ದಿ ಡೆವಿಲ್ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳಂತೂ ಬಾಚಿ ತಬ್ಬಿಕೊಂಡಿದ್ದಾರೆ. ದರ್ಶನ್ ಅವರಿಗೆ ಅಭಿಮಾನಿಗಳಷ್ಟೇ ಅಲ್ಲ ಚಿತ್ರರಂಗದವರೂ ಕರೆಯುವ ಹೆಸರು ಬಾಕ್ಸಾಫೀಸ್ ಸುಲ್ತಾನ. ದರ್ಶನ್ ಮತ್ತೊಮ್ಮೆ ತಾವೇಕೆ ಬಾಕ್ಸಾಫೀಸ್ ಸುಲ್ತಾನ ಬಿರುದಾಂಕಿತ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಅಡ್ವಾನ್ಸ್ ಬುಕ್ಕಿಂಗ್ ಆದ ಸಿನಿಮಾ ಡೆವಿಲ್. ಸಿನಿಮಾ ಕಲೆಕ್ಷನ್ ಕೂಡಾ ಡಬಲ್ ಡಿಜಿಟ್ ದಾಟಿದೆ.
ಡೆವಿಲ್ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ ಎನ್ನುವುದು ಒಂದು ವರದಿ. 20 ಕೋಟಿಗೂ ಹೆಚ್ಚು ಎನ್ನುತ್ತಿದೆ ಇನ್ನೊಂದು ವರದಿ. ಆದರೆ, ಬುಕ್ ಮೈ ಶೋ ನೋಡಿದರೆ ಒಂದೇ ಒಂದು ರಿವ್ಯೂ ಇಲ್ಲ. ರೀವ್ಯೂ ಕೊಡೋಣ ಎಂದು ಟ್ರೈ ಮಾಡಿದರೂ ಕೊಡುವುದಕ್ಕೆ ಆಗುತ್ತಿಲ್ಲ. ಸಿನಿಮಾ ನೋಡುವುದಕ್ಕೆ ಇಂಟ್ರೆಸ್ಟ್ ತೋರಿಸಿದವರ ಸಂಖ್ಯೆ 2 ಲಕ್ಷ ದಾಟಿತ್ತು. ಹೀಗಾಗಿ ಕಲೆಕ್ಷನ್ ಅಂತೂ ಬೊಂಬಾಟ್ ಆಗಿದೆ.
ಫಸ್ಟ್ ಡೇ ಯಾವ ಶೋಗಳೂ ಖಾಲಿ ಹೊಡೆದಿಲ್ಲ. ಶೇ.80ರಷ್ಟು ಥಿಯೇಟರ್ಸ್ ಹೌಸ್ ಫುಲ್ ಆಗಿವೆ.
ಇಷ್ಟು ದೊಡ್ಡ ಕಲೆಕ್ಷನ್ ಆಗಲು ಚಿತ್ರದ ಟಿಕೆಟ್ ಬೆಲೆ ಕೂಡ ಕಾರಣ. ಪಿವಿಆರ್, ಐನಾಕ್ಸ್ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಕನಿಷ್ಠ 500 ರೂಪಾಯಿ ಇತ್ತು. ಸಿಂಗಲ್ ಸ್ಕ್ರೀನ್‌ಗಳಲ್ಲಿ 400 ರೂಪಾಯಿಯಿಂದ ಟಿಕೆಟ್ ರೇಟ್ ಶುರುವಾಗಿತ್ತು. ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿಯೇ 7 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಮೊದಲ ದಿನ 2120 ಶೋಗಳಲ್ಲಿ ಡೆವಿಲ್ ಪ್ರದರ್ಶನ ಆಗಿದೆ. 500ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಶೋಸ್ ಆಗಿವೆ.
ಇನ್ನು ಫಸ್ಟ್ ಡೇ ಡೆವಿಲ್ ಚಿತ್ರವನ್ನು ನೋಡಿದವರಲ್ಲಿ ಸೆಲಬ್ರಿಟಿಗಳೂ ಇದ್ದಾರೆ. ವಿಜಯಲಕ್ಷ್ಮಿ, ದಿನಕರ್ ಅಷ್ಟೇ ಅಲ್ಲ, ಧನ್ವೀರ್, ಝೈದ್ ಖಾನ್ ಸೇರಿದಂತೆ ಹಲವು ಸೆಲಬ್ರಿಟಿಗಳು ಥಿಯೇಟರಿಗೆ ಹೋಗಿ ಡೆವಿಲ್ ಸಿನಿಮಾ ನೋಡಿದ್ದಾರೆ. ಖುಷಿಯಾಗಿರೋದು ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿರುವ ಪ್ರಕಾಶ್ ವೀರ್.
ಇದರ ಮಧ್ಯೆ ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡೋಕೆ ಆಗ್ತಾ ಇಲ್ಲ. ಕೋರ್ಟ್ ಆದೇಶದಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬ ಸಂದೇಶ ಬುಕ್ ಮೈ ಶೋನಲ್ಲಿ ಕಾಣಿಸುತ್ತಿದೆ. ಕಾರಣ ಏನು ಎಂದು ಹುಡುಕಿದರೆ ಚಿತ್ರತಂಡವೇ ಕಾರಣ ಎನ್ನುವುದು ಗೊತ್ತಾಗುತ್ತದೆ.
ʻʻಸಾಮಾನ್ಯವಾಗಿ ಸಿನಿಮಾ ನೋಡಿದವರು ರೇಟಿಂಗ್ ಕೊಡುವುದಕ್ಕೆ ಅವಕಾಶ ಇದೆ. ಆದರೆ, ಇತ್ತೀಚೆಗೆ ದುಡ್ಡು ಕೊಟ್ಟು ರೇಟಿಂಗ್ ಮಾಡಿಸೋ ಕೆಲಸ ಆಗುತ್ತಿದೆ. ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿದೆ. ಆಗ ಬೇಕೆಂದು ಸಿನಿಮಾಗೆ ನೆಗೆಟಿವ್ ವಿಮರ್ಶೆ ಕೊಡಿಸಿದ್ದರು. ಹೀಗಾಗಿ ಕೋರ್ಟ್ ಆದೇಶದ ಮೂಲಕ ರೀವ್ಯೂ ರೇಟಿಂಗ್ ಕೊಡುವ ಅವಕಾಶವನ್ನೇ ಕೋರ್ಟ್ ಮೂಲಕ ತಡೆಹಿಡಿದಿದ್ದೇವೆʼʼ ಎಂದಿದ್ದಾರೆ ದಿನಕರ್ ತೂಗುದೀಪ.
ಅಂದರೆ ರೀವ್ಯೂ ರೇಟಿಂಗ್ ತಡೆ ನಿರ್ಧಾರ ಬುಕ್ ಮೈ ಶೋದ್ದಲ್ಲ. ಎಲ್ಲ ಸಿನಿಮಾಗಳಿಗೂ ಅನ್ವಯ ಆಗುವುದಿಲ್ಲ. ಕೋರ್ಟ್ ಆದೇಶ ಅನ್ವಯವಾಗುವುದು ಡೆವಿಲ್ ಚಿತ್ರಕ್ಕೆ ಮಾತ್ರ. ಅದೂ ಕೂಡಾ ಡೆವಿಲ್ ಚಿತ್ರತಂಡದ್ದೇ ನಿರ್ಧಾರ. ಪ್ರಕಾಶ್ ವೀರ್ ನಿರ್ದೇಶನ ನಿರ್ಮಾಣದ ಸಿನಿಮಾ ಅಭಿಮಾನಿಗಳಿಗೆ ಖುಷಿಯನ್ನಂತೂ ಕೊಟ್ಟಿದೆ.



