ಬಿಹಾರದಲ್ಲಿ ಮತ್ತೊಮ್ಮೆ ಮಹಾಘಟಬಂಧನ್ ಮುಗ್ಗರಿಸಿ ಬಿದ್ದಿದೆ. ವಿಶೇಷ ಅಂದ್ರೆ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತಾಗಿ ಹೋಗಿದೆ. ಕಾಂಗ್ರೆಸ್ 243 ಕ್ಷೇತ್ರಗಳ ಬಿಹಾರದಲ್ಲಿ ಗೆದ್ದಿರೋದು ಕೇವಲ 6 ಕ್ಷೇತ್ರ. ಕಳೆದ ಬಾರಿ 19 ಇತ್ತು. ಅಂದಹಾಗೆ ಇದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷಕ್ಕೆ 95ನೇ ಸೋಲು. ಈ ಮಾತು ಹೇಳ್ತಾ ಇರೋದು ಬಿಜೆಪಿ. ಈ ವಾದ ಎಷ್ಟರಮಟ್ಟಿಗೆ ನಿಜ..? ದಾಖಲೆಗಳನ್ನು ನೋಡುತ್ತಾ ಹೋದರೆ.. ಸ್ಪಷ್ಟವಾಗುತ್ತಾ ಹೋಗುತ್ತದೆ.
ಕಳೆದ ಎರಡು ದಶಕಗಳಲ್ಲಿ ರಾಹುಲ್ ಗಾಂಧಿ ತಮ್ಮ ಪಕ್ಷಕ್ಕೆ 95 ಸೋಲುಗಳನ್ನುಂಟು ಮಾಡಿದ್ದಾರೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ 2004 ಮತ್ತು 2025ರ ನಡುವೆ ಕಾಂಗ್ರೆಸ್ ಬಿಹಾರವೂ ಸೇರಿ 95 ಚುನಾವಣೆಗಳನ್ನು ಸೋತಿದೆ. ಈ ಪಟ್ಟಿಯಲ್ಲಿ ಬಹುತೇಕ ಎಲ್ಲಾ ಪ್ರಮುಖ ರಾಜ್ಯಗಳೂ ಇವೆ. ಹಿಮಾಚಲ ಪ್ರದೇಶ (2007, 2017), ಪಂಜಾಬ್ (2007, 2012, 2022), ಗುಜರಾತ್ (2007, 2012, 2017, 2022), ಮಧ್ಯಪ್ರದೇಶ (2008, 2013, 2018, 2023), ಮತ್ತು ಮಹಾರಾಷ್ಟ್ರ (2014, 2019, 2024). ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಈಶಾನ್ಯ, ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿನ ಪತನಗಳ ಲೆಕ್ಕವೂ ಇದೆ. ಒಟ್ಟಾರೆಯಾಗಿ ಇದು 2004ರ ನಂತರ 95ನೇ ಸೋಲು ಎನ್ನುವುದು ನಿಜ. ಆದರೆ.. ಹಾಗಂತ ಇದು ರಾಹುಲ್ ಗಾಂಧಿಯವರ 95ನೇ ಸೋಲು ಎನ್ನುವುದಕ್ಕೆ ಬರುವುದಿಲ್ಲ.
ಕಾರಣ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದು 2017ರಲ್ಲಿ. ಅದಾದ ನಂತರ ರಾಹುಲ್ ಗಾಂಧಿ ಗೆದ್ದಿದ್ದಾರೆ. ಸೋತಿದ್ದಾರೆ. ಇದೀಗ ಎಐಸಿಸಿ ಅಧ್ಯಕ್ಷ ಸ್ಥಾನವನ್ನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟು ʻಹಿಂಬಾಗಲಿನಿಂದʼ ಅಧಿಕಾರ ಚಲಾಯಿಸುತ್ತಿದ್ದಾರೆ. 2004ರಲ್ಲಿ ಸೋನಿಯಾ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 2004ರ ನಂತರ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲಾಗಿದೆ. ಸ್ವಯಂ ಶಕ್ತಿಯಿಂದ ಏಕಾಂಗಿಯಾಗಿ ಅಲ್ಲದೇ ಹೋದರೂ.. ಸತತವಾಗಿ 10 ವರ್ಷ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಅದಂತೂ ಇತಿಹಾಸ.
ಇನ್ನು ರಾಜ್ಯಗಳ ಮಟ್ಟಿಗೆ ನೋಡುವುದಾದರೆ ಸದ್ಯಕ್ಕೆ ಕಾಂಗ್ರೆಸ್ ಇಡೀ ದೇಶದಲ್ಲಿ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶ. ಇವುಗಳಲ್ಲಿ ಕರ್ನಾಟಕ ಒಂದೇ ಪ್ರಬಲ ರಾಜ್ಯ.
ಕರ್ನಾಟಕದಲ್ಲಿ 138 ಶಾಸಕರು, ತೆಲಂಗಾಣದಲ್ಲಿ 76 ಹಾಗೂ ಹಿಮಾಚಲ ಪ್ರದೇಶದಲ್ಲಿ ಶಾಸಕರಿದ್ದಾರೆ. ಇಲ್ಲಿ ಅಧಿಕಾರದಲ್ಲಿದೆ.
ಇನ್ನು ಅಧಿಕಾರ ಇಲ್ಲದೇ ಇದ್ದರೂ ಪ್ರಬಲವಾಗಿರುವ ರಾಜ್ಯಗಳೆಂದರೆ ರಾಜಸ್ತಾನ (67 ಶಾಸಕರು), ಛತ್ತೀಸ್ ಘಡ (35 ಶಾಸಕರು), ಹರಿಯಾಣ (37 ಶಾಸಕರು), ಅಸ್ಸಾಂ (22), ಕೇರಳ (21), ಉತ್ತರಾಖಂಡ್ (20) ರಾಜ್ಯಗಳಲ್ಲಿ ಪ್ರಬಲವಾಗಿದೆ. ಅಧಿಕಾಋ ಇಲ್ಲ.
ಇನ್ನು ತಮಿಳುನಾಡು (17), ಪಂಜಾಬ್ (16), ಜಾರ್ಖಂಡ್ (16), ಮಹಾರಾಷ್ಟ್ರ (16), ಜಮ್ಮು ಕಾಶ್ಮೀರ (06), ಬಿಹಾರ (06) ಗಳಲ್ಲಿ ಮಿತ್ರ ಪಕ್ಷಗಳ ಮೇಲೆ ಅವಲಂಬನೆ ಇದೆ. ಮಿತ್ರ ಪಕ್ಷಗಳು ಕೊಟ್ಟಷ್ಟು ಕ್ಷೇತ್ರಗಳನ್ನು ತೆಗೆದುಕೊಳ್ಳಬೇಕು.
ಜಮ್ಮು ಕಾಶ್ಮೀರ, ಬಿಹಾರವೂ ಸೇರಿದಂತೆ ಗೋವಾ 3, ಮಣಿಪರ 5, ತ್ರಿಪುರಾ 3, ಉತ್ತರ ಪ್ರದೇಶ 2 (ಅತೀ ಹೆಚ್ಚು ವಿಧಾನಸಭೆ ಕ್ಷೇತ್ರಗಳಿರುವ ರಾಜ್ಯ ), ಪುದುಚೆರಿ 2, ಅರುಣಾಚಲ ಪ್ರದೇಶ, ಮಿಝೋರಾಂಗಳಲ್ಲಿ 1 ಸ್ಥಾನ ಇದೆ.
ಆಂಧ್ರಪ್ರದೇಶ, ದೆಹಲಿ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ಪ.ಬಂಗಾಳದಲ್ಲಿ ಕಾಂಗ್ರೆಸ್ಸಿನದ್ದು ಶೂನ್ಯ ಸಂಪಾದನೆ. ಒಬ್ಬರೇ ಒಬ್ಬ ಶಾಸಕರಿಲ್ಲ.



