ಧ್ರುವ ಸರ್ಜಾರ ಮಾರ್ಟಿನ್, ಭರ್ಜರಿ ಕಲೆಕ್ಷನ್ ಮಾಡ್ತಾ ಇದೆ. ಹೇಳಿಕೇಳಿ ಮಾರ್ಟಿನ್. ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾ ಬಗ್ಗೆ ಎರಡೂ ರೀತಿಯ ಅಭಿಪ್ರಾಯ ಇದೆ. ಸಖತ್ತಾಗಿದೆ ಅನ್ನೋದು ಒಂದ್ ಕಡೆ ಅಭಿಪ್ರಾಯ ಆದ್ರೆ, ಕೆಟ್ಟದಾಗಿದೆ ಅನ್ನೋವ್ರೂ ಇದ್ದಾರೆ. ಇಂತಹ ಮಿಶ್ರ ಪ್ರತಿಕ್ರಿಯೆಗಳ ಮಧ್ಯೆಯೆ ಮಾರ್ಟಿನ್ ಎರಡು ದಿನದ ಕಲೆಕ್ಷನ್ ೨೨.೫ ಕೋಟಿ ಎನ್ನುತ್ತಿದೆ ಚಿತ್ರತಂಡ. ಇದು ಚಿತ್ರತಂಡವೇ ಕೊಟ್ಟಿರುವ ಅಧಿಕೃತ ಮಾಹಿತಿ.
ಚಿತ್ರದ ಬಗ್ಗೆ ಪಾಸಿಟಿವ್ ಮತ್ತು ನೆಗೆಟಿವ್ ಪ್ರತಿಕ್ರಿಯೆಗಳು ಬಂದಿರುವಾಗಲೇ ಚಿತ್ರತಂಡ ಕಲೆಕ್ಷನ್ ಘೋಷಣೆ ಮಾಡಿದೆ. ಮೊದಲ ದಿನದ ಕಲೆಕ್ಷನ್ 9.1 ಕೋಟಿ ಆಗಿದ್ದರೆ, ಎರಡನೇ ದಿನದ ಕಲೆಕ್ಷನ್ 13.4 ಕೋಟಿ ದಾಟಿದ. 3ನೇ ದಿನ ಭಾನುವಾರ ಆಗಿದ್ದರಿಂದ ರಜಾ ದಿನದ ಕಲೆಕ್ಷನ್ ಇನ್ನೂ ಹೆಚ್ಚಾಗಿದೆ ಎಂಬ ಮಾಹಿತಿ ಇದೆ.
ಅಂದಹಾಗೆ ಇದು ಚಿತ್ರತಂಡದ ಅಧಿಕೃತ ಮಾಹಿತಿ ಆದರೆ, ಇನ್ನೊಂದು ವರದಿಯ ಪ್ರಕಾರ ‘ಮಾರ್ಟಿನ್’ ಸಿನಿಮಾ ಮೂರು ದಿನಗಳಲ್ಲಿ ಸುಮಾರು 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಬಜೆಟ್ಗೆ ಹೋಲಿಕೆ ಮಾಡಿದರೆ ಸಿನಿಮಾದ ಗಳಿಕ ಸ್ವಲ್ಪ ಕಡಿಮೆ ಆಯಿತು ಎಂದೇ ಹೇಳಬಹುದು. ಏಕೆಂದರೆ ಇದು ಕೇವಲ ಕನ್ನಡದ ಸಿನಿಮಾ ಮಾತ್ರವಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಿದೆ. ಹೀಗಾಗಿ, ಇನ್ನೂ ಹೆಚ್ಚಿನ ಗಳಿಕೆ ಮಾಡೋ ಅಗತ್ಯತೆ ಚಿತ್ರಕ್ಕೆ ಇತ್ತು. ಈ ವರದಿ ಪ್ರಕಾರ ಮೊದಲ ದಿನ 6.7 ಕೋಟಿ ರೂ, ಎರನಡೇ ದಿನ (ಅಕ್ಟೋಬರ್ 12) 5.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಮೂರನೇ ದಿನ ಸುಮಾರು ನಾಲ್ಕು ಕೋಟಿ ರೂಪಾಯಿ ಹರಿದು ಬಂದಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 16 ಕೋಟಿ ರೂಪಾಯಿ ಆಗಿದೆ.
ಇತ್ತೀಚೆಗೆ ಚಂದ್ರಶೇಖರ್ ಗೌಡ ಎಂಬ ರೀಲ್ಸ್ ಸ್ಟಾರ್ ಒಬ್ಬ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿ ನಂತರ ಕ್ಷಮೆ ಕೇಳಿದ್ದ. ಧ್ರುವ ಸರ್ಜಾ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದ. ಇದೀಗ ಮತ್ತೊಬ್ಬ ಅಭಿಮಾನಿಯೂ ಇದೇ ಮಾತು ಹೇಳಿದ್ದಾರೆ. ರಾಮು ಎಂಬ ಹೆಸರಿನ ಹೊಸಕೋಟೆಯ ಅಭಿಮಾನಿಯೊಬ್ಬರು ಧ್ರುವ ಸರ್ಜಾ ಅವರಿಗೇ ನೇರವಾಗಿ ಈ ಮಾತು ಹೇಳಿದ್ದಾರೆ.
ಅಣ್ಣ, ಕೆಲವು ಅಭಿಮಾನಿಗಳು ಮಾರ್ಟಿನ್ ಶೋ ನಡೆಯುತ್ತಿರುವ ಥಿಯೇಟರ್ ಹತ್ತಿರ ಹೋಗಿ ಜೈ ಡಿ ಬಾಸ್ ಅಂತ ಹೇಳು ಅಂಥಾ ದುಡ್ಡು ಕೊಡೋಕೆ ಬರ್ತಿದ್ದಾರೆ. ಅಣ್ಣಾ.. ನೀವ್ ಹೇಳಿದ್ರೆ ಬೈತೀರ.. ಆದರೆ ನನ್ನ ಕರ್ತವ್ಯ ನಾನು ಮಾಡಿದ್ದೇನೆ ಎಂದು ಲೈವ್ ಶೋನಲ್ಲಿಯೇ ಹೇಳಿಕೊಂಡಿದ್ದಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಸಿನಿಮಾ ನೋಡಿ, ಎಂಜಾಯ್ ಮಾಡಿ ಎಂದು ಹೇಳಿದ್ದಾರೆ ಧ್ರುವ ಸರ್ಜಾ.
ಪಾಕಿಸ್ತಾನ ಸೇನೆಯಿಂದ ಬಂಧನಕ್ಕೊಳಗಾದ ಭಾರತೀಯನೊಬ್ಬನ ಕಥೆಯೊಂದಿಗೆ ‘ಮಾರ್ಟಿನ್’ ಸಿನಿಮಾ ಶುರುವಾಗುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಆತನಿಗೆ ತಾನು ಯಾರು? ತನ್ನ ಹಿನ್ನೆಲೆ ಏನು ಎನ್ನುವುದೇ ಗೊತ್ತಿರಲ್ಲ. ತನ್ನನ್ನು ತಾನು ಯಾರು ಎನ್ನುವ ಹುಡುಕಾಟದಲ್ಲಿ ಕಥೆ ಸಾಗುತ್ತದೆ. ಮಾರ್ಟಿನ್ ಯಾರು? ಅರ್ಜುನ್ ಯಾರು? ಎನ್ನುವುದನ್ನು ತೆರೆ ಮೇಲೆಯೇ ನೋಡಬೇಕು. ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸಿದ್ದು, ಅಭಿಮಾನಿಗಳಿಗೆ ಆಕ್ಷನ್ ದೃಶ್ಯಗಳು ಹಬ್ಬ ಮಾಡುವಂತಿವೆ. ಹೀರೋನೂ ಅವರೇ. ವಿಲನ್ ಕೂಡಾ ಅವರೇ. ಚಿತ್ರದ ಮಾಸ್ ಡೈಲಾಗ್‌ಗಳು ಫೇಮಸ್ ಆಗುತ್ತಿವೆ.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಟಫ್ ಕಾಂಪಿಟೇಷನ್ ಇದೆ. ತಮಿಳಿನ ‘ವೆಟ್ಟೆಯಾನ್’ ಹಾಗೂ ಹಿಂದಿಯ ‘ಜಿಗ್ರಾ’ ಚಿತ್ರಗಳು ಕೂಡ ತೆರೆಕಂಡು ಪ್ರದರ್ಶನ ಕಾಣುತ್ತಿವೆ. ಆದರೆ ಹಿಂದಿಯ ಜಿಗ್ರಾ ಸಿನಿಮಾದ ಕಲೆಕ್ಷನ್ ಫೇಕ್ ಅನ್ನೋದನ್ನೂ ದಾಖಲೆಗಳ ಸಮೇತ ಹೊರಗೆ ತೆಗೆಯಲಾಗಿದೆ. ಬಹುತೇಕ ಹಿಂದಿ ಚಿತ್ರಗಳು ಫೇಕ್ ಕಲೆಕ್ಷನ್ ತೋರಿಸಿ, ಲಾಭ ಮಾಡುತ್ತಿರುವುದಕ್ಕೆ ಇದು ಸಾಕ್ಷಿ ನುಡಿಯುತ್ತಿದೆ.
ಇದರ ನಡುವೆಯೇ ಸುದೀರ್ಘ ಗ್ಯಾಪ್ ನಂತರ ಬಂದಿರುವ ಧ್ರುವ ಸರ್ಜಾ, ಮಾರ್ಟಿನ್ ಮೂಲಕ ಒಳ್ಳೆ ಕಂಬ್ಯಾಕ್ ಮಾಡಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಚಿತ್ರ, ಉದಯ್ ಕೆ ಮೆಹ್ತಾ ಅವರಿಗೆ ಲಾಭ ತಂದುಕೊಡುವ ಸೂಚನೆಗಳಿವೆ. ಚಿತ್ರದಲ್ಲಿ ಧ್ರುವ ಸರ್ಜಾ ಜೊತೆಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಚಿಕ್ಕಣ್ಣ, ಅಚ್ಯುತ್‌ಕುಮಾರ್, ಅನ್ವೇಷಿ ಜೈನ್ ಬಣ್ಣ ಹಚ್ಚಿ ನಟಿಸಿದ್ದಾರೆ.ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ.
ಆದರೆ ಕನ್ನಡದ ಯಾವುದೇ ಚಿತ್ರ ಹಿಟ್ ಆದರೆ ಲಾಭವಾಗುವುದು ಕನ್ನಡಕ್ಕೆ ಹಾಗೂ ಕನ್ನಡ ಚಿತ್ರರಂಗಕ್ಕೆ. ಹೀಗಿರುವಾಗ ತಮ್ಮ ವಿರುದ್ಧ ಇದ್ದಾರೆ ಎಂಬ ಕಾರಣಕ್ಕೆ, ಇನ್ನೊಬ್ಬ ನಟನ ಫ್ಯಾನ್ಸ್ ಈ ರೀತಿ ವರ್ತಿಸುವುದು ಸರಿಯೇ.. ಎಂಬ ಪ್ರಶ್ನೆಯನ್ನು ಅವರವರೇ ಕೇಳಿಕೊಳ್ಳಬೇಕು.



