ಒಂದು ಸಿನಿಮಾ ಗೆದ್ದಾಗ ಬೀಗೋದು.. ಅಷ್ಟು ಕೋಟಿ ಇಷ್ಟು ಕೋಟಿ ಎಂದೆಲ್ಲ ಸುದ್ದಿ ಹಬ್ಬಿಸೋದು ಸಾಮಾನ್ಯ. ಕಳೆದ ವರ್ಷ ಅಟ್ಟರ್ ಫ್ಲಾಪ್ ಆಗಿದ್ದ ಕ್ರಾಂತಿ ಚಿತ್ರ ಕೂಡಾ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅನ್ನೋ ಸುದ್ದಿ ಹರಿದಾಡಿತ್ತು. ಸಿನಿಮಾಗಳು ಇನ್ನೂ ಥಿಯೇಟರಿನಲ್ಲಿರುವಾಗ ಇಂತಹ ಸುದ್ದಿ ಹೊರಬರುತ್ತವೆ. ಅದು ಫ್ಲಾಪ್ ಆಯ್ತೋ.. ಹಿಟ್ ಆಯ್ತೋ.. ಅನ್ನೋ ನಿಜ ಗೊತ್ತಾಗೋದು ಸಿನಿಮಾ ಎಲ್ಲ ಕಡೆ ಓಟ ಮುಗಿಸಿ ಎಷ್ಟೋ ತಿಂಗಳುಗಳಾದ ಮೇಲೆ. ಈಗಲೂ ಅಷ್ಟೆ..
ಕಾಟೇರ ಚಿತ್ರ ಗೆದ್ದಾಗಿದೆ. ಗಾಂಧಿನಗರದಲ್ಲಿ ೨೦೦ ಕೋಟಿ, ೩೦೦ ಕೋಟಿ ಸೌಂಡು ಜೋರಾಗಿಯೇ ಇದೆ. ಆದರೆ, ನಿರ್ಮಾಪಕ ರಾಕ್ʻಲೈನ್ ವೆಂಕಟೇಶ್ ಲೆಕ್ಕ ಕೊಟ್ಟಿಲ್ಲ. ಈ ಹಿಂದೆಯೂ ಕೊಟ್ಟಿರಲಿಲ್ಲ. ಲಾಭ, ನಷ್ಟದ ಬಗ್ಗೆ ಮಾತನಾಡಲ್ಲ ಎಂದಿರುವ ರಾಕ್ʻಲೈನ್ ಈ ಬಾರಿಯೂ ಆ ಸಂಪ್ರದಾಯ ಮುಂದುವರೆಸಿದ್ಧಾರೆ. ಕಾಟೇರ ಚಿತ್ರ ಭರ್ಜರಿ ಲಾಭ ತಂದಿದೆ ಎನ್ನುವುದು ಸ್ಪಷ್ಟವಾದರೂ, ಲೆಕ್ಕ ಇಲ್ಲ. ಆದರೆ, ಈ ವೇಳೆ ದರ್ಶನ್ ಅವರು ತಮ್ಮ ಈ ಹಿಂದಿನ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಅವರ ಬಗ್ಗೆ ಆಡಿರುವ ಮಾತುಗಳಿಂದಾಗಿ ೩ ಚಿತ್ರಗಳ ಲೆಕ್ಕ ಹೊರಬಿದ್ದಿದೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಮೂಲತಃ ಉದ್ಯಮಿ. ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಬಿಸಿನೆಸ್ ಇವೆ. ಇತ್ತೀಚೆಗೆ ರಾಜಕೀಯಕ್ಕೂ ಎಂಟ್ರಿ ಕೊಟ್ಟಿರುವ ಉಮಾಪತಿ, ಒಕ್ಕಲಿಗ ಸಂಘದ ನಿರ್ದೇಶಕರಲ್ಲಿ ಒಬ್ಬರು. ವಯಸ್ಸಿನ್ನೂ 40 ದಾಟಿಲ್ಲ. ಚಿತ್ರರಂಗದಲ್ಲಿ ಉಮಾಪತಿ ಅವರದ್ದು ದೊಡ್ಡ ಹೆಸರು. ಆದರೆ ನಿರ್ಮಾಣ ಮಾಡಿರುವುದು ಇದೂವರೆಗೆ 4 ಸಿನಿಮಾಗಳನ್ನಷ್ಟೇ.
ಉಮಾಪತಿ ಅವರು ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದು ಕಿಚ್ಚ ಸುದೀಪ್ ಅವರ ಹೆಬ್ಬುಲಿ ಅವರ ಚಿತ್ರದ ಮೂಲಕ. ಆಗಲೂ ಅಷ್ಟೇ. ಹೆಬ್ಬುಲಿ ಚಿತ್ರ ಭರ್ಜರಿ ಹಿಟ್ ಎನಿಸಿಕೊಂಡಿತ್ತು. ಆದರೆ, ಈಗ ಉಮಾಪತಿ ಕೊಟ್ಟಿರುವ ಲೆಕ್ಕದ ಪ್ರಕಾರ ಹೆಬ್ಬುಲಿ ಚಿತ್ರದ ಬಜೆಟ್ 20 ಕೋಟಿ. ಸಿನಿಮಾದ ವ್ಯಾಪಾರ 25ರಿಂದ 26 ಕೋಟಿ.
ರಾಬರ್ಟ್ ಚಿತ್ರದ ಬಜೆಟ್ 45-46 ಕೋಟಿ. ರಾಬರ್ಟ್ ಚಿತ್ರದಿಂದ ಆದ ವ್ಯಾಪಾರ 55 ಕೋಟಿ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರಾಬರ್ಟ್ ಚಿತ್ರದ ತೆಲುಗು ವರ್ಷನ್ ರಿಲೀಸ್ ಮಾಡಿದ್ದರು. ತೆಲುಗು ವರ್ಷನ್ ಸಿನಿಮಾ ಮತ್ತು ಪ್ರಚಾರಕ್ಕೆ ಕೋಟಿಯಷ್ಟು ಖರ್ಚಾಯ್ತು. ಆದರೆ ಬಂದಿದ್ದು 16 ಲಕ್ಷ ಮಾತ್ರ ಅಂತ ಲೆಕ್ಕ ಕೊಟ್ಟಿದ್ಧಾರೆ ಉಮಾಪತಿ. ಅಷ್ಟೇ ಅಲ್ಲದೆ ಅಮೇಜಾನ್ʻನವರಿಗೆ ರಿಲೀಸ್ʻಗೂ ಮೊದಲೇ ಮಾರಾಟ ಮಾಡಿದ್ದರೆ 12ರಿಂದ 13 ಕೋಟಿ ಲಾಭದಲ್ಲಿರುತ್ತಿದೆ ಎನ್ನುವುದು ಉಮಾಪತಿ ವಾದ. ಅಲ್ಲದೆ ರಾಬರ್ಟ್ ಚಿತ್ರವನ್ನ ಕೋವಿಡ್ʻನಿಂದಾಗಿ ಸುಮಾರು ಒಂದು ವರ್ಷ ತಡೆದುಕೊಂಡಿದ್ದೆ. ಆಗಲೇ ಮಾರಿದ್ದರೆ ಒಳ್ಳೆಯ ಲಾಭ ಸಿಗುತ್ತಿತ್ತು ಅಂಥಾರೆ ಉಮಾಪತಿ.
ಅಲ್ಲದೆ ಮಹೇಶ್ ಕುಮಾರ್ ಜೊತೆ ಮದಗಜ ಮಾಡಿದೆ. ಆ ಸಿನಿಮಾಗೆ 24 ಕೋಟಿ ಹಾಕಿದೆ. 30 ಕೋಟಿ ವ್ಯಾಪಾರ ಆಯ್ತು ಎಂದು ಲೆಕ್ಕ ಕೊಟ್ಟಿದ್ದಾರೆ.
ಸಿನಿಮಾ ಬದಲು ಬೇರೆ ವ್ಯವಹಾರಕ್ಕೆ ಹಣ ಹಾಕಿದ್ದರೆ ಇನ್ನೂ ಹೆಚ್ಚು ಲಾಭ ಮಾಡುತ್ತಿದ್ದೆ. ಗೌರವವೂ ಇರುತ್ತಿತ್ತು ಎನ್ನುವ ಉಮಾಪತಿ ಶ್ರೀನಿವಾಸ್ ಅವರಿಗೆ ರಾಬರ್ಟ್ ಮತ್ತು ಮದಗಜ ಸಿನಿಮಾದ ಜಿಎಸ್ʻಟಿ ಅಮೌಂಟ್ ಕೂಡಾ ಬಂದಿಲ್ಲವಂತೆ.



