ಕಾಟೇರ ಸಿನಿಮಾ ಥಿಯೇಟರುಗಳಲ್ಲಿದೆ. ಈಗಾಗಲೇ ಸಿನಿಮಾ 100 ಕೋಟಿ ಕ್ಲಬ್ ಸೇರುವ ತವಕದಲ್ಲಿದೆ. ಜನ ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಹಳೆಯ ಫ್ಲಾಪ್ ಆಗಿದ್ದ ಚಿತ್ರಗಳ ನೋವನ್ನೆಲ್ಲ ಮೀರಿಸುವಂತೆ ಕಾಟೇರದ ಮೂಲಕ ದರ್ಶನ್ ಗೆದ್ದಿದ್ದಾರೆ. ಆದರೆ..ಕಾಟೇರ ಚಿತ್ರವನ್ನು ಪೈರಸಿ ಮಾಡುವವರ ಸಂಖ್ಯೆಯೂ ದೊಡ್ಡದಾಗಿದೆ. ಅಂತಹ ಒಬ್ಬ ಸಿಕ್ಕಿಬಿದ್ದಿದ್ದರೆ, ಮತ್ತೊಬ್ಬ ಎಸ್ಕೇಪ್.
40 ರೂ.ಗೆ ಕಾಟೇರ ಮಾರುತ್ತಿದ್ದ : ಜಸ್ಟ್ 40 ರೂಪಾಯ್ ಕೊಟ್ರೆ ಸಾಕು, ಕಾಟೇರ ಸಿನಿಮಾದ ಫುಲ್ ವಿಡಿಯೋ ಸಿಗ್ತಾ ಇತ್ತು. ಜಸ್ಟ್ 40 ರೂಪಾಯ್ʻಗೆ. ಥಿಯೇಟರ್ ಪ್ರಿಂಟ್ ಮಾಡಿಕೊಂಡು ಕಾಟೇರ ಮಾರುವುದನ್ನೇ ವ್ಯವಹಾರ ಮಾಡಿಕೊಂಡಿದ್ದವನು ರಾಯಚೂರಿನ ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡಾದ ಮೌನೇಶ್. ಈಗ ಅರೆಸ್ಟ್ ಆಗಿದ್ಧಾನೆ. ಇನ್ನೊಬ್ಬ ಕಿಂಗ್ ಪಿನ್ ಉಪೇಂದ್ರ ನಾಪತ್ತೆಯಾಗಿದ್ಧಾನೆ.
40 ರೂ. ಆಸೆಗೆ ಸಿಕ್ಕಿ ಬಿದ್ದ..!
ಕಾಟೇರ ಚಿತ್ರದ ಕಲ್ಯಾಣ ಕರ್ನಾಟಕ ವಿತರಣೆ ಹಕ್ಕು ಪಡೆದಿರೋದು ಗುರು ದೇಶಪಾಂಡೆ (ರಾಜಾಹುಲಿ ಖ್ಯಾತಿ). ಗುರು ದೇಶಪಾಂಡೆ ತಂಡದವರಿಗೆ ಟೆಲಿಗ್ರಾಮ್‌ನಲ್ಲಿ ಲಿಂಕ್‌ಗಳನ್ನು ಈತ ಮಾರಾಟ ಮಾಡುತ್ತಿರುವುದು ಗೊತ್ತಾಗುತ್ತೆ. ಅವರು ಡೈರೆಕ್ಟ್ ಆಗಿ ಮೌನೇಶ್ʻನನ್ನ ಕಾಂಟ್ಯಾಕ್ಟ್ ಮಾಡ್ತಾರೆ. 40 ರೂ.ಗಳನ್ನ ಮೌನೇಶ್ ಅಕೌಂಟಿಗೆ ಹಾಕಿ ಲಿಂಕ್ ತರಿಸಿಕೊಳ್ತಾರೆ. ಆಮೇಲೆ ತಮ್ಮ ತಂಡದ ವಾದಿರಾಜ್ ಎಂಬುವವರಿಂದ ದೂರು ದಾಖಲಿಸ್ತಾರೆ. ಸದ್ಯ ರಾಯಚೂರಿನ ಸದರ ಬಜಾರ್ ಠಾಣೆ ಪೊಲೀಸರು ಮೌನೇಶ್‌ನನ್ನು ಬಂಧಿಸಿದ್ದು, ಈತನ ವಿರುದ್ಧ ಕಾಪಿ ರೈಟ್ ಆಕ್ಟ್ ಹಾಗೂ 420 ಐಪಿಸಿ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.
ದರ್ಶನ್ ಅಭಿನಯದ ಕಾಟೇರ ಮೊದಲ ವಾರಕ್ಕೇ 95+ ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಹೊಸ ದಾಖಲೆ ಬರೆಯುತ್ತಿದೆ. ದರ್ಶನ್‌ಗೆ ಆರಾಧನಾ ನಾಯಕಿಯಾಗಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕ. ಶ್ರುತಿ, ಪದ್ಮಾ ವಾಸಂತಿ, ಕುಮಾರ್ ಗೋವಿಂದ್, ಅವಿನಾಶ್, ಜಗಪತಿ ಬಾಬು, ಮಾ ರೋಹಿತ್, ವಿನೋದ್ ಆಳ್ವಾ, ಬಿರಾದಾರ್, ರವಿ ಚೇತನ್ ಮುಂತಾದವರು ನಟಿಸಿರುವ ಸಿನಿಮಾ ಇದೀಗ ವಿದೇಶ ಯಾತ್ರೆ ಹೊರಟಿದೆ.
ಇತ್ತೀಚೆಗೆ ‘ಕಾಟೇರ’ ಸಿನಿಮಾದ ಸಕ್ಸಸ್ ಮೀಟ್ ಆಗಿತ್ತು. ಆ ಸಂದರ್ಭದಲ್ಲಿ ದರ್ಶನ್ ಅವರು ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದ್ದರು. ಚಿತ್ರವನ್ನು ಕದ್ದು ಶೂಟ್ ಮಾಡಿ, ಟೆಲಿಗ್ರಾಂ ಸೇರಿದಂತೆ ಹಲವು ಕಡೆ ಹಂಚಲಾಗುತ್ತಿದೆ ಎಂದಿದ್ದರು. ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ ಪೈರಸಿ ಮಾಡುವವರು ಹೆದರುವುದಿಲ್ಲ. ಚಿತ್ರತಂಡಗಳು ಅಲರ್ಟ್ ಆಗಿವೆ. ಆದರೆ ಸಿನಿಮಾ ಒಮ್ಮೆ ಥಿಯೇಟರಿಂದ ಹೋದರೆ ಅಲ್ಲಿಗೆ ಅವರೂ ಸ್ಟಾಪ್ ಮಾಡ್ತಾರೆ. ಒಟ್ಟಿನಲ್ಲಿ ಪೈರಸಿ ಕಾಡ್ತಾನೇ ಇದೆ.



