ಆಯುಧಪೂಜೆಯ ಶುಕ್ರವಾರದಂದು ರಿಲೀಸ್ ಆದ ಚಿತ್ರ ಮಾರ್ಟಿನ್. ಧ್ರುವ ಸರ್ಜಾ ಅಭಿನಯದ ಚಿತ್ರವೊಂದನ್ನು ಪ್ರೇಕ್ಷಕರು ನೋಡಿ ಸರಿಸುಮಾರು 4 ವರ್ಷಗಳೇ ಆಗಿದ್ದ ಕಾರಣ, ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಬಹುತೇಕ ಎಲ್ಲ ಚಿತ್ರಗಳಂತೆ ಈ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದವು. ಏಕೆಂದರೆ ಸೂಪರ್ ಡ್ಯೂಪರ್ ಹಿಟ್ ಎನಿಸಿಕೊಂಡಿರುವ ಅಣ್ಣಾವ್ರ ಬಂಗಾರದ ಮನುಷ್ಯ, ವಿಷ್ಣುವರ್ಧನ್ ಅವರ ಬಂಧನ, ಶಿವಣ್ಣ ಅವರ ಓಂ, ಜನುಮದ ಜೋಡಿ.. ಅಷ್ಟೆಲ್ಲ ಏಕೆ.. ತೀರಾ ಇತ್ತೀಚಿನ ಉದಾಹರಣೆ ಎಂದರೆ ಕಾಂತಾರ, ಕೆಜಿಎಫ್, ಕಾಟೇರ ಮೊದಲಾದ ಚಿತ್ರಗಳೂ ಪ್ರೇಕ್ಷಕರಿಂದ 100% ಜೈಕಾರವನ್ನೇನೂ ಹಾಕಿಸಿಕೊಂಡಿಲ್ಲ. ಇಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನೂ ಬೈದವರಿದ್ದಾರೆ. ಹಾಗೆಯೇ ಮಾರ್ಟಿನ್ ಕೂಡಾ, ಕೆಲವರ ಪ್ರಕಾರ ಅದ್ಭುತ ಚಿತ್ರ. ಇನ್ನೂ ಕೆಲವರ ಪ್ರಕಾರ.. ಓಕೆ ಓಕೆ, ಒಂದ್ಸಲ ನೋಡ್ಬಹುದಾದ ಸಿನಿಮಾ.. ಮತ್ತೂ ಕೆಲವರ ಪ್ರಕಾರ ಕೆಟ್ಟ ಸಿನಿಮಾ. ಈ ರೀತಿಯ ಮಿಶ್ರ ಪ್ರತಿಕ್ರಿಯೆಗಳ ನಡುವೆಯೇ ಧ್ರುವ ಸರ್ಜಾರ ಮಾರ್ಟಿನ್ ಮೊದಲ ಮತ್ತು ಎರಡನೇ ದಿನ ಭರ್ಜರಿ ಕಲೆಕ್ಷನ್ ಮಾಡಿದೆ.
ಎರಡೂ ದಿನಗಳ ಒಟ್ಟಾರೆ ಕಲೆಕ್ಷನ್ 12 ಕೋಟಿ ದಾಟಿದೆ ಎನ್ನಲಾಗಿದೆ. ಮೊದಲ ದಿನ ಆರೂವರೆ ಕೋಟಿ ಕಲೆಕ್ಷನ್ ಮಾಡಿರುವ ಚಿತ್ರ, 2ನೇ ದಿನವೂ 6 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿಗಳು ಹೊರಬೀಳಬೇಕಿದೆ.
ಈ ನಡುವೆ ಚಿತ್ರದ ಬಗ್ಗೆ ಕೆಟ್ಟದಾಗಿ ಬೈದು ವಿಮರ್ಶೆ ಮಾಡಿದ್ದ ಸುಧಾಕರ್ ಗೌಡ ಎಂಬ ರೀಲ್ಸ್ ನಟ ಕ್ಷಮೆ ಕೇಳಿದ್ದಾರೆ. ಕಾಮಿಡಿ ವೀಡಿಯೋಗಳ ಮೂಲಕ ಸುಧಾಕರ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದ ಕಲಾವಿದ. ಈತ ತನ್ನ ವಿಡಿಯೋದಲ್ಲಿ ಕಚಡಾ ಸಿನಿಮಾ, ಚಿತ್ರತಂಡವೇ ಥಿಯೇಟರ್‌ಗಳಲ್ಲಿ ಫೇಕ್ ಬುಕ್ಕಿಂಗ್ ಮಾಡಿಸುತ್ತಿದೆ. ತಲೆ ಚಿಟ್ಟು ಹಿಡಿಸೋ ಸಿನಿಮಾ, ಇಂತಹ ಸಿನಿಮಾನ ನೋಡೋದಾದ್ರೂ ಹೇಗೆ..? ಬೇರೆ ಭಾಷೆಯವರಿಗೆ ಇದು ನಮ್ಮ ಕನ್ನಡದ ಸಿನಿಮಾ ಅಂತಾ ತೋರಿಸೋದು ಹೇಗೆ.. ಎಂದೆಲ್ಲ ಹೇಳಿಕೊಂಡಿದ್ದರು.
ಇದು ವೈರಲ್ ಆಗುತ್ತಿದ್ದಂತೆಯೇ ಧ್ರುವ ಸರ್ಜಾ ಫ್ಯಾನ್ಸ್ ಸುಧಾಕರ್ ಗೌಡ ವಿರುದ್ಧ ತಿರುಗಿಬಿದ್ದಿದ್ದರು. ಇದೀಗ ಅದೇ ಸುಧಾಕರ್ ಗೌಡ ಮತ್ತೊಂದು ವೀಡಿಯೋ ಮಾಡಿ ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ‘ಮಾರ್ಟಿನ್’ ಸಿನಿಮಾ ನೋಡಿ ನನಗೆ ಅನ್ನಿಸಿದ ಅಭಿಪ್ರಾಯವವನ್ನು ರಿವ್ಯೂ ವೀಡಿಯೋದಲ್ಲಿ ಹೇಳಿದ್ದೆ. ಆದರೆ ಅದು ಕೆಲವರಿಗೆ ಬೇಸರ ತಂದಿದೆ. ಹಾಗಾಗಿ ನಾನು ಅವರ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ವಿತರಕರ ಪ್ರಕಾರ ಮಾರ್ಟಿನ್ ಚಿತ್ರ ಮಲ್ಟಿಪ್ಲೆಕ್ಸ್ʻಗಳಿಗಿಂತ ಸಿಂಗಲ್ ಸ್ಕ್ರೀನ್ ಥಿಯೇಟರುಗಳಲ್ಲಿ ಒಳ್ಳೆಯ ಬಿಸಿನೆಸ್ ಮಾಡಿದೆ. ಕನ್ನಡ ಬಿಟ್ಟರೆ, ಹಿಂದಿ ಏರಿಯಾಗಳಲ್ಲಿ ಎರಡು ದಿನಗಳಲ್ಲಿ ಅಂದಾಜು ಒಂದು ಕೋಟಿ ದಾಟಿರಬಹುದು. ತೆಲುಗಿನಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಉಳಿದ ಭಾಷೆಗಳಲ್ಲಿನ ರಿಯಾಕ್ಷನ್ ಮತ್ತು ಕಲೆಕ್ಷನ್ ಬಗ್ಗೆ ಮಾಹಿತಿಗಳು ಸಿಗುತ್ತಿಲ್ಲ.
ಅಂದ ಹಾಗೆ ‘ಮಾರ್ಟಿನ್’ ಸಿನಿಮಾ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ಧಾರೆ. ಧ್ರುವ ಸರ್ಜಾ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಬೇಕೆಂದೇ ಸಿನಿಮಾ ಬಗ್ಗೆ ಅತಿಯಾಗಿ ನೆಗೆಟಿವ್ ಕಾಮೆಂಟ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರವನ್ನು ನೋಡಿದವರ ಪ್ರಕಾರ ಚಿತ್ರದುದ್ದಕ್ಕೂ ಮಿಸ್ಸಿಂಗ್ ಲಿಂಕ್ಸ್ ಇವೆ. ಕಥೆ-ಚಿತ್ರಕಥೆಗಳ ಹೊಂದಾಣಿಕೆಯಲ್ಲಿ, ಕಂಟಿನ್ಯೂಟಿಯಲ್ಲಿ, ಕೆಲವು ಪಾತ್ರಗಳು ಇದ್ದಕ್ಕಿದ್ದಂತೆ ಮಾಯವಾಗುವುದರಲ್ಲಿ ಮಿಸ್ಟೇಕ್ ಆಗಿರುವುದು ನಿಜ. ಸುದೀರ್ಘ ಸಿನಿಮಾದಲ್ಲಿ ಧ್ರುವ ಸರ್ಜಾ ಇಲ್ಲದ ದೃಶ್ಯಗಳೇ ಇಲ್ಲ. ಅಷ್ಟರಮಟ್ಟಿಗೆ ಧ್ರುವ ಸರ್ಜಾ ಆವರಿಸಿಕೊಂಡಿದ್ದಾರೆ. ವೈಭವಿ, ಅಚ್ಯುತ್ ಕುಮಾರ್, ಮಾಳವಿಕ, ಚಿಕ್ಕಣ್ಣ, ಗಿರಿಜಾ ಲೋಕೇಶ್ ಅವರಂತಹ ಕಲಾವಿದರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಂದು ಹೋಗುತ್ತಾರೆ. ಇಷ್ಟಿದ್ದರೂ ಮಾರ್ಟಿನ್ ಒಂದ್ಸಲ ನೋಡಬಹುದಾದ ಸಿನಿಮಾ.



