಾರಿಹಾಳ ಸೇತುವೆ ಬಳಿ ಇರುವ ಪಾಳು ಬಿದ್ದ ಮನೆಯೊಂದಕ್ಕೆ ಕರೆದೊಯ್ದಾಗ, ಆರೋಪಿಯು ಪೊಲೀಸರತ್ತ ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಮಹಿಳಾ ಪೊಲೀಸ್ ಅಧಿಕಾರಿ ಅನ್ನಪೂರ್ಣ, ಮೊದಲು ಏರ್‌ಫೈರ್ ಮಾಡಿ ಆರೋಪಿಯನ್ನು ತಡೆಯಲೆತ್ನಿಸಿದ್ದಾರೆ. ಆದರೆ ಆತ ಅನ್ನಪೂರ್ಣ ಅವರ ಮೇಲೂ ಹಲ್ಲೆ ನಡೆಸಿ ಓಡಿ ಹೋಗುತ್ತಿದ್ದಾಗ, ಪಿಎಸ್‌ಐ ಅನ್ನಪೂರ್ಣ ಅವರು ಆತನ ಕಾಲು ಮತ್ತು ಬೆನ್ನಿನ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಇದಿಷ್ಟೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೀಡಿರುವ ವಿವರ.
ಹೇಗಿದ್ದಾರೆ ಅನ್ನಪೂರ್ಣ..?
ಪಿಎಸ್‌ಐ ಅನ್ನಪೂರ್ಣ ಅವರು ಗುಣಮುಖರಾಗುತ್ತಿದ್ಧಾರೆ. ಪರಿಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಕ್ಕೆ ಅಪಾಯವಿಲ್ಲ. ಇನ್ನು PC ಯಶವಂತ್, ವೀರೇಶ್ ಇಬ್ಬರಿಗೂ ಗಾಯಗಳಾಗಿವೆ. ಆದರೆ ಗಂಭೀರ ಗಾಯಗಳನೇನಲ್ಲ. ಸದ್ಯಕ್ಕೆ ಗಂಭೀರ ಗಾಯಗಳಾಗಿರುವುದು ಅನ್ನಪೂರ್ಣ ಅವರಿಗೆ ಮಾತ್ರ.
ಕೆರಳಿತ್ತು ಹುಬ್ಬಳ್ಳಿ :
ಅತ್ಯಾಚಾರ ನಡೆದಿದ್ದುದು ಕೇವಲ 5 ವರ್ಷ ಪುಟಾಣಿ ಮಗುವಿನ ಮೇಲೆ. 5 ವರ್ಷದ ಮಗುವನ್ನೂ ಬಿಡಲ್ವಾ.. ಥೂ.. ಇಂತಹವರನ್ನು ಮಟ್ಟಹಾಕಲೇಬೇಕು ಎಂದು ರೊಚ್ಚಿಗೆದ್ದ ಹುಬ್ಬಳ್ಳಿಯ ಜನ ಪೊಲೀಸರಿಗೆ ಚಾಲೆಂಜ್ ಹಾಕುತ್ತಿದ್ದರು. ನೀವು ಆರೋಪಿಯನ್ನು ಹಿಡಿದು ತನ್ನಿ, ನಾವು ಶಿಕ್ಷೆ ಕೊಡ್ತೇವೆ ಎಂದು ಬೀದಿಗೆ ಇಳಿದಿದ್ದರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ನಡೆಸುವ ಬದಲು ನಮ್ಮೆದುರಿಗೇ ಗುಂಡು ಹೊಡೆದು ಕೊಲ್ಲಬೇಕು. ನಿಮ್ಮಿಂದ ಆಗದಿದ್ದರೆ, ಅವನನ್ನು ನಮಗೆ ಒಪ್ಪಿಸಿ, ನಾವು ತಕ್ಕ ಶಿಕ್ಷೆ ನೀಡುತ್ತೇವೆ ಎಂದು ಪಟ್ಟು ಹಿಡಿದರು.ಅಂತಿಮವಾಗಿ ಆರೋಪಿ ಎನ್ ಕೌಂಟರ್ ಆಗಿದ್ದಾನೆ.



