ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗಿದೆ. ಜೈಲರ್ ಚಿತ್ರದ ನರಸಿಂಹ ಪಾತ್ರದಲ್ಲಿ ಕೆಲವೇ ನಿಮಿಷ ಬಂದರೂ ಇಡೀ ಸಿನಿಮಾ ಆವರಿಸಿಕೊಂಡಿದ್ದ ಶಿವಣ್ಣ, ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಹೇಗೆ ನಟಿಸಿದ್ಧಾರೆ..? 125ಕ್ಕೂ ಹೆಚ್ಚು ಸಿನಿಮಾ ಮಾಡಿರುವ ನಟನೊಬ್ಬ ಹೇಗೆ ನಟಿಸಿದ್ದಾನೆ ಎಂದು ಕೇಳುವುದೇ ಮೂರ್ಖತನದ ಪ್ರಶ್ನೆ ಎನಿಸಬಹುದು. ಆದರೆ ಪ್ರತಿಯೊಬ್ಬ ಕಲಾವಿದನಿಗೂ ಪ್ರತಿ ಸಿನಿಮಾದ ಪಾತ್ರವೂ ಹೊಸದೇ. ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ತಮ್ಮ. ಶಿವಣ್ಣ, ಧನುಷ್ ಪಾತ್ರಕ್ಕೆ ಅಣ್ಣ.
ಕ್ಯಾಪ್ಟನ್ ಮಿಲ್ಲರ್ ಸ್ಟೋರಿ : ಒಂದೆಡೆ ಬ್ರಿಟಿಷರ ವಿರುದ್ಧ, ಇನ್ನೊಂದೆಡೆ ನಮ್ಮದೇ ದೇಶದ ಮೇಲ್ವರ್ಗದವರ ವಿರುದ್ಧ ಬಂಡಾಯ ಏಳುವ ಈಸಾ ಅಲಿಯಾಸ್ ಕ್ಯಾಪ್ಟನ್ ಮಿಲ್ಲರ್ ಎಂಬ ವೀರನ ಕಥೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿದೆ. ಸಾಮಾನ್ಯ ಹಳ್ಳಿಯ ಯುವಕನಾಗಿದ್ದವನು ಬ್ರಿಟಿಷ್ ಸರ್ಕಾರದ ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆಗುವ ಕನಸು ಕಾಣುತ್ತಾನೆ. ಆದರೆ ಸೈನ್ಯಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆತನ ನಂಬಿಕೆಗಳಿಗೆ ಪೆಟ್ಟು ಬೀಳುತ್ತದೆ. ಆಗ ಆತ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿಯುತ್ತಾನೆ. . ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ಧನುಷ್ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಳ್ಳುವ ದೃಶ್ಯ ಗಮನಾರ್ಹವಾಗಿದೆ. ಅಣ್ಣ-ತಮ್ಮನ ಪಾತ್ರದಲ್ಲಿ ಅವರಿಬ್ಬರು ನಟಿಸಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡುತ್ತಿರುವ ಅಣ್ಣ ಹಾಗೂ ಬ್ರಿಟಿಷರ ಆರ್ಮಿ ಸೇರಲು ಹೊರಟಿರುವ ತಮ್ಮನ ನಡುವೆ ಬರುವ ಸಂಭಾಷಣೆಗಳಿಗೆ ಒಂದು ತೂಕವಿವೆ. ಆದರೆ ಆ ಪಾತ್ರಕ್ಕೆ ನಿರೀಕ್ಷಿತ ಮಟ್ಟದ ತೂಕ ಸಿಕ್ಕಿಲ್ಲ. ಎರಡು ಮೂರು ದೃಶ್ಯಗಳಲ್ಲಿ ಮಾತ್ರ ಶಿವಣ್ಣ ಕಾಣಿಸಿಕೊಳ್ಳುವ ಶಿವಣ್ಣ, ಧನುಷ್ ಕಡುಕಷ್ಟ ಕಾಲಕ್ಕೆ ಆಪದ್ಭಾವನಂತೆ ಬರುವುದು ಸವಕಲು ದೃಶ್ಯದಂತೆ ಚಿತ್ರಿತವಾಗಿದೆ. ಇಂತಹ ದೃಶ್ಯಗಳನ್ನು ಪ್ರೇಕ್ಷಕರು ನೂರಾರು ಸಿನಿಮಾಗಳಲ್ಲಿ ನೋಡಿರುತ್ತಾರೆ. ಆದರೆ ಇದ್ದುದರಲ್ಲಿ ಆ ದೃಶ್ಯವೇ ಚಿತ್ರದ ಹೈಲೈಟ್ ಎನ್ನಬಹುದು.
ಕ್ಯಾಪ್ಟನ್ ಮಿಲ್ಲರ್ 20 ಕೋಟಿ : ನೆರೆಯ ತಮಿಳುನಾಡು ರಾಜ್ಯದಲ್ಲಿ ಸಂಕ್ರಾಂತಿ ದೊಡ್ಡ ಹಬ್ಬ. ಅಲ್ಲಿ ಸಂಕ್ರಾಂತಿ ಹಬ್ಬವನ್ನು ಪೊಂಗಲ್ ಎಂದು ಆಚರಣೆ ಮಾಡಲಾಗುತ್ತದೆ. ಹೀಗೆ ಸಂಕ್ರಾಂತಿ – ಪೊಂಗಲ್ ಸಂಭ್ರಮದ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ, ಧನುಷ್ ನಟಸಿರುವ ‘ಕ್ಯಾಪ್ಟನ್ ಮಿಲ್ಲರ್’ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆಗಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಮೊದಲ ದಿನವೇ ಭರ್ಜರಿ ಸದ್ದು ಮಾಡಿದೆ. ‘ಕ್ಯಾಪ್ಟನ್ ಮಿಲ್ಲರ್’ ಈಗ ಮೊದಲನೇ ದಿನವೇ ಸುಮಾರು 20 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗಿದೆ.
ಪುಟ್ಟ ಪಾತ್ರಕ್ಕೆ ಮತ್ತೆ ಮಾರು ಹೋದ ತಮಿಳಿಗರು : ಜೈಲರ್ ಚಿತ್ರದಲ್ಲಿ ಶಿವಣ್ಣನ ಅಭಿನಯಕ್ಕೆ ಮಾರು ಹೋಗಿದ್ದ ತಮಿಳು ಪ್ರೇಕ್ಷಕರು ಈ ಪುಟ್ಟ ಪಾತ್ರಕ್ಕೂ ಓಹೋ ಎನ್ನುತ್ತಿದ್ಧಾರೆ. ಶಿವಣ್ಣನ ಎಂಟ್ರಿಯಾದಾಗ ವಿಷಲ್ʻಗಳು ಬೀಳುತ್ತವೆ. ಹಾಗೆ ವಿಷಲ್ ಹೊಡೆಯುವವರು ಕನ್ನಡಿಗರೇನಲ್ಲ, ತಮಿಳು ಪ್ರೇಕ್ಷಕರೇ. ವಿಶೇಷವೆಂದರೆ ತಮಿಳುನಾಡಿನಲ್ಲಿ ಕೂಡಾ ತಮಿಳಿಗರು ಚಪ್ಪಾಳೆ ತಟ್ಟಿದ್ದಾರೆ.
ನೆನಪಾಗುತ್ತಾರೆ ಪುನೀತ್ ರಾಜಕುಮಾರ್ : ಕನ್ನಡ ಸಿನಿಮಾಗಳಲ್ಲಿ ಯಾವುದೇ ಚಿತ್ರ ರಿಲೀಸ್ ಆದರೂ ಪುನೀತ್ ಅವರನ್ನು ನೆನಪಿಸಿಕೊಳ್ಳುವುದು ಸಾಮಾನ್ಯ. ಎಲ್ಲೋ ಕೆಲವರು ಪುನೀತ್ ಅವರನ್ನು ಮರೆತದ್ದೂ ಇದೆ. ಆದರೆ ಈ ಬಾರಿ ತಮಿಳು ಸಿನಿಮಾ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲೂ ಪುನೀತ್ ಅವರ ಫೋಟೋ ಹಾಕಿ ನೆನಪಿಸಿಕೊಂಡು ಮುಂದುವರೆಯುತ್ತೆ ಕ್ಯಾಪ್ಟನ್ ಮಿಲ್ಲರ್.



