ಮಾಸ್ಟರ್ ರೋಹಿತ್. ‘ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಮುಗ್ಧ ಸಮೀರನಾಗಿ ನಟಿಸಿದ್ದವರು. ಸತ್ಯಪ್ರಕಾಶ್ ಕಣ್ಣಿಗೆ ಬಿದ್ದ ಹುಡುಗನ ಪ್ರತಿಭೆ ಆಮೇಲೆ ದೇಶಕ್ಕೇ ಗೊತ್ತಾಯ್ತು. ರಾಷ್ಟ್ರಪ್ರಶಸ್ತಿಯೂ ಬಂತು. ಅದಾದ ಮೇಲೆ ರಾಬರ್ಟ್ ಚಿತ್ರದ ಚಿತ್ರೀಕರಣದ ವೇಳೆ ಸತ್ಯಪ್ರಕಾಶ್, ರೋಹಿತ್ ಅವರನ್ನು ಚಿತ್ರೀಕರಣದ ಜಾಗಕ್ಕೆ ಕರೆದುಕೊಂಡು ಹೋಗಿದ್ದರಂತೆ. ಆಗ ರೋಹಿತ್ʻನನ್ನು ಮೆಚ್ಚಿ ಮಾತನಾಡಿದ್ದ ದರ್ಶನ್, ನಂತರ ಕಾಟೇರದಲ್ಲಿ ಚಾನ್ಸ್ ಕೊಟ್ಟಿದ್ದರು.
‘ಕಾಟೇರ’ ಚಿತ್ರದಲ್ಲಿ ದರ್ಶನ್ ಜೊತೆ ಜೊತೆಗೆ ಪುಟ್ಟರಾಜು ಆಗಿ ರೋಹಿತ್ ಪಾತ್ರವೂ ಇರುತ್ತದೆ. ಅಲ್ಲೂ ತನ್ನ ಮುಗ್ಧ ನಟನೆಯಿಂದ ರೋಹಿತ್ ಗಮನ ಸೆಳೆದಿದ್ದರು. ಕಾಟೇರ ಚಿತ್ರದ ಮೂಲಕ ಕಮರ್ಷಿಯಲ್ ಚಿತ್ರಗಳ ಪ್ರೇಕ್ಷಕರಿಗೂ ಪರಿಚಿತನಾಗಿದ್ದ ಬಾಲನಟ ರೋಹಿತ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ರೋಹಿತ್‌ಗೆ ಗಂಭೀರ ಗಾಯಗಳಾಗಿದ್ದು, ವಸಡು ಒಡೆದು ಹೋಗಿತ್ತು. ಈಗ ವಸಡನ್ನು ಜೋಡಿಸಿರುವುದರ ಜೊತಗೆ ಇನ್ನೂ 8 ತಿಂಗಳು ರೋಹಿತ್ ಯಾವುದೇ ಗಟ್ಟಿ ಆಹಾರ ಸೇವಿಸಬಾರದು, ದ್ರವಾಹಾರದಲ್ಲಿಯೇ ಇರಬೇಕು ಎಂದು ಹೇಳಿದ್ದಾರಂತೆ. ರೋಹಿತ್ ಅವರ ತಾಯಿ ರಾಜಲಕ್ಷ್ಮಿ ಅವರೂ ಚೇತರಿಸಿಕೊಂಡಿದ್ದಾರೆ.
ರೋಹಿತ್ ಅವರ ಆಪರೇಷನ್ ಯಶಸ್ವಿಯಾಗಿದೆ. ಛಿದ್ರವಾಗಿದ್ದ ರೋಹಿತ್ ವಸಡನ್ನು ಮತ್ತೆ ಜೋಡಿಸಿದ್ದಾರೆ ವೈದ್ಯರು.
ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾಗಿದ್ದ ರೋಹಿತ್ ಅವರಿಗೆ ವೈದ್ಯರು ಆಪರೇಷನ್ ಮಾಡಿದ್ಧಾರೆ. ಕೆಆರ್‌ಎಸ್ ಕಡೆಯಿಂದ ಪಾಲಹಳ್ಳಿ ಕಡೆಗೆ ಬರುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿತ್ತು. ಬಸ್ ಎಡಭಾಗಕ್ಕೆ ಉರುಳಿ ಬಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರೂ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ಪ್ರಯಾಣಿಕರನ್ನು ಸ್ಥಳೀಯರು ಏಣಿ ಹಾಕಿಕಕೊಂಡು ಮೇಲೆತ್ತಿ ರಕ್ಷಿಸಿದ್ದರು.
ಹೊಸಹಳ್ಳಿ ಸಮೀಪದಲ್ಲಿರುವ ಆರಾಧನಾ ಕಾಲೇಜಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು ರೋಹಿತ್. ರೋಹಿತ್ ಅವರ ಜೊತೆ ಅವರ ತಾಯಿ ರಾಜಲಕ್ಷ್ಮಿ, ಆರಾಧನಾ ಕಾಲೇಜಿನ ಉಪನ್ಯಾಸಕ ಕೇಶವ್ ಮತ್ತು ಶ್ರೀಕಾಂತ್ ಕೂಡಾ ಹೋಗಿದ್ದರು. ಲೆಕ್ಚರರ್ ಶ್ರೀಕಾಂತ್ ಡ್ರೈವ್ ಮಾಡುತ್ತಿದ್ದರು.ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮ ಮೊಮ್ಮಗ ಗುಣಮುಖನಾಗುತ್ತಾನೆ ಎಂದು ರೋಹಿತ್ ಅವರ ಅಜ್ಜಿ ತಿಳಿಸಿದ್ದಾರೆ. ಸೊಸೆ ಮತ್ತು ಮೊಮ್ಮಗನನ್ನು ಸದ್ಯಕ್ಕೆ ಅಜ್ಜಿಯೇ ಆರೈಕೆ ಮಾಡುತ್ತಿದ್ದು ತಮ್ಮ ಮೊಮ್ಮಗ ಥಂಬ್ಸ್ ಎತ್ತಿ ಗುಣಮುಖನಾಗುತ್ತಿದ್ದೇನೆ ಎಂದು ಸೂಚಿಸಿದ್ದಾನೆ ಎಂದು ಹೇಳಿದ್ದಾರೆ. ಆದರೆ ಕಾಟೇರನಿಗೆ ಪಟಪಟ ಮಾತಾಡುತ್ತಾ ಕಾಟ ಕೊಡುತ್ತಿದ್ದ ಪುಟ್ಟರಾಜು, ಸದ್ಯಕ್ಕೆ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಮಾತನಾಡುವಂತಿಲ್ಲ ಎಂದು ವೈದ್ಯರು ಹೇಳಿದ್ಧಾರೆ. ದವಡೆ ಭಾಗಕ್ಕೆ ಆಪರೇಷನ್ ಮಾಡಿ ಪ್ಲೇಟ್ ಫಿಕ್ಸ್ ಮಾಡಲಾಗಿದೆ. ರೋಹಿತ್ ಅಜ್ಜಿ ಶಕುಂತಲಾ ಅವರಿಗೆ ಥಂಬ್ಸ್ ಆಪ್ ಮಾಡಿ ಹೆದರಬೇಡಿ ಎಂದು ನಮಗೆ ಧೈರ್ಯ ತುಂಬುತ್ತಿದ್ದಾನಂತೆ. ರೋಹಿತ್ ತಾಯಿ ಛಾಯಾಲಕ್ಷ್ಮಿ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಅವರ ಸ್ಥಿತಿ ಸ್ವಲ್ಪ ಗಂಭೀರವಾಗಿದೆಯಂತೆ. ಇನ್ನು ರೋಹಿತ್ ಜೊತೆಯಲ್ಲಿದ್ದ ಗೆಳೆಯ ಯಶಸ್ ಕೂಡಾ ಅಪಘಾತಕ್ಕೀಡಾಗಿದ್ಧಾನೆ. ಆದರೆ ಪ್ರಾಣಾಪಾಯವೇನಿಲ್ಲ.



