ಇತ್ತೀಚೆಗೆ ಇಡೀ ದೇಶದಾದ್ಯಂತ ಮಸೀದಿಯ ಸುತ್ತಮುತ್ತ ಜೈಶ್ರೀರಾಮ್ ಘೋಷಣೆ ಕೂಗುವುದು, ದೇವಸ್ಥಾನ, ಹಿಂದೂ ಹಬ್ಬಗಳ ಮೆರವಣಿಗೆಯಲ್ಲಿ ಅಲ್ಲಾ ಹೋ ಅಕ್ಬರ್ ಎಂದು ಕೂಗುವುದು, ಅವುಗಳು ದೊಡ್ಡ ದೊಡ್ಡ ಅನಾಹುತಗಳಿಗೆ ತಿರುಗುವುದು ನಡೆಯುತ್ತಲೇ ಇದೆ. ಆದರೆ ಇಂತದ್ದೇ ಪ್ರಕರಣವೊಂದರಕ್ಕೆ ಹೈಕೋರ್ಟ್ ನೀಡಿರುವ ತೀರ್ಪು ರಾಜ್ಯದ ಜನರಿಗೆ ಪಾಠ ಹೇಳುವಂತೆ ಇದೆ. ಮಸೀದಿ ಸಮೀಪ ಜೈಶ್ರೀರಾಮ್ ಎಂದು ಘೋಷಣೆ ಕೂಗುವುದು ತಪ್ಪೂ ಅಲ್ಲ, ಅಪರಾಧವೂ ಅಲ್ಲ ಎಂದು ಅಭಿಪ್ರಾಯಪಟ್ಟಿದೆ ಹೈಕೋರ್ಟ್.
ಪ್ರಕರಣ ಏನು..?
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಐತ್ತೂರು ಗ್ರಾಮದ ಮರ್ಧಾಳ ಎಂಬಲ್ಲಿ ಬದ್ರಿಯಾ ಜುಮ್ಮಾ ಮಸೀದಿಯ ಆವರಣದಲ್ಲಿ ಸೆ. 24 ರಂದು ರಾತ್ರಿ ಆರೋಪಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದು, ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆಂದು ಆರೋಪಿಸಲಾಗಿತ್ತು. ಮಸೀದಿ ಸಿಬ್ಬಂದಿ ಕಡಬ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಸಿಸಿಟಿವಿ ದೃಶ್ಯಗಳನ್ನೂ ನೀಡಿದ್ದರು. ಆ ದೂರಿನ ಅನ್ವಯ ಆರೋಪಿಗಳಿಬ್ಬರ ವಿರುದ್ಧ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ), 505 (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), 34 (ಸಾಮಾನ್ಯ ಉದ್ದೇಶ) ಮತ್ತು 295 ‘ಎ’ ಸೇರಿ ವಿವಿಧ ಐಪಿಸಿ ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣವನ್ನು ರದ್ದು ಮಾಡುವಂತೆ ಪುತ್ತೂರಿನ ಬಿಳಿನೆಲೆ ಗ್ರಾಮದ ಕೀರ್ತನ್ ಮತ್ತು ಮಂಗಳೂರಿನ ಕೈಕಂಬದ ಸಚಿನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಮಸೀದಿ ಸಮೀಪ ಜೈಶ್ರೀರಾಮ್ ಕೂಗುವುದು ಹೇಗೆ ಅಪರಾಧವಾಗುತ್ತದೆ ಎಂದು ಅಭಿಪ್ರಾಯಟ್ಟಿದೆ. ಪ್ರಕರಣವನ್ನೂ ರದ್ದು ಮಾಡಿದೆ.
ಹೈಕೋರ್ಟ್ ಅಭಿಪ್ರಾಯ ಏನಿತ್ತು..?
ದೂರುದಾರರು ಖುದ್ದು ಹೇಳಿರುವಂತೆ ಆ ಭಾಗದಲ್ಲಿ ಹಿಂದೂ – ಮುಸ್ಲಿಮರು ಒಟ್ಟಾಗಿ ಸೌರ್ಹಾದತೆಯಿಂದ ಜೀವಿಸುತ್ತಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 295 ‘ಎ’ (ಧಾರ್ಮಿಕ ಭಾವನೆ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆಂದು ಅರ್ಥವಾಗುತ್ತಿಲ್ಲ. ಜತೆಗೆ, ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ
ಪ್ರಕರಣದಲ್ಲಿ ಇವರ ವಿರುದ್ಧ (ಕೀರ್ತನ್ ಮತ್ತು ಸಚಿನ್) ಬೇರೆ ಪ್ರಕರಣಗಳಿದ್ದರೆ ವಿಚಾರಣೆ ನಡೆಸಬಹುದು. ಕಾನೂನು ಉಲ್ಲಂಘನೆ ಮೊದಲಾದ ಆರೋಪಗಳಿದ್ದರೆ ವಿಚಾರಣೆ ನಡೆಸುವುದಕ್ಕೆ ಅವಕಾಶ ಇದೆ. ಆದರೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಸತ್ಯ ಅಲ್ಲ. ಇನ್ನೊಂದು ಧರ್ಮದವರ ಧಾರ್ಮಿಕ ಸ್ಥಳದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಅಲ್ಲ ಎಂದು ಹೇಳಿದೆ.
ಕೋರ್ಟ್ ತೀರ್ಪಿನ ಬಗ್ಗೆ ವಿರೋಧ ಅಭಿಪ್ರಾಯಗಳೂ ಇವೆ. ಮಸೀದಿಯಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗುವುದು ತಪ್ಪಲ್ಲ ಎಂಬುದರ ಜೊತೆಯಲ್ಲಿಯೇ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಬೇರೆ ಧರ್ಮದ ಘೋಷಣೆ ಕೂಗುವುದೂ ಕೂಡಾ ತಪ್ಪಲ್ಲ ಎಂದಾಗುತ್ತದೆ. ಇದಕ್ಕೆ ನ್ಯಾಯಾಲಯ ಅವಕಾಶ ಮಾಡಿಕೊಡಬಾರದಿತ್ತು ಎಂಬ ಮಾತುಗಳೂ ಇವೆ.



