ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಗ್ಗಟ್ಟಿನ ಸಂದೇಶ ನೀಡಿದ್ದರೂ, ಬೆಂಬಲಿಗರಿಂದ ‘ಸಿಎಂ’ ಕೂಗು ಮಾತ್ರ ನಿಂತಿಲ್ಲ. ಅದು ದೆಹಲಿಯಲ್ಲೂ ಪ್ರತಿಧ್ವನಿಸಿದೆ. ಭಾನುವಾರ ನಡೆದ ವೋಟ್ ಚೋರಿ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಮತ್ತು ಡಿಕೆಶಿ ದೆಹಲಿಗೆ ಬಂದಾಗಲೂ ಬೆಂಬಲಿಗರು ತಮ್ಮ ನಾಯಕನ ಪರ ಜೈಕಾರ ಕೂಗಿದ್ದಾರೆ. ಆದರೆ ಇದರ ಮಧ್ಯೆ ರಾಹುಲ್ ಗಾಂಧಿ ಅವರನ್ನು ರೀಚ್ ಆಗಲು ಡಿಕೆ ಶಿವಕುಮಾರ್ ಬಳಸುತ್ತಿರುವ ತಂತ್ರಗಾರಿಕೆ ಕುತೂಹಲಕಾರಿಯಾಗಿದೆ.
ಅದು ಘೋಷಣೆ ಅಲ್ಲ. ಡಿಕೆ ಶಿವಕುಮಾರ್ ಬಂದಾಗ ‘ಮುಂದಿನ ಸಿಎಂ ಡಿಕೆಶಿʼ ಎಂದು ಜೈಕಾರ ಕೂಗಿಸಿದರೆ ಆಗುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಬಂದಾಗ ‘ಐದು ವರ್ಷವೂ ಸಿದ್ದರಾಮಯ್ಯ ಸಿಎಂ’ ಎಂದು ಘೋಷಣೆ ಕೂಗಿಸುವುದೂ ಕಷ್ಟ ಅಲ್ಲ. ಸದ್ಯಕ್ಕೆ ದೆಹಲಿಯಲ್ಲಿ ಆಗುತ್ತಿರುವುದು ಇದೇ. ಹೀಗಾಗಿಯೇ ಡಿಕೆ ಶಿವಕುಮಾರ್ ಇಟ್ಟಿರುವ ಹೆಜ್ಜೆ ಕುತೂಹಲಕಾರಿಯಾಗಿದೆ.
ರಾಹುಲ್ ಗಾಂಧಿ ಪ್ರತಿದಿನ ನ್ಯೂಸ್ ಪೇಪರ್ ಓದುತ್ತಾರೆ. ಹಿಂದಿ ಅಷ್ಟಕ್ಕಷ್ಟೇ. ಹೀಗಾಗಿ ಇಂಗ್ಲಿಷ್ ಪತ್ರಿಕೆಗಳನ್ನು ಓದುವ ರಾಹುಲ್ ಗಾಂಧಿ, ಇಂಟ್ರೆಸ್ಟಿಂಗ್ ಆಗಿ ಓದುವ ಪತ್ರಿಕೆಯ ಮಾಹಿತಿ ಡಿಕೆ ಅವರಿಗೆ ಸಿಕ್ಕಿದೆಯಂತೆ. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರು ಓದುತ್ತಿರುವ ಬಹುತೇಕ ಪತ್ರಿಕೆಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ಹೊಗ ಳುವ, ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವ ಅನಿವಾರ್ಯತೆಯನ್ನು ಎತ್ತಿ ತೋರಿಸುವ ವರದಿಗಳು, ಸ್ಟೋರಿಗಳು ಪ್ರಕಟವಾಗುವಂತೆ ನೋಡಿಕೊಳ್ತಿದ್ದಾರೆ ಡಿಕೆ.
ಕರ್ನಾಟಕದಲ್ಲಿ ಪಕ್ಷ ಅಧಿಕಾರಹೀನ ಸ್ಥಿತಿಯಲ್ಲಿದ್ದಾಗ ಕೆಪಿಸಿಸಿಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಎಂಥ ರಣತಂತ್ರಗಳನ್ನು ರೂಪಿಸಿದರು ಮತ್ತು ಯಾವ್ಯಾವ ಸಂದರ್ಭಗಳಲ್ಲಿ ಪಕ್ಷಕ್ಕಾಗಿ ತ್ಯಾಗ ಮಾಡಿದರು ಎಂಬಲ್ಲಿಯ ತನಕ ಒಂದಿಂದು ವರದಿಗಳು ಪ್ರತಿ ದಿನ ರಾಹುಲ್ ಗಾಂಧಿಯವರ ಕಣ್ಣಿಗೆ ಬೀಳುವಂತೆ ನೋಡಿಕೊಳ್ಳುತ್ತಿದ್ದಾರೆ. ಇವುಗಳನ್ನು ಎಐಸಿಸಿಯ ಮಾಧ್ಯಮ ವಿಭಾಗದ ಪ್ರಮುಖರಾದ ಜೈರಾಮ್ ರಮೇಶ್, ಪವನ್ ಖೇರ್ ಅವರೇ ಪತ್ರಿಕೆಗಳಲ್ಲಿ ಬರುತ್ತಿರುವ ಈ ಸುದ್ದಿಗಳನ್ನು ರಾಹುಲ್ ಗಾಂಧಿಯವರ ಗಮನಕ್ಕೆ ತರುತ್ತಾರೆ.
ವಿಶೇಷ ಎಂದರೆ ಇದು ಸಿದ್ದರಾಮಯ್ಯ ಅವರಿಗೂ ತಲುಪಿದೆ. ಇಂತಹುದು ರಿಪೀಟ್ ಆಗುತ್ತಾ ಹೋದಂತೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಂದ ಒತ್ತಡ ಹೆಚ್ಚಾಗಿ, ರಾಹುಲ್ ಗಾಂಧಿ ಅವರೂ ಚೇಂಜ್ ಆಗಬಹುದು ಎಂಬ ಆತಂಕ ಅದು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಟೀಂ ಕೂಡಾ ಹೊಸ ತಂತ್ರ ಹೆಣೆಯತೊಡಗಿದೆಯಂತೆ. ಆದರೆ, ಅದು ಸದ್ಯದ ಮಟ್ಟಿಗೆ ನಿಗೂಢವಾಗಿಯೇ ಇದೆ.
ಸಿದ್ದರಾಮಯ್ಯ ಅವರ ಪ್ಲಾನ್ ಎ ಪ್ರಕಾರ ಅವರೇ 5 ವರ್ಷ ಹುದ್ದೆಯಲ್ಲಿ ಮುಂದುವರಿಯಬೇಕು. ಇಲ್ಲದೇ ಹೋದರೆ ಪ್ಲಾನ್ ಬಿ ಅಂತೂ ಸಿದ್ಧ ಇದೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್ ಸಿ ಮಹದೇವಪ್ಪ ಅವರ ಹೆಸರು ಬರುತ್ತಿರುವುದರ ಅರ್ಥ ಪ್ಲಾನ್ ಬಿ ಕೂಡಾ ಚಾಲ್ತಿಯಲ್ಲಿದೆ. ಅಂದಹಾಗೆ ಸಿದ್ದರಾಮಯ್ಯ ಜೊತೆಗಾರರೂ ಅಚ್ಚರಿ ಬಿದ್ದಿರುವುದು ಏಕೆಂದರೆ ಸಿದ್ದರಾಮಯ್ಯ ದೇವೇಗೌಡರಿಗಿಂತಲೂ ಬಿಗಿಯಾಗಿ ಪಟ್ಟು ಹಾಕುತ್ತಾರೆ ಹಾಗೂ ತಂತ್ರ ಮಾಡುತ್ತಾರ ಎಂಬ ವಿಷಯಕ್ಕೆ.



