ಗಂಗಾಸ್ನಾನ ಮಾಡಿದರೆ ಬಡತನ ಹೋಗುತ್ತಾ.. ಮಹಾಕುಂಭಮೇಳಕ್ಕೆ ಏಕಿಷ್ಟು ಖರ್ಚು..? ಗಂಗಾಸ್ನಾನ, ಕುಂಭಮೇಳದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ ಮಾಡಿದ್ದು, ಗಂಗೆಯಲ್ಲಿ ಸ್ನಾನ ಮಾಡಿದರೆ ಬಡತನ ಹೋಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದು ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ವಿವಾದ ಎಬ್ಬಿಸಿದೆ. ಮಧ್ಯಪ್ರದೇಶದ ಮಹೂನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಖರ್ಗೆ ನೀಡಿರುವ ಹೇಳಿಕೆ ಇದು.
ʻʻನಾನು ಯಾರ ನಂಬಿಕೆಯನ್ನೂ ಪ್ರಶ್ನೆ ಮಾಡುವುದಿಲ್ಲ, ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ.ಬಡವರ ಮಕ್ಕಳು ಶಾಲೆಗೆ ಹೋಗುತ್ತಿಲ್ಲ, ಕೂಲಿ ಕಾರ್ಮಿಕರಿಗೆ ಕೂಲಿ ಸಿಗುತ್ತಿಲ್ಲ. ಆದರೆ ಕುಂಭಮೇಳದಲ್ಲಿ ಗಂಗೆಯಲ್ಲಿ ಸ್ನಾನ ಮಾಡುವುದಕ್ಕೆ ಸಾವಿರಾರು ಕೋಟಿ ವೆಚ್ಚ. ಸ್ನಾನ ಮಾಡುವುದಕ್ಕೆ ಸಾವಿರಾರು ಕೋಟಿ ಖರ್ಚು ಮಾಡುವುದರಿಂದ ಯಾರಿಗೆ ಲಾಭ..?ʼʼ ಎಂದು ಪ್ರಶ್ನೆ ಮಾಡಿದ್ದಾರೆ.
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಕುಂಭಮೇಳಗಳಿಂದ ಲಾಭವಿಲ್ಲ ಎಂದಿರುವ ಖರ್ಗೆ ಹೇಳಿಕೆ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಖರ್ಗೆ ಹೇಳಿಕೆಗೆ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಆಕ್ರೋಶ ವ್ಯಕ್ತಪಡಿಸಿವೆ. ಬೇರೆ ಧರ್ಮದವರ ಆಚರಣೆಗೂ ಇದೇ ರೀತಿ ಟೀಕೆ ಮಾಡ್ತೀರಾ ಎಂದು ಪ್ರಶ್ನೆ ಹಾಕಿವೆ. ಇಫ್ತಾರ್ ಕೂಟದಿಂದ.. ಯಾತ್ರೆಗಳಿಂದ ಬಡತನ ನಿವಾರಣೆಯಾಗುತ್ತದೆಯೇ ಎಂದು ಪ್ರಶ್ನೆ ಮಾಡಿರುವ ವಿಹೆಚ್‌ಪಿ, ಬಿಜೆಪಿ, ಕುಂಭಮೇಳದಿಂದ 4 ಲಕ್ಷ ಕೋಟಿಗೂ ಹೆಚ್ಚು ಆದಾಯ ಬರುತ್ತದೆ ಎಂದು ಲೆಕ್ಕ ಕೊಟ್ಟಿವೆ.
ಕುಂಭಮೇಳಕ್ಕೆ ಉ.ಪ್ರದೇಶ ಸರ್ಕಾರ ಮಾಡಿರುವ ಒಟ್ಟಾರೆ ಖರ್ಚು 12 ಸಾವಿರ ಕೋಟಿ. ಈ 12 ಸಾವಿರ ಕೋಟಿ ಖರ್ಚಿಗೆ 4 ಲಕ್ಷ ಕೋಟಿ ರೂ ವ್ಯವಹಾರ ನಡೆಯುತ್ತದೆ. 4 ಲಕ್ಷ ಕೋಟಿ ವ್ಯವಹಾರದ ಲಾಭ ಜನರಿಗೇ ಹೊರತು, ಬೇರೆಯವರಿಗೆ ಅಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.
ಮಹಾಕುಂಭಮೇಳದ ಆರ್ಥಿಕತೆ :
ಧಾರ್ಮಿಕ ಸಂಗಮ ಭಕ್ತರನ್ನ ಸೆಳೆಯೋದು ಮಾತ್ರವಲ್ಲ ಉತ್ತರ ಪ್ರದೇಶದ ಆರ್ಥಿಕತೆ ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯುತ್ತಿದೆ. ಮಹಾಕುಂಭಮೇಳ ಉತ್ತರ ಪ್ರದೇಶದ ಆರ್ಥಿಕತೆಗೆ ಬಲ ತುಂಬಲಿದೆ. ಯುಪಿ ಸರ್ಕಾರ ಬರೋಬ್ಬರಿ ಸುಮಾರು 7 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಸರ್ಕಾರದಿಂದ ಕುಂಭಮೇಳ ನಡೆಯುವ ಪ್ರದೇಶವಾದ ಪ್ರಯಾಗ್ ರಾಜ್‌ಗೆ ಖರ್ಚು ಮಾಡಿದ್ದು, ಆಸುಪಾಸಿನಲ್ಲಿರುವ ರಸ್ತೆ, ನೀರು, ಚರಂಡಿ ವ್ಯವಸ್ಥೆಗೆ ಸುಮಾರು 20 ಸಾವಿರ ಕೋಟಿ ಖರ್ಚು ಮಾಡಿದೆ.
ಭಕ್ತಾದಿಗಳ ಓಡಾಟಕ್ಕೆ ಸುಮಾರು 13 ಸಾವಿರ ವಿಶೇಷ ರೈಲು, ವಿಮಾನಗಳು, ಸ್ಥಳೀಯ ವ್ಯಾಪಾರ, ಹೋಟೆಲ್ ರೂಂ, ಲಾಡ್ಜ್, ಊಟತಿಂಡಿ ವ್ಯವಸ್ಥೆ, ಸ್ಥಳೀಯ ಆಟೋ, ಟ್ಯಾಕ್ಸಿ ವ್ಯವಸ್ಥೆ, ಬಟ್ಟೆ ಅಂಗಡಿಗಳಲ್ಲಿನ ವ್ಯವಹಾರ, ಧಾರ್ಮಿಕತೆಗೆ ಸಂಬಂದಪಟ್ಟ ವ್ಯಾಪಾರ.. ಹೀಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ. ಪ್ರಯಾಗ್ ರಾಜ್ ಪಕ್ಕದಲ್ಲಿರುವ ಅಯೋಧ್ಯೆ, ಲಕ್ನೋ, ಕಾಶಿ, ಉತ್ತರಾಖಂಡ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಮಹಾಕುಂಭ ಮೇಳಕ್ಕೆ ಸುಮಾರು 70-80 ದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬಂದಿದ್ದಾರೆ. ಇದು ಆಧ್ಯಾತ್ಮಿಕತೆ ಪ್ರವಾಸದ ಹೆಸರಲ್ಲಿ ನಡೆಯುತ್ತದೆ.
ಧಾರ್ಮಿಕ ವಸ್ತುಗಳಾದ ದೀಪ, ಧೂಪ, ಕರ್ಪೂರ, ಅರಿಶಿಣ, ಕುಂಕುಮ, ದಾರ, ತಾಯಿತಗಳು, ನೆನಪಿನ ಕಾಣಿಕೆಗಳು ಇವುಗಳ ವಹಿವಾಟು 20 ಸಾವಿರ ಕೋಟಿ ರೂಪಾಯಿ ಮೀರುತ್ತದೆ. ಕರಕುಶಲ ವಸ್ತುಗಳು ಅಂದರೆ ಹ್ಯಾಂಡಿ ಕ್ರಾಫ್ಟ್ ಮಾರಾಟ 5 ಸಾವಿರ ಕೋಟಿ ರೂಪಾಯಿ ಮೀರುತ್ತದೆ.
ಬೋಟ್ ರೈಡ್, ಹೆಲಿಕಾಪ್ಟರ್ ಪ್ರದಕ್ಷಿಣೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಟದ ಖರ್ಚು, ಹೀಗೆ ಒಟ್ಟಾರೆ ಸಾರಿಗೆಯಿಂದ ಹತ್ತು ಸಾವಿರ ಕೋಟಿ ರೂಪಾಯಿ ದಾಟಲಿದೆ. ಇದು ಕೇವಲ ಅಂದಾಜಷ್ಟೇ.
ಮಹಾಕುಂಭ ಮೇಳದ ಆರ್ಥಿಕತೆ 70 ದೇಶಗಳ ಬಜೆಟ್ಟಿಗೆ ಸಮ :
ಇನ್ನೂ ಒಂದು ವಿಶೇಷ ಹೇಳಬೇಕು ಎಂದರೆ ಜನವರಿ 13, 2025 ರಿಂದ ಫೆಬ್ರವರಿ 26, 2025 ರ ವರೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳದಲ್ಲಿ 40 ರಿಂದ 45 ಕೋಟಿ ಜನರು ಭಾಗಿಯಾಗುತ್ತಾರೆ. ಈ ಬಾರಿ ಅದು ಇನ್ನಷ್ಟು ಹೆಚ್ಚಾಗಲೂ ಬಹುದು. ಪ್ರತಿ ದಿನದ ಸರಾಸರಿ ಎರಡೂವರೆ ಕೋಟಿ ಜನ. ಪ್ರತಿಯೊಬ್ಬರ ಸರಾಸರಿ ಖರ್ಚು ಐದರಿಂದ ಆರು ಸಾವಿರ ರೂಪಾಯಿ ಎಂದಿಟ್ಟು ಕೊಂಡರು ಕೂಡ ಈ 45 ದಿನಗಳಲ್ಲಿ ಆಗುವ ಒಟ್ಟು ವಹಿವಾಟು ಎರಡೂವರೆ ಲಕ್ಷ ಕೋಟಿ ರೂಪಾಯಿ ಮೀರುತ್ತದೆ. ಇದು ಕೇವಲ ಅಂದಾಜಿನ ಲೆಕ್ಕ. ಡಾಲರ್ ಲೆಕ್ಕಾಚಾರದಲ್ಲಿ 30 ಬಿಲಿಯನ್ ಮೀರಿಸುತ್ತದೆ. ಈ ಸಂಖ್ಯೆ ಎಷ್ಟು ದೊಡ್ಡದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ ಜಗತ್ತಿನಲ್ಲಿ ಸುಮಾರು 70 ದೇಶಗಳ ಒಂದಿಡೀ ವರ್ಷದ ಜಿಡಿಪಿ (ಬಜೆಟ್ ಅಲ್ಲ) 30 ಬಿಲಿಯನ್ ಡಾಲರುಗಳಿಗಿಂತ ಕಡಿಮೆ. ಅಷ್ಟು ವಹಿವಾಟು ಈ 45 ದಿನಗಳಲ್ಲಿ ನಡೆಯುತ್ತದೆ.
ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಲೆಕ್ಕಕ್ಕೆ ಸಿಗದ ಅಂದರೆ ನಗದು ಮೂಲಕ ಮಾಡಿದ ಖರ್ಚನ್ನು ಟ್ರೇಸ್ ಮಾಡುವುದಾದರೂ ಹೇಗೆ? ಆ ಲೆಕ್ಕಾಚಾರದಲ್ಲಿ ನಾವು ಮೂರನೇ ಆರ್ಥಿಕತೆ ಅಥವಾ ಎರಡನೇ ಆರ್ಥಿಕತೆ ಎಂದರೂ ತಪ್ಪಾಗುವುದಿಲ್ಲ.



