ಕಾಲಿನಲ್ಲಿ 6 ಇಂಚುಗಳಷ್ಟು ಜಾಗ ಜಜ್ಜಿ ಹೋಗಿತ್ತಂತೆ.. ನರ, ಮೂಳೆಗಳೇ ಇರಲಿಲ್ಲವಂತೆ. ಅಷ್ಟು ಭೀಕರವಾಗಿತ್ತು ಅಪಘಾತ. ನಂಜನಗೂಡು ಬಳಿ ಊಟಿಗೆ ಹೋಗುತ್ತಿದ್ದ ಸೂರಜ್ ಅವರನ್ನು ಸ್ಥಳೀಯರೇ ಕರೆತಂದು ಆಸ್ಪತ್ರೆಗೆ ಸೇರಿಸಿದ್ದರು. ಬಲಗಾಲನ್ನು ಕತ್ತರಿಸಲಾಗಿತ್ತು. ಇದೀಗ ವೈದ್ಯರು ಅಪ್`ಡೇಟ್ ನೀಡಿದ್ದು, ಸೂರಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಟ ಸೂರಜ್ ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಸಹೋದರ ಶ್ರೀನಿವಾಸ್ ಅವರ ಮಗ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವಣ್ಣ ಸೇರಿದಂತೆ ದೊಡ್ಮನೆಯವರೆಲ್ಲ ಓಡಿ ಬಂದಿದ್ದರು. ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಅಪಘಾತವಾಗಿ ಬಂದಾಗ ಕಾಲಿನಲ್ಲಿ 6 ಇಂಚಿನಷ್ಟು ಜಾಗದಲ್ಲಿ ಮೂಳೆ, ನರಗಳೇ ಇರಲಿಲ್ಲ. ಜಜ್ಜಿ ಹೋಗಿದ್ದವು. ನಾಲ್ಕೈದು ಗಂಟೆಗಳಷ್ಟು ಸುದೀರ್ಘವಾಗಿ ಕಸಿ ಮಾಡಿದೆವು. ಕಾಲಿನ ಭಾಗ ಕತ್ತರಿಸಿ ತೆಗೆದಿದ್ದು ಸೂರಜ್ ಅವರಿಗೆ ಗೊತ್ತಾಗಿದ್ದು, 4 ದಿನಗಳ ನಂತರ. ಅದನ್ನು ಅವರು ನಿರ್ಲಿಪ್ತರಾಗಿ ಆದರೆ ಶಾಂತತೆಯಿಂದ ಸ್ವೀಕರಿಸಿದರು ಎಂದು ಮಣಿಪಾಲ್ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದ ವೈದ್ಯ ಡಾ.ಅಜಯ್ ಹೆಗ್ಡೆ ತಿಳಿಸಿದ್ದಾರೆ. ಬಲಮೊಣಕಾಲಿನ ಕೆಳಭಾಗವನ್ನು ಕತ್ತರಿಸಿ ತೆಗೆಯಲಾಗಿದೆ. ಇಲ್ಲದೇ ಹೋಗಿದ್ದರೆ ನಂಜು ಹರಡುವ ಸಾಧ್ಯತೆ ಹೆಚ್ಚಾಗಿತ್ತು ಎಂದಿದ್ದಾರೆ.
ಸೂರಜ್ ಅವರ ಅಕ್ಕ ವರಲಕ್ಷ್ಮಿ ನನ್ನ ತಮ್ಮನನ್ನು ಸಕಾಲಕ್ಕೆ ಆಸ್ಪತ್ರೆಗೆ ತಂದು ಸೇರಿಸಿದವರಿಗೆ ಧನ್ಯವಾದಗಳು. ಅವರಿಂದಲೇ ತಮ್ಮನ ಜೀವ ಉಳಿಯಿತು. ವೈದ್ಯರ ಚಿಕಿತ್ಸೆ ಮತ್ತು ಹಾರೈಕೆಯಿಂದ ತಮ್ಮ ಸೂರಜ್ ಆರೋಗ್ಯವಾಗುತ್ತಾನೆ ಎಂದು ತಿಳಿಸಿದ್ದಾರೆ.



