ಹುಟ್ಟುಹಬ್ಬ ಎಂದರೆ ಅಲ್ಲಿ ಕೇಕ್ ಇರಬೇಕು. ಹಾಡು ಕುಣಿತ ಇರಬೇಕು. ಅವೆಲ್ಲದರ ಜೊತೆ ಬರ್ತ್ ಡೇ ವಿಶೇಷವೂ ಆಗಿರಬೇಕು. ದುನಿಯಾ ವಿಜಯ್ ಹುಟ್ಟುಹಬ್ಬ ಎಂದರೆ ಅಲ್ಲಿ ಸೆಲಬ್ರೇಷನ್ನಿಗೆ ಕೊರತೆ ಇರೋದಿಲ್ಲ. ಆದರೆ ವಿಶೇಷತೆಗಳಿರುತ್ತವೆ. ಈಗಾಗಲೇ ಹುಟ್ಟುಹಬ್ಬಕ್ಕೆ ಫ್ಲೆಕ್ಸ್ ಹಾಕಿ, ಕೇಕು, ಕುಣಿತ ದುಂದುವೆಚ್ಚ ಬೇಡ ಎಂಬ ಮೆಸೇಜ್ ಕೊಟ್ಟಿದ್ದಾರೆ ವಿಜಯ್. ಅಷ್ಟೇ ಅಲ್ಲ, ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬ ಹೇಗಿರಬೇಕು ಅನ್ನೋ ಸಂದೇಶವನ್ನೂ ಕೊಟ್ಟಿದ್ದಾರೆ. ಒಂದು ಸಿನಿಮಾ ಟೀಸರ್.. ಜೈಲು.. ಖೈದಿಗಳಿಗೆ ನೆರವು.. ಅಪ್ಪ ಅಮ್ಮನ ಸಮಾಧಿ : ಇದೇನಾ ದುನಿಯಾ ವಿಜಯ್ ಹುಟ್ಟುಹಬ್ಬದ ಸ್ಪೆಷಲ್ಲು..
ಸ್ಯಾಂಡಲ್ʻವುಡ್ ಸಲಗನ ಭೀಮನ ಅವತಾರ.. : ದುನಿಯಾ ವಿಜಯ್ ಬರ್ತ್ ಡೇ ಸ್ಪೆಷಲ್ ಎನ್ನಬಹುದು. ದುನಿಯಾ ವಿಜಯ್ ಹುಟ್ಟುಹಬ್ಬ ವಿಶೇಷವಾಗಿದೆ. ಒಂದಲ್ಲ..ಎರಡಲ್ಲ.. ಹಲವು ರೀತಿಯಲ್ಲಿ ಈ ಬರ್ಡ್ ಡೇ ಸ್ಪೆಷಲ್. ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆಂದೇ ಭೀಮನ ಟೀಸರ್ ರಿಲೀಸ್ ಆಗಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಭೀಮ ಚಿತ್ರಕ್ಕೆ ಕಥೆಯೂ ವಿಜಯ್ ಅವರದ್ಧೇ. ಅಂಡರ್ʻವರ್ಲ್ಡ್ ಕಥೆ ಇರೋ ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಕ್ಯಾರೆಕ್ಟರ್ ಏನು ಅನ್ನೋ ನಿಗೂಢತೆ ಹಾಗೆಯೇ ಉಳಿದುಕೊಂಡಿದೆ. ಅಂದರೆ ತಾವು ಮಾಡುತ್ತಿರುವ ವೃತ್ತಿಯನ್ನು ಮರೆಯಬಾರದು. ಅದು ಮೊದಲ ಮೆಸೇಜ್.
ಇನ್ನೊಂದು ವಿಶೇಷವೆಂದರೆ ಹುಟ್ಟುಹಬ್ಬದ ವಿಶೇಷವಾಗಿ ಕೆಲವು ವಿಚಾರಣಾಧೀನ ಖೈದಿಗಳಿಗೆ ಜಾಮೀನು ಕೊಟ್ಟು ರಿಲೀಸ್ ಮಾಡಿಸಿದ್ದಾರೆ ವಿಜಯ್.ಏನೋ ತಪ್ಪು ಮಾಡಿ ಜೈಲು ಸೇರಿರುತ್ತಾರೆ. ಜಾಮೀನು ಸಿಕ್ಕಿದ್ದರೂ ದಂಡ ಕಟ್ಟೋಕೆ ಹಣ ಇರಲ್ಲ. ಅಂತಹ ಕೆಲವರ ದಂಡ ಕಟ್ಟಿ ಬಿಡುಗಡೆಗೆ ಸಹಕರಿಸಿದ್ದಾರೆ ವಿಜಯ್. ಅಶಕ್ತರಿಗೆ ಕೈಲಾದಷ್ಟು ನೆರವು ನೀಡಬೇಕು ಅನ್ನೋದು ಎರಡನೇ ಮೆಸೇಜ್.
ಮತ್ತೊಂದು ವಿಶೇಷವೆಂದರೆ ಈ ಬಾರಿಯೂ ಹುಟ್ಟುಹಬ್ಬವನ್ನು ತಂದೆ ತಾಯಿಯ ಸಮಾಧಿ ಬಳಿಯೇ ಆಚರಿಸಿಕೊಂಡಿದ್ದು. ದುನಿಯಾ ವಿಜಯ್ ಅವರು ಕಳೆದ ವರ್ಷವೂ ಬರ್ತಡೇನ ತಂದೆ, ತಾಯಿ ಸಮಾಧಿ ಬಳಿಯೇ ಮಾಡಿಕೊಂಡಿದ್ದರು. ಈ ಬಾರಿ ಸಮಾಧಿಯನ್ನು ದೇವಸ್ಥಾನದಂತೆ ನಿರ್ಮಿಸಿದ್ದಾರೆ. ಈ ಮೂಲಕ ತಂದೆ, ತಾಯಿ ಮೇಲಿರುವ ಪ್ರೀತಿಯನ್ನು ಅವರು ಹೊರ ಹಾಕಿದ್ದಾರೆ. ಅಪ್ಪ ಅಮ್ಮನೇ ದೇವರು ಅನ್ನೋದು ಮೂರನೇ ಮೆಸೇಜ್.
ಇನ್ನು ಹುಟ್ಟುಹಬ್ಬದಂದು ಎಂದಿನಂತೆ ಅನ್ನ ಸಂತರ್ಪಣೆ ಇರಲಿದೆ. ನಾನ್ ವೆಜ್ ಊಟವೂ ಇರಲಿದೆ. ಹಸಿದು ಬಂದವರಿಗೆ ಅನ್ನ ಹಾಕಬೇಕು ಅನ್ನೋದು 4ನೇ ಮೆಸೇಜ್. ಹೀಗೆ ಮಾತಿನಲ್ಲಿ ಅಲ್ಲ, ಕೃತಿಯಲ್ಲಿಯೇ ಹುಟ್ಟುಹಬ್ಬದ ಸಂಭ್ರಮ ಹೇಗಿರಬೇಕು ಅನ್ನೋ ಸಂದೇಶ ಕೊಟ್ಟಿದ್ಧಾರೆ ದುನಿಯಾ ವಿಜಯ್.
ಸಲಗ ಸಿನಿಮಾದಲ್ಲಿ ನಟಿಸಿ, ನಿರ್ದೇಶಿಸಿ ದುನಿಯಾ ವಿಜಯ್ ಅವರು ಖ್ಯಾತಿ ಪಡೆದರು. ಈಗ ‘ಭೀಮ’ ಮೂಲಕ ಎರಡನೇ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದು ಕೂಡ ರೌಡಿಸಂ ಕಥೆ. ಟೀಸರ್ನಲ್ಲಿ ಬರೋ ಡೈಲಾಗ್ ಗಮನ ಸೆಳೆದಿದೆ.



