ಹೌಸ್ʻಫುಲ್.. ಹೌಸ್ʻಫುಲ್.. ಹೌಸ್ʻಫುಲ್.. ಕಾಟೇರ ಚಿತ್ರ ರಿಲೀಸ್ ಆದ ಎಲ್ಲ ಕಡೆ ಹೌಸ್ʻಫುಲ್ ಬೋರ್ಡ್ ಕಾಣುತ್ತಿವೆ. ಆನ್ʻಲೈನ್ʻನಲ್ಲಿ ಟಿಕೆಟ್ಸ್ ಸಿಗ್ತಾ ಇಲ್ಲ. ಕ್ರಾಂತಿಯ ದಯನೀಯ ವೈಫಲ್ಯದಿಂದ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ ನಟ ದರ್ಶನ್.
ಸ್ಟಾರ್ ಇಮೇಜ್ ಪಕ್ಕಕ್ಕಿಟ್ಟು ಅಭಿನಯಿಸಿ ಗೆದ್ದಿದ್ದಾರೆ ನಟ ದರ್ಶನ್. ನಿರ್ದೇಶಕ ತರುಣ್ ಸುಧೀರ್, ಕಥೆಗಾರ ಜಡೇಶ್ ಕೆ ಹಂಪಿ ಬಗ್ಗೆ ಚಿತ್ರರಂಗ ಹೊಗಳಿ ಮಾತನಾಡುತ್ತಿದೆ. ಕಾಟೇರ ಹೌಸ್ʻಫುಲ್ ಆಗುತ್ತಿದೆ. ಮೊದಲ ದಿನ ಸೋಲ್ಡ್ ಔಟ್ ಆದ ಟಿಕೆಟ್ ಸಂಖ್ಯೆ 7 ಲಕ್ಷ, 20 ಸಾವಿರ. ಇದು ರಾಕ್ ಲೈನ್ ಬ್ಯಾನರ್ ಕೊಡುತ್ತಿರೋ ಅಧಿಕೃತ ಲೆಕ್ಕ. ದರ್ಶನ್ ಗೆದ್ದಿದ್ದಾರೆ. ಕಾಟೇರ ಮೊದಲ ದಿನ ಕರ್ನಾಟಕ ಬಾಕ್ಸ್ ಆಫೀಸ್ನಲ್ಲಿ 19.79 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನುವುದು ಒಂದು ಅಂದಾಜು.
ದರ್ಶನ್ ಅವರನ್ನು ಅಭಿಮಾನಿಗಳು ಇಷ್ಟ ಪಡುವುದಕ್ಕೆ ಹಲವು ಕಾರಣಗಳಿವೆ. ಕಥೆಗೆ ತಕ್ಕಂತೆ ಅಭಿನಯಿಸಿರುವ ದರ್ಶನ್, ಎಲ್ಲಿಯೂ ಸ್ಟಾರ್ʻಡಂಗೆ ಕಟ್ಟುಬಿದ್ದಿಲ್ಲ. ತಮ್ಮ ಪ್ರಾಣಿ ಪ್ರೀತಿಯನ್ನು ಮತ್ತೊಮ್ಮೆ ಸಾರಿರುವ ದರ್ಶನ್, ಅಗಲಿದ ಅಂಬಾರಿ ಅರ್ಜುನನಿಗೆ ಕಾಟೇರ ಚಿತ್ರವನ್ನು ಅರ್ಪಿಸಿದ್ದಾರೆ.
ದರ್ಶನ್ ಜೊತೆ ಮಾಲಾಶ್ರೀ ಪುತ್ರಿ ಆರಾಧನಾ ಎಂಟ್ರಿ ಕೊಟ್ಟಿದ್ದು, ಆರಾಧನಾ ನಟನೆಗೆ ಚಪ್ಪಾಳೆ ಬಿದ್ದಿವೆ. ಹಿರಿಯ ಕಲಾವಿದರಾದ ಶ್ರುತಿ, ಪದ್ಮವಾಸಂತಿ, ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಬಿರಾದರ್ ಜೊತೆಗೆ ತೆಲುಗು ಸ್ಟಾರ್ ನಟ ಜಗಪತಿ ಬಾಬು ಖಳನಾಯಕರಾಗಿ ನಟಿಸಿದ್ದಾರೆ.
ಅಂದಹಾಗೆ ಕಾಟೇರ ರಿಲೀಸ್ ಆಗಿರುವುದು ಕೇವಲ ಕನ್ನಡದಲ್ಲಿ ಹಾಗೂ ಕರ್ನಾಟಕದಲ್ಲಿ ಮಾತ್ರ. ವಿದೇಶದಲ್ಲಿಯಾಗಲೀ, ಪಕ್ಕದ ರಾಜ್ಯಗಳಲ್ಲಾಗಲೀ ರಿಲೀಸ್ ಆಗಿಲ್ಲ. ಅಷ್ಟೇ ಯಾಕೆ, ಕನ್ನಡ ಬಿಟ್ಟರೆ ಇದುವರೆಗೆ ಬೇರೆ ಭಾಷೆಗೆ ಡಬ್ ಕೂಡಾ ಆಗಿಲ್ಲ. ಹೀಗಿದ್ದರೂ ಫಸ್ಟ್ ಡೇ ಕಲೆಕ್ಷನ್ 19 ಕೋಟಿ ಎಂದರೆ ದಾಖಲೆಯೇ ಸರಿ.



