ಪ್ರೇಕ್ಷಕರು ಕಣ್ಣೀರು ಹಾಕುತ್ತಿದ್ದಾರೆ. ಪ್ರೇಕ್ಷಕರು ಕಣ್ಣೀರಿಡುತ್ತಿರುವುದು ನೋಡಿದರೇನೇ.. ನೋಡಿದವರೂ ಭಾವುಕರಾಗುತ್ತಿದ್ದಾರೆ. ಇಷ್ಟಕ್ಕೂ ಪ್ರೇಕ್ಷಕರು ಕಣ್ಣೀರಿಡುವಂತೆ ಮಾಡಿರುವುದು ಒಂದು ಸಿನಿಮಾ. ಸಿನಿಮಾ ಹೆಸರು ಚಾವಾ. ಚಿತ್ರದಲ್ಲಿ ಅಂಥದ್ದೇನಿದೆ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಚಾವಾ. ಟ್ವಿಟರ್ ತೆಗೆದರೆ ಸಾಕು… ಸಿನಿಮಾ ಮಂದಿರದಲ್ಲಿ ಚಾವಾ ನೋಡಿ ಕಣ್ಣೀರು ಹಾಕುವ ದೃಶ್ಯಗಳು. ಫೇಸ್ ಬುಕ್ ತೆರೆದರೆ ಉದ್ದುದ್ದ ಬರಹಗಳು. ಮೆಚ್ಚುಗೆಯ ಮಹಾಪೂರ. ಇನ್‌ಸ್ಟಾ ತೆರೆದರೆ.. ಅಲ್ಲೂ ಭಾವುಕ ವಿಡಿಯೋಗಳ ರಾಶಿ. ಯಾವುದೇ ಸೋಷಿಯಲ್ ಮೀಡಿಯಾ ತೆರೆದರೂ ಚಾವಾ ಚಿತ್ರದ ರಿಯಾಕ್ಷನ್ ಕಾಣುತ್ತಿದೆ. ಕಾಡುತ್ತಿದೆ. ಚಾವಾ ರಿಲೀಸ್ ಆದ ಕೆಲವೇ ದಿನಗಳಲ್ಲಿ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಪ್ರೇಕ್ಷಕರನ್ನು ಇಷ್ಟು ಭಾವುಕರನ್ನಾಗಿಸಿರುವ ಕಥೆ ಏನು ಎಂದು ನೋಡಿದರೆ, ಇದೊಂದು ಐತಿಹಾಸಿಕ ಚಿತ್ರ.
ಚಿತ್ರದ ಹೀರೋ ಸಂಭಾಜಿಯ ಪಾತ್ರ ಮಾಡಿರುವುದು ವಿಕ್ಕಿ ಕೌಶಲ್. ಸಂಭಾಜಿಯ ಪತ್ನಿ ಯೇಸುಭಾಯಿಯಾಗಿ ರಶ್ಮಿಕಾ ಮಂದಣ್ಣ, ಔರಂಗಜೇಬನಾಗಿ ಅಕ್ಷಯ್ ಖನ್ನಾ, ಬಾಲಾಜಿ ಮನೋಹರ್, ಅಶುತೋಶ್ ರಾಣಾ, ದಿವ್ಯಾ ದತ್ತಾ.. ಹೀಗೆ ದೊಡ್ಡ ಕಲಾವಿದರ ಪಡೆಯೇ ಇದೆ. ಅಜಯ್ ದೇವಗನ್ ಹಿನ್ನೆಲೆ ಧ್ವನಿ ಇದೆ. ವಿಷಯ ಇದಲ್ಲ, ಬಹುತೇಕರಿಗೆ ಛತ್ರಪತಿ ಶಿವಾಜಿಯ ಕಥೆ ಗೊತ್ತು. ಆದರೆ ಈ ಚಾವಾ ಎಂದರೆ (ಚಾವಾ ಎಂದರೆ ಮರಾಠಿ ಭಾಷೆಯಲ್ಲಿ ಸಿಂಹದ ಮರಿ) ಶಿವಾಜಿಯ ಮಗ ಸಂಭಾಜಿಯ ಕಥೆ.
ಸಿನಿಮಾ ಶುರುವಾಗುವುದೇ ಶಿವಾಜಿ ಮೃತಪಟ್ಟ ಸುದ್ದಿ ಬಂದ ನಂತರ. ಆಗ ಮೊಘಲರ ದೊರೆ ಔರಂಗಜೇಬ್, ಇನ್ನು ಇಡೀ ಭಾರತವನ್ನು ಆಳ್ವಿಕೆ ಮಾಡಬಹುದು ಎಂದು ಹೊಂಚು ಹಾಕುತ್ತಾನೆ. ಮುಸ್ಲಿಮ್ ಧರ್ಮ ವಿಸ್ತರಣೆಗೆ ದೊಡ್ಡ ಅಡ್ಡಿಯಾಗಿದ್ದ ಶಿವಾಜಿಯ ಮಗನನ್ನೇ ಮುಸ್ಲಿಮನನ್ನಾಗಿ ಮಾಡಿಬಿಟ್ಟರೆ, ಸುಲಭ ಎಂದು ಸಂಚು ಮಾಡುತ್ತಾನೆ. ಯುದ್ಧ ಮಾಡಿ ಗೆಲ್ಲಲಾಗದ ಔರಂಗಜೇಬ್, ಮೋಸದಿಂದಲೇ ಸಂಭಾಜಿಯನ್ನು ಸೆರೆ ಹಿಡಿಸುತ್ತಾನೆ.
ಶೌರ್ಯವಲ್ಲ.. ಹಿಂಸೆ ನೋಡಿ ಕಣ್ಣೀರಿಟ್ಟ ಪ್ರೇಕ್ಷಕರು..!
ಚಿತ್ರದಲ್ಲಿ ಸಂಭಾಜಿಯ ಶೌರ್ಯ ಮೆರೆಯು ದೃಶ್ಯಗಳೂ ಇವೆ. ಆದರೆ ಪ್ರೇಕ್ಷಕರು ಕಣ್ಣೀರಿಡುವುದು ಹಿಂಸೆಯ ದೃಶ್ಯಗಳನ್ನು ನೋಡಿ. ಔರಂಗಜೇಬ್, ಸಂಭಾಜಿಯನ್ನು ಮತಾಂತರಕ್ಕೆ ಬಲವಂತ ಮಾಡುತ್ತಾನೆ. ಸಂಭಾಜಿ ಒಪ್ಪುವುದಿಲ್ಲ. ಮಗಳನ್ನು ಕೊಟ್ಟು ಸಾಮ್ರಾಟನನ್ನಾಗಿ ಮಾಡಿದರೂ ಧರ್ಮ ಬಿಡುವುದಿಲ್ಲ ಎನ್ನುತ್ತಾನೆ ಚಾವಾ. ನೀನೇ ನಮ್ಮ ಜೊತೆ ಬಂದುಬಿಡು. ನೀನು ನಮ್ಮ ಜೊತೆ ಬರುವುದಕ್ಕೆ, ಬದುಕುವುದಕ್ಕೆ ನೀನು ನಿನ್ನ ಧರ್ಮವನ್ನೇನೂ ಬಿಡಬೇಕಿಲ್ಲ ಎನ್ನುತ್ತಾನೆ.
ಸಂಭಾಜಿಯ ಕಣ್ಣುಗಳಲ್ಲಿ ಭಯವಾಗಲೀ, ದೈನ್ಯತೆಯಾಗಲೀ ಕಾಣುತ್ತಿಲ್ಲ ಎಂದು ಕೆರಳಿದ ಔರಂಗಜೇಬ್, ಸಂಭಾಜಿಯ ಕಣ್ಣುಗಳನ್ನು ಕೀಳಿಸುತ್ತಾನೆ. ಸುಡಿಸುತ್ತಾನೆ. ಉಗುರುಗಳನ್ನು ಕೀಳಿಸುತ್ತಾನೆ. ಕೊನೆಗೆ ಔರಂಜಗಬೇಜ್ ಸಂಭಾಜಿಯ ದೇಹದ ಚರ್ಮವನ್ನು ಸೀಳಿ, ಚರ್ಮ ಕಿತ್ತು ಹೋದ ಜಾಗಕ್ಕೆ ಉಪ್ಪು ಸವರುತ್ತಾನೆ. ಒಂದಲ್ಲ.. ಎರಡಲ್ಲ.. ಕೈಗಳನ್ನು ನೇತುಹಾಕಿ ಸತತವಾಗಿ 15 ದಿನಗಳ ಕಾಲ ಚಿತ್ರಹಿಂಸೆ ಕೊಡುತ್ತಾನೆ. ಆದರೆ ಸಂಭಾಜಿ, ಜೈಭವಾನಿ ಎನ್ನುವ ಮಾತು ಬಿಡುವುದಿಲ್ಲ. ಕೊನೆಗೆ ಜೀವಂತವಿರುವಾಗಲೇ ಸಂಭಾಜಿಯನ್ನು ತುಂಡು ತುಂಡಾಗಿ ಕತ್ತರಿಸಿ ಊರಿನಲ್ಲಿ ಎರಚುತ್ತಾನೆ. ಇದು ಇತಿಹಾಸ. ಕೊನೆಗೆ ಔರಂಗಜೇಬನ ಸೈನ್ಯ ಹೋದ ಮೇಲೆ ಗ್ರಾಮಸ್ಥರು ಸಂಭಾಜಿಯ ದೇಹದ ತುಣುಕುಗಳನ್ನು ಆಯ್ದು ತಂದು ಅವುಗಳನ್ನು ಹೊಲಿದು ಸಂಸ್ಕಾರ ಮಾಡುತ್ತಾರೆ. ಈ ಚರಿತ್ರೆ ಮರಾಠರಿಗೆ ಗೊತ್ತೇ ಹೊರತು, ಬಹುತೇಕರಿಗೆ ಅಪರಿಚಿತವಾಗಿದ್ದ ಕಥೆ. ಚಾವಾದಲ್ಲಿರುವುದು ಈ ಇತಿಹಾಸದ ಕಥೆ.ಪ್ರೇಕ್ಷಕರು ಕಣ್ಣೀರು ಹಾಕುವುದೇ ಕೇವಲ ಧರ್ಮಕ್ಕಾಗಿ ಇಷ್ಟೊಂದು ಹಿಂಸೆ ತಡೆದುಕೊಂಡಿದ್ದ ಸಂಭಾಜಿ ಎಂಬ ಭಾವನೆಗೆ. ಇನ್ನು ಚಿತ್ರದ ಕೊನೆಯಲ್ಲಿ ʻನೀನು ನಮಕ್ ಅಲ್ಲ, ಭವಾನಿ ದೇವಿಯ ಹಣೆಯಲ್ಲಿರುವ ತಿಲಕʼ ಎಂಬ ಕಾವ್ಯದ ಸಾಲು ಕೇಳಿ ಪ್ರೇಕ್ಷಕರು ಕಣ್ಣೀರಾಗಿದ್ದಾರೆ.
ಚಾವಾ. ಈ ಸಿನಿಮಾವನ್ನು ನೋಡಿ. ಧರ್ಮ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದ ಇತಿಹಾಸದ ಕಥೆಯನ್ನೊಮ್ಮೆ ನೋಡಿ. ಕಣ್ಣೀರು ಹಾಕಬೇಡಿ. ಅದು ಆ ಹೋರಾಟಕ್ಕೆ ನಾವು ಮಾಡುವ ಅವಮಾನ ಎನ್ನಬಹುದು.



