ಅಕ್ಟೋಬರ್ 7ನೇ ತಾರೀಕು ಮಧ್ಯರಾತ್ರಿಯೇ ದೇವೇಗೌಡರನ್ನು ದಿಢೀರನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಕೂಡಲೇ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಣಿಪಾಲ್ ಆಸ್ಪತ್ರೆ ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಬಳಿಕ ದೇವೇಗೌಡರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ವೈದ್ಯರ ಚಿಕಿತ್ಸೆಗೆ ದೇವೇಗೌಡರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಇದು ಆಸ್ಪತ್ರೆಯ ವೈದ್ಯಾಧಿಕಾರಿಗಳೇ ಅಧಿಕೃತವಾಗಿ ಕೊಟ್ಟಿರುವ ಮಾಹಿತಿ.
ತಜ್ಞ ವೈದ್ಯರು ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಐಸಿಯುನಿಂದ ಗೌಡರನ್ನು ಸ್ಪೆಷಲ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಮಣಿಪಾಲ್ ಆಸ್ಪತ್ರೆ ಸಮೂಹದ ಅಧ್ಯಕ್ಷರಾದ ಡಾ.ಸುದರ್ಶನ್ ಬಲ್ಲಾಳ್ ಅವರ ಪ್ರಕಾರ ಅವರ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ.
ದೆಹಲಿಯಿಂದ ದಿಢೀರ್ ಪ್ರಯಾಣ ಬೆಳೆಸಿದ ಕುಮಾರಸ್ವಾಮಿ ಹಾಗೂ ಅನಿತಾ ದಂಪತಿ, ಬೆಂಗಳೂರಿನಲ್ಲಿ ದೇವೇಗೌಡರನ್ನು ನೋಡಿ, ಆರೋಗ್ಯ ವಿಚಾರಿಸಿ ಮತ್ತೆ ದೆಹಲಿಗೆ ವಾಪಸ್ ಆಗಿದ್ದಾರೆ. ದೇವೇಗೌಡರ ಆರೋಗ್ಯ ಸೀರಿಯಸ್ ಇದ್ದರೆ, ಹಾಗೆ ದೆಹಲಿಗೆ ಹೋಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ದೇವೇಗೌಡರ ಇಡೀ ಕುಟುಂಬವೇ ಇದೆ. ಹೆಚ್ ಡಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎಲ್ಲ ಮಕ್ಕಳು, ಸೊಸೆ, ಮೊಮ್ಮಕ್ಕಳು, ಮುಮ್ಮಕ್ಕಳೂ ಎಲ್ಲರೂ ಆಸ್ಪತ್ರೆಯ ಸುತ್ತಮುತ್ತಲೇ ಇದ್ದಾರೆ. ಜೊತೆಗೆ ರಾಜಕಾರಣಿಗಳು ಕೂಡಾ ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಮಣಿಪಾಲ್ ಆಸ್ಪತ್ರೆಯ ವೈದ್ಯರೇ ಗೌಡರ ಕುಟುಂಬದವರಿಗೆ ಅಷ್ಟೊಂದು ಜನ ಬಂದರೆ ಇತರೆ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರಂತೆ.
ಅನಾರೋಗ್ಯದಿಂದ ಆಸ್ಪತ್ಪೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಸ್ವಾಮೀಜ ಅವರ ಜೊತೆ, ದೊಡ್ಡ ಗೌಡರು ನಗುನಗುತ್ತಲೇ ಮಾತನಾಡಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ, ದೇವೇಗೌಡರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಶೀಘ್ರ ಗುಣಮುಖರಾಗುವಂತೆ ದೇವೇಗೌಡರಿಗೆ ಹಾರೈಸಿದ್ದಾರೆ. ಕೆಲ ಕಾಲ ದೇವೇಗೌಡರ ಜೊತೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತುಕತೆ ನಡೆಸಿ, ಆರೋಗ್ಯ ಚೇತರಿಕೆಗೆ ಹಾರೈಸಿ ತೆರಳಿದ್ದಾರೆ. ಮೂತ್ರಸೋಂಕು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ದೇವೇಗೌಡರಿಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದಾರೆ. ಚೇತರಿಸಿಕೊಂಡಿರುವ ದೇವೇಗೌಡರು ಇನ್ನೂ ಎರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗುವ ಸಾಧ್ಯತೆ ಇದೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಇಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಆಗಮಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ್ರು. ದೇವೇಗೌಡರ ಬಳಿ ಕುಳಿತು ಸ್ವಲ್ಪ ಹೊತ್ತು ಮಾತನಾಡಿದ ಸ್ವಾಮೀಜಿ, ದೇವೇಗೌಡರಿಗೆ ಧೈರ್ಯ ತುಂಬಿದ್ರು. ಶೀಘ್ರ ಚೇತರಿಕೆಗೆ ಶುಭ ಹಾರೈಸಿದ್ರು. ಈ ವೇಳೆ ದೇವೇಗೌಡರು ನಗು ನಗುತ್ತಲೇ ಸ್ವಾಮೀಜಿ ಜೊತೆ ಮಾತನಾಡಿದ್ರು. ಬಳಿಕ ವೈದ್ಯರಿಂದ ದೇವೇಗೌಡರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ್ರು.



