ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇತ್ತೀಚೆಗೆ ಒಂದು ಹೊಸ ಮನೆ ಕಟ್ಟಿಕೊಂಡಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ʻನಲ್ಲಿ ಈಗಾಗಲೇ ಒಂದು ಬಂಗಲೆ ಇದೆ. ಸದಾಶಿವ ನಗರದಲ್ಲಿ ಎರಡು ಮನೆಗಳಿವೆ. ಆ ಎರಡು ಮನೆಗಳಲ್ಲಿ ಒಂದು ಪುನೀತ್ ಅವರ ಕುಟುಂಬಕ್ಕೆ ಸೇರಿದ್ದಾದರೆ, ಇನ್ನೊಂದು ರಾಘವೇಂದ್ರ ರಾಜ್ ಕುಮಾರ್ ಅವರ ಕುಟುಂಬಕ್ಕೆ ಸೇರಿದ್ದು. ಎರಡೂ ಮನೆಗಳು ಅಕ್ಕಪಕ್ಕದಲ್ಲೇ ಇವೆ. ಅಣ್ಣನಿಗೂ ಸೇರಿಸಿ ಮನೆ ಕಟ್ಟಿಸಿಕೊಟ್ಟವರು ಪುನೀತ್. ಆದರೆ ಶಿವಣ್ಣ ಮದುವೆಯಾದ ಹೊಸದರಲ್ಲೇ ಬೇರೆ ಮನೆಗೆ ಶಿಫ್ಟ್ ಆದರು. ಈಗ ಮತ್ತೊಂದು ಫಾರ್ಮ್ ಹೌಸ್ ಕಟ್ಟಿಸಿದ್ದಾರೆ. ಅದೂ ಕನಕಪುರದಲ್ಲಿ.
ಅಂದಹಾಗೆ ಶಿವಣ್ಣ-ಗೀತಾ ಅವರು ಪ್ರತ್ಯೇಕ ಮನೆ ಮಾಡಿಕೊಂಡಿದ್ದಕ್ಕೆ ಬೇರೇನೋ ಕಾರಣ ಇರಲಿಲ್ಲ. ಮದುವೆಗೆ ಮೊದಲೇ ಆ ಮನೆ ನೋಡಿ, ಖರೀದಿ ಮಾಡಿದ್ದವರು ಖುದ್ದು ಪಾರ್ವತಮ್ಮ. ಆಗ ಡಾ.ರಾಜ್ ಅವರ ಮನೆಯಲ್ಲಿದ್ದ ಸದಸ್ಯರ ಸಂಖ್ಯೆ 50+ ಇತ್ತು. ಹೀಗಾಗಿ ನವಜೋಡಿಗೆ ಒಂದು ಪ್ರೈವೇಸಿ ಇರಲಿ ಎಂಬ ಕಾರಣಕ್ಕಾಗಿಯೇ ಪಾರ್ವತಮ್ಮ ಹೊಸ ಮನೆಗೆ ಹೋಗಲು ತಿಳಿಸಿದ್ದರು. ಹಾಗೆಂದು ಬಾಂಧವ್ಯಕ್ಕೇನೂ ಸಮಸ್ಯೆಯಾಗಿರಲಿಲ್ಲ.
ಇದೀಗ ಶಿವಣ್ಣ ಮಾನ್ಯತಾ ಟೆಕ್ ಪಾರ್ಕ್ ಬಂಗಲೆ ಹೊರತುಪಡಿಸಿ, ಸಿಟಿಯಿಂದ ಸ್ವಲ್ಪ ದೂರದಲ್ಲಿರುವ ಕನಕಪುರದಲ್ಲಿ ಹೊಸ ಫಾರ್ಮ್ ಹೌಸ್ ಕಟ್ಟಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಶಿವರಾಜ್‌ಕುಮಾರ್ ಕನಕಪುರದ ಮರಳವಾಡಿ ಸಮೀಪ ಜಮೀನನ್ನು ಖರೀದಿ ಮಾಡಿದ್ದರು. ತೆಂಗು ಹಾಗೂ ಇತರೆ ಬೆಳೆಗಳಿರುವ ಈ ತೋಟ ಸುಮಾರು ಐದೂವರೆ ಎಕರೆಯಷ್ಟು ಇದೆ. ಈ ತೋಟದಲ್ಲಿ ಒಂದು ಫಾರ್ಮ್ ಹೌಸ್ ಅನ್ನು ಕಟ್ಟಬೇಕು ಅಂತ ಶಿವಣ್ಣ ಮನಸ್ಸು ಮಾಡಿದ್ದರು. ಇತ್ತೀಚೆಗೆ ಆ ಕನಸು ಈಡೇರಿಸಿಕೊಂಡಿದ್ದಾರೆ ಶಿವಣ್ಣ.
ಹೇಗಿದೆ ಫಾರ್ಮ್ ಹೌಸ್..?
ಎರಡು ವರ್ಷಗಳ ಹಿಂದೆ ಫಾರ್ಮ್ ಹೌಸ್ ನಿರ್ಮಾಣ ಶುರು ಆಗಿತ್ತು. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಮನೆ ಕಟ್ಟಬೇಕು ಅಂತ ಬಯಸಿದ್ದರಂತೆ ಶಿವಣ್ಣ ಮತ್ತು ಗೀತಕ್ಕೆ. ಇಡೀ ಮನೆಯ ಡಿಸೈನ್, ಲುಕ್ ಉಸ್ತುವಾರಿ ಶಿವರಾಜ್ ಕುಮಾರ್ ಅವರದ್ದಲ್ಲ, ಗೀತಾ ಅವರದ್ದು. ಆದರೆ ಹೇಗಿರಬೇಕು ಅನ್ನೋ ಒಂದು ಕಲ್ಪನೆ ಮಾತ್ರ ಶಿವಣ್ಣ ಅವರದ್ದು. ಅದರಂತೆಯೇ ಶಿವಣ್ಣ ತಮ್ಮ ತೋಟದ ಮನೆಗೆ ನ್ಯಾಚುಲರ್ ಲುಕ್ ಕೊಟ್ಟಿದ್ದಾರೆ. ಮನೆಯ ಮುಂದೆ ಕಂಬಗಳು ಮನೆಗೆ ವಿಂಟೇಜ್ ಲುಕ್ ಕೊಟ್ಟಿದೆ. ಮನೆಯ ಮುಂದೆ ಜಗುಲಿ, ಕೆಂಪು ಇಟ್ಟಿಗೆಯ ಗೋಡೆಗಳನ್ನು ನೋಡಿದರೆ ಇಕೋ ಫ್ರೆಂಡ್ಲಿ ಮನೆ ಅಂತ ಅನಿಸುತ್ತೆ.
ಇನ್ನು ಈ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ದೊಡ್ಡ ಹಾಲ್ ಸಿಗುತ್ತದೆ. ಇದರೊಂದಿಗೆ ಹೆಚ್ಚು ಕಡಿಮೆ ಅಷ್ಟೇ ದೊಡ್ಡದಾದ ಓಪನ್ ಕಿಚನ್ ಇದೆ. ಈ ಫಾರ್ಮ್ ಹೌಸ್‌ನಲ್ಲಿ ಒಟ್ಟು ನಾಲ್ಕು ಬೆಡ್ ರೂಮ್‌ಗಳಿವೆ. ಶಿವಣ್ಣ-ಗೀತಾ ಕುಟುಂದಲ್ಲಿ ಸದ್ಯಕ್ಕೆ ಇರೋದು ಮೂವರೇ ಆದರೂ, ಕುಟುಂಬ ದೊಡ್ಡದು. ದೊಡ್ಮನೆ. ಹೀಗಾಗಿಯೇ ಬೃಹತ್ ಆಗಿಯೇ ಮನೆಯನ್ನು ನ್ಯಾಚುಲರ್ ಲುಕ್ ಕೊಡುವಂತೆ ಮನೆಯನ್ನು ಕಟ್ಟಲಾಗಿದೆ. ಹೀಗಾಗಿ ಈ ಫಾರ್ಮ್ ಹೌಸ್ ವಿಶಿಷ್ಟವಾಗಿ ಕಾಣುತ್ತೆ.
ಬಹುತೇಕ ಎಲ್ಲಾ ತಾರೆಯರೂ ಫಾರ್ಮ್ ಹೌಸ್ ಅನ್ನು ತಮಗೆ ಇಷ್ಟ ಬಂದ ಹಾಗೆ ಕಟ್ಟಿಕೊಂಡಿದ್ದಾರೆ. ಶಿವಣ್ಣ ಫಾರ್ಮ್ ಹೌಸ್ ಕೂಡ ಅಷ್ಟೇ ಸುಂದರವಾಗಿದೆ. ಶೂಟಿಂಗ್‌ನಿಂದ ಬಿಡುವು ಸಿಕ್ಕಿದಾಗ, ವೀಕೆಂಡ್‌ನಲ್ಲಿ ಶಿವರಾಜ್‌ಕುಮಾರ್ ಕುಟುಂಬ ಸಮೇತ ಇಲ್ಲಿಗೆ ಬಂದು ಉಳಿದುಕೊಳ್ಳುತ್ತಾರೆ. ಕೆಲಸದಿಂದ ಬ್ರೇಕ್ ಬೇಕು ಅಂದಾಗ ಫಾರ್ಮ್ ಹೌಸ್‌ಗೆ ಬಂದು ಇಲ್ಲಿ ರಿಲ್ಯಾಕ್ಸ್ ಮಾಡುತ್ತಾರೆ. ಉಳಿದ ದಿನಗಳಲ್ಲಿ ಮಾನ್ಯತಾ ಟೆಕ್ ಪಾರ್ಕ್ ಬಳಿಯೇ ಇರುತ್ತಾರಂತೆ.
ನವೆಂಬರ್ 15ಕ್ಕೆ ಭೈರತಿ ರಣಗಲ್ ರಿಲೀಸ್ ಆಗಲಿದೆ. ಅದಾದ ಸ್ವಲ್ಪ ಸಮಯದ ಬಳಿಕ ಶಿವಣ್ಣ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಲಿದ್ದಾರೆ ಅನ್ನೋ ಮಾಹಿತಿ ಇದೆ. ಆರೋಗ್ಯದ ಸಮಸ್ಯೆ ಇರೋದು ನಿಜ. ಹಾಗಂತ ಆತಂಕ ಪಡುವಂತದ್ದೇನಿಲ್ಲ ಎಂದು ಖುದ್ದು ಶಿವಣ್ಣ ಅವರೇ ಹೇಳಿದ್ದಾರೆ. ಈಗ ಗೃಹ ಪ್ರವೇಶವಾಗಿರುವ ಫಾರ್ಮ್ ಹೌಸ್, ಬೆಂಗಳೂರಿನಿಂದ ದೂರ. ಅಷ್ಟು ದೂರ ಇದ್ದಾಗ ಬರುವವರ ಸಂಖ್ಯೆಯೂ ಕಡಿಮೆ ಇರುತ್ತದೆ. ಆಪರೇಷನ್ ಮುಗಿದ ನಂತರ ಅಲ್ಲಿ ಹೋಗಿ ರೆಸ್ಟ್ ಮಾಡಿದರೆ, ವಿಶ್ರಾಂತಿಯೂ ಸಿಗುತ್ತದೆ ಎನ್ನುವ ವಿಶ್ವಾಸವೂ ಗೀತಾ ಅವರದ್ದು.



