ಒಬ್ಬ ಹೀರೋನ ಮೊದಲ ಚಿತ್ರ ಗೆದ್ದಾಗ ಆತ ಅನುಭವಿಸುವ ಆನಂದವೇ ಬೇರೆ. ಆದರೆ.. ಯುವ ರಾಜಕುಮಾರ್ ವಿಷಯ ಹಾಗಲ್ಲ. ಯುವ ರಾಜಕುಮಾರ್ ರಂಗ ಪ್ರವೇಶ ಅದ್ಧೂರಿಯಾಗಿ ಆಗಿದೆ. ಯುವ ಚಿತ್ರ 3ನೇ ವಾರವೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಇನ್ನೂ ಒಂದೆರಡು ವಾರ ಪ್ರೇಕ್ಷಕರ ಅದ್ಧೂರಿ ಮನರಂಜನೆಗೆ ಅಡ್ಡಿಯಿಲ್ಲ. ಚಿತ್ರತಂಡದ ಗಳಿಕೆಯೂ ಉತ್ತಮವಾಗಿದೆ. ‘ಯುವ’ ಸಿನಿಮಾ ಗೆಲುವಿನ ಖುಷಿಯನ್ನು ಇಡೀ ತಂಡ ಸಂಭ್ರಮಿಸಿದೆ. ಯುವ ಗೆದ್ದ ಖುಷಿಯಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೂಡ ಇದ್ದಾರೆ. ಇದೇ ಸಂದರ್ಭದಲ್ಲಿ ಅಣ್ಣಾವ್ರನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಮಗನಿಗೆ ಬುದ್ದಿ ಮಾತನ್ನೂ ಹೇಳಿದ್ಧಾರೆ. ಎಷ್ಟೇ ಎತ್ತರಕ್ಕೆ ಹೋದರೂ.. ತಲೆ ತಗ್ಗಿಸಬೇಕು ಎಂಬ ಬುದ್ದಿ ಮಾತು ಹೇಳಿದ್ಧಾರೆ.
ನನಗೆ ಯುವನಲ್ಲಿ ಇಷ್ಟವಾದ ಗುಣ ಅವನಲ್ಲಿ ಅಪ್ಪಾಜಿಯವರಲ್ಲಿದ್ದ ಗುಣ ಇದೆ. ಎಲ್ಲವನ್ನೂ ಕಲಿಯಬೇಕು ಎನ್ನುವ ಉತ್ಸಾಹ ಇದೆ ಎಂದಿರುವ ರಾಘವೇಂದ್ರ ಅವರು ಅಪ್ಪಾಜಿಯವರಿಗೆ ಅದು ಇತ್ತು. ಮ್ಮ ತಂದೆಗೆ ಯಾರೋ ಕೇಳಿದ್ರು. ಅಣ್ಣಾ ನೀವು ನಟನೆ ಮಾಡುವುದಕ್ಕೆ ಶುರು ಮಾಡಿದ ದಿನದಿಂದ ಯಾರೂ ನಿಮ್ಮನ್ನು ಸೋಲಿಸಲೇ ಇಲ್ಲ ಅಂದ್ರು. ಆಗ ನಮ್ಮ ತಂದೆ ನಾನು ಯಾರನ್ನೂ ಸೋಲಿಸುವುದಕ್ಕೆ ಬಂದಿಲ್ಲ. ಎಲ್ಲರ ಮನಸ್ಸನ್ನು ಗೆಲ್ಲುವುದಕ್ಕೆ ಬಂದಿದ್ದೀನಿ ಅಂತ ಹೇಳಿದ್ರು ಎಂದ ರಾಘಣ್ಣ ತಮ್ಮ ಮಗನನ್ನೂ ಅಷ್ಟೆ. ಕಲಿಸಿ.. ಕಲಿಸಿ.. ಆಮೇಲೆ ಬೆಳೆಸಿ ಎಂದು ಕೇಳಿಕೊಂಡಿದ್ಧಾರೆ.
ನನಗೆ ಏನೂ ಗೊತ್ತಿಲ್ಲ. ನನ್ನ ಕೆಲಸ ಇಷ್ಟೇ. ಒಬ್ಬ ನಿರ್ದೇಶಕ ಏನು ಹೇಳುತ್ತಾನೆ, ಅವನನ್ನು ಒಪ್ಪಿಸಿಬಿಟ್ಟರೆ ಆಯ್ತು. ಒಂದು ಆತ್ಮವನ್ನೇ ಒಪ್ಪಿಸುವುದಕ್ಕೆ ಆಗುವುದಿಲ್ಲ. ನೂರಾರು ಆತ್ಮವನ್ನು ಒಪ್ಪಿಸಲು ಹೇಗೆ ಸಾಧ್ಯ ನಮ್ಮ ತಂದೆ ಹೇಳಿದ್ದರು. ಈ ಗುಣ ಯುವನಲ್ಲಿ ಕಂಡಿದ್ದೇನೆ. ನಿರ್ದೇಶಕ ಒಪ್ಪುವವರೆಗೂ ಮಾಡಿದ. ಈ ಗುಣ ಅವನನ್ನು ತುಂಬಾ ದೂರ ಕರೆದುಕೊಂಡು ಹೋಗುತ್ತೆ ಎಂದಿರುವ ರಾಘವೇಂದ್ರ ರಾಜಕುಮಾರ್ ಇನ್ನೂ ಯುವ ಹಲವು ನಿರ್ದೇಶಕರನ್ನು ಮೆಚ್ಚಿಸಬೇಕು. ಪ್ರೇಕ್ಷಕರನ್ನೂ ಮೆಚ್ಚಿಸಬೇಕು. ಇದಿನ್ನೂ ಆರಂಭ ಅಷ್ಟೆ. ನಿರ್ದೇಶಕರು ಹೇಳಿದಂತೆ ಕೇಳು ಎಂದು ಯುವ ಸಕ್ಸಸ್ ಮೀಟ್ ವೇದಿಕೆಯಲ್ಲೇ ಬುದ್ದಿ ಮಾತು ಹೇಳಿದ್ಧಾರೆ.
ನನಗೆ, ಅಣ್ಣನಿಗೆ, ಅಪ್ಪುಗೆ ಎಲ್ಲರಿಗೂ ಎಲ್ಲವೂ ಇತ್ತು. ಅಪ್ಪ ಇದ್ದರು. ಅಮ್ಮ ಇದ್ದರು. ಚಿಕ್ಕಪ್ಪ ಇದ್ರು. ಉದಯಶಂಕರ್ ಇದ್ರು. ನಮ್ಮ ಸುತ್ತ ಒಂದು ಕೋಟೆನೇ ಇತ್ತು. ಆದರೆ.. ಯುವನಿಗೆ ಅದ್ಯಾವುದೂ ಇರಲಿಲ್ಲ. ಅನಾಥನಾಗಿಬಿಟ್ಟನೇನೋ ಎಂದುಕೊಂಡಿದ್ಧಾಗ ಬಂದಿದ್ದು ಹೊಂಬಾಳೆಯವರು. ಹೊಂಬಾಳೆಯವರನ್ನು ಎಂದೆಂದಿಗೂ ಮರೆಯಬೇಡ. ಸಂತೋಷ್ ಆನಂದರಾಮ್ ಅವರನ್ನೂ ಅಷ್ಟೆ ಎಂದು ಯುವ ರಾಜಕುಮಾರಾ ಅವರಿಗೆ ಬುದ್ದಿ ಮಾತು ಹೇಳಿದ್ಧಾರೆ.
ಯುವ ಸಕ್ಸಸ್ ಮೀಟ್ʻನಲ್ಲಿ ಯುವ ರಾಜಕುಮಾರ್, ಸಂತೋಷ್ ಆನಂದರಾಮ್, ಸಪ್ತಮಿ ಗೌಡ, ಸುಧಾರಾಣಿ, ಅಚ್ಯುತ್ ಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಹಾಜರ್ ಇತ್ತು. ಯುವ ಚಿತ್ರದ ಕಲೆಕ್ಷನ್ ಎಷ್ಟಾಯ್ತು ಎಂಬ ಬಗ್ಗೆ ಸಂತೋಷ್ ಆನಂದರಾಮ್ ಅಧಿಕೃತ ಲೆಕ್ಕವನ್ನು ಕೊಡಲಿಲ್ಲವಾದರೂ.. ಚಿತ್ರತಂಡ ಹ್ಯಾಪಿ ಎಂದು ಹೇಳಿದರು.
ಅಚ್ಯುತ್ ಮತ್ತು ಸುಧಾರಾಣಿಯನ್ನು ನಿಜವಾದ ತಂದೆ ತಾಯಿಗೆ ಹೋಲಿಸಿ ಮಾತನಾಡಿದ ಯುವ, ಯುವ ಚಿತ್ರದ ಕೆಲವು ದೃಶ್ಯಗಳು ನನಗೆ ಪರ್ಸನಲ್ಲಾಗಿ ಅನುಭವವಾಗಿದೆ. ಅಪ್ಪನ ಜೊತೆ ನಾನೂ ಜಗಳ ಮಾಡಿದ್ದೇನೆ, ಪ್ರೀತಿಸಿದ್ದೇನೆ ಎಂಬ ವೈಯಕ್ತಿಕ ವಿಷಯವನ್ನೂ ಹೇಳಿಕೊಂಡರು.



