ಕಾವೇರಿ ನೀರಿನ (Kaveri Water) ರೊಚ್ಚು ನಿಧಾನವಾಗಿ ಏರುತ್ತಿದೆ. ಇನ್ನೂ ರಾಜ್ಯದ ಜನರಿಗೆ ಕಾವೇರಿ ನೀರು ಬಿಡುಗಡೆ ಹೋರಾಟದ ಸಂಕಷ್ಟ ಅರ್ಥವಾದಂತೆ ಇಲ್ಲ. ಹೀಗಾಗಿ ಹೋರಾಟ ಎನ್ನುವುದು ಕೆಲವೇ ರೈತರ, ರೈತ ಸಂಘಟನೆಗಳ ಹೋರಾಟಕ್ಕೆ ಸೀಮಿತವಾಗಿದೆ. ಅದರಲ್ಲಿಯೂ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ, ಸಖ್ಯ ಬೆಳೆಸಿಕೊಂಡಿರುವ ಸಂಘಟನೆಗಳು ಏನೂ ಗೊತ್ತಿಲ್ಲ.. ಏನೂ ನಡೆದಿಲ್ಲ.. ಎಂಬಂತೆ ಮೌನವಾಗಿವೆ. ತಮಿಳುನಾಡು ವಿವಾದವನ್ನು ಸುಪ್ರೀಂಕೋರ್ಟಿನಲ್ಲಿ (Supreme court) ಪ್ರಶ್ನಿಸಿದೆ. ಕರ್ನಾಟಕ ರಾಜ್ಯ ಸರ್ಕಾರ ಪ್ರತಿದಿನವೂ 5 ಸಾವಿರ ಕ್ಯೂಸೆಕ್ ನೀರು ಬಿಡುತ್ತಿದೆ.
ನಾವೇನೂ ಮಾಡೋಕೆ ಸಾಧ್ಯ ಇಲ್ಲ. ಸುಪ್ರೀಂಕೋರ್ಟ್‍ನ್ನೂ ಎದುರು ಹಾಕಿಕೊಳ್ಳೋಕೆ ಆಗಲ್ಲ. ಹಾಗಂತ ನಾವು ರಾಜ್ಯದ ಹಿತವನ್ನೇನೂ ಬಲಿ ಕೊಟ್ಟಿಲ್ಲ ಎನ್ನುವುದು ಡಿಕೆ ಶಿವಕುಮಾರ್ (DK Shivakumar) ವಾದ. ಅಷ್ಟೇ ಏಕೆ, ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟ ಹಾಗೂ ಹೋರಾಟಗಾರರನ್ನು ಕಾಂಗ್ರೆಸ್ ವಿರೋಧಿಗಳು ಎಂದ ನೇರವಾಗಿ ಹೇಳಿರುವ ಡಿಕೆ ಶಿವಕುಮಾರ್ ಇದರ ಹಿಂದೆ ರಾಜಕೀಯ ಅಡಗಿದೆ ಎನ್ನುತ್ತಿದ್ದಾರೆ. ವಾಸ್ತವ ಏನು..?
ಕಾವೇರಿ ವಿಚಾರದಲ್ಲಿ ನಾವು ಒಗ್ಗಟ್ಟಾಗಿ ಹೋರಾಡಿ ರಾಜ್ಯದ ಹಿತ ಕಾಯಬೇಕಿದೆ. ಕಾಂಗ್ರೆಸ್, ಬಿಜೆಪಿ, ನಾವು ಒಂದಾಗಿ ರಾಜ್ಯದ ಹಿತ ಕಾಯಬೇಕಿದೆ. ಕಾವೇರಿ ವಿಚಾರದಲ್ಲಿ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಒಂದಾಗಿ ಕೆಲಸ ಮಾಡುತ್ತವೆ. ಅವರಿಂದ ನಾವು ಪಾಠ ಕಲಿಯಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Devegowda) ಹೇಳಿದ್ದಾರೆ. ಕಾವೇರಿ ನೀರಿಗಾಗಿ ದೇವೇಗೌಡರ (HD Devegowda) ಹೋರಾಟ ಏನೆಂಬುದು ಇಡೀ ನಾಡಿನ ಜನತೆಗೆ ಗೊತ್ತಿಲ್ಲವೇ? ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ಜವಾಬ್ದಾರಿ ಇದೆ. ಯಾವ ರಾಜ್ಯದಲ್ಲಿ ಎಷ್ಟುನೀರಿದೆ, ಬೆಳೆ ಏನಿದೆ, ಎಷ್ಟುನೀರು ಕುಡಿಯಲು ಬೇಕಿದೆ ಎಂಬುದನ್ನು ತಿಳಿಯಲು ತಂಡ ಕಳುಹಿಸಿ ಮಾಹಿತಿ ಸಂಗ್ರಹಿಸಬೇಕು. ರಾಜ್ಯದ ಹಕ್ಕು ಉಳಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿ ಮೂರೂ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂಬುದು ನನ್ನ ಭಾವನೆ ಎಂದಿರುವ ದೇವೇಗೌಡ (HD Devegowda) ನೀರಾವರಿ ಸಚಿವರು ಯಾರಿಗೂ, ಯಾವುದೇ ಮಾಹಿತಿಯನ್ನು ನೀಡದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಅಧಿಕಾರಿಗಳಿಗೆ ಕರೆ ಮಾಡಿ ಡ್ಯಾಂನಲ್ಲಿರುವ ನೀರಿನ ಸಂಗ್ರಹ, ಹೊರಹರಿವು, ಒಳಹರಿವಿನ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಏಕೆ ಎಂದು ಕೇಳಿದರೆ ನಮಗೆ ಸಚಿವರಿಂದ ಸೂಚನೆ ಇದೆ. ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ ದೇವೇಗೌಡ.
ದೇವೇಗೌಡ ರಾಜ್ಯದ ಸಿಎಂ ಆಗಿದ್ದವರು. ಮಾಜಿ ಪ್ರಧಾನಿ. ರಾಜ್ಯದಲ್ಲಿ ಕಾವೇರಿ ಸಂಕಷ್ಟ ಶುರುವಾದ ಕೂಡಲೇ ರಾಜಕಾರಣಿಗಳು ಪಕ್ಷ ಭೇದ ಮರೆತು, ದೇವೇಗೌಡರ ಸಲಹೆ ಮಾರ್ಗದರ್ಶನ ಕೇಳುತ್ತಾರೆ. ದೇವೇಗೌಡರು ಅಷ್ಟೆ, ಕಾವೇರಿ ಸೇರಿದಂತೆ ರಾಜ್ಯದ ಹಕ್ಕುಗಳ ಹೋರಾಟದ ವಿಷಯದಲ್ಲಿ ರಾಜಕೀಯ ಮಾಡಿದವರಲ್ಲ. ಸಲಹೆ, ಮಾರ್ಗದರ್ಶನ ನೀಡುತ್ತಾರೆ. ರಾಜಕೀಯ ಮಾಡೋದಿಲ್ಲ. ಹೀಗಿದ್ದರೂ.. ದೇವೇಗೌಡರಿಗೇ ಮಾಹಿತಿ ಸಿಗುತ್ತಿಲ್ಲ ಎಂದರೆ ಸಂಥಿಂಗ್ ಈಸ್ ರಾಂಗ್. ಏಕೆಂದರೆ ರಾಜ್ಯದಿಂದ ಎಷ್ಟು ನೀರು ಹೋಗುತ್ತಿದೆ ಅನ್ನೋ ಲೆಕ್ಕವನ್ನ ರಾಜ್ಯ ಸರ್ಕಾರ ಕೊಡುತ್ತಿಲ್ಲ. ಅತ್ತ ಬಿಳಿಗುಂಡ್ಲುವಿನಲ್ಲಿ ಸಿಗುವ ಲೆಕ್ಕವನ್ನ ನೋಡೋಕೂ ಅವಕಾಶ ಇಲ್ಲ. ಲೆಕ್ಕವನ್ನು ಮುಚ್ಚಿಟ್ಟು ರಾಜ್ಯ ಸರ್ಕಾರ ಸಾಧಿಸುತ್ತಿರುವುದಾದರೂ ಏನು..?



